ಭರವಸೆ ಹುಸಿಗೊಳಿಸಿದ ಜೆಡಿಎಸ್‌, ಗೋವಿಂದ ರಾಜುಗೆ ಪರಿಷತ್‌ ಟಿಕೆಟ್‌!

ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಜೆಡಿಎಸ್‌ ಒಳಗೆ ಭಿನ್ನಭಿಪ್ರಾಯ ಬುಸುಗುಡುತ್ತಿದೆ. ಉದ್ಯಮಿ ಗೋವಿಂದ ರಾಜ್‌ ಅವರಿಗೆ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಟಿಕೆಟ್‌ ನೀಡಲಾಗಿದ್ದು, ರಾಜ್ಯಸಭಾ ಸ್ಥಾನ ತೊರೆದಿದ್ದ ಕುಪೇಂದ್ರ ರೆಡ್ಡಿಯವರು ಜೆಡಿಎಸ್‌ ವರಿಷ್ಟರ ಮೇಲೆ ಅಸಮಧಾನಗೊಂಡಿದ್ದಾರೆ.

ಕೋಲಾರ ಮೂಲದ ಉದ್ಯಮಿ ಗೋವಿಂದ ರಾಜು, ನಿನ್ನೆ ತಡರಾತ್ರಿ ಜೆಡಿಎಸ್ ಹೆಚ್‌.ಡಿ ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಮಾತುಕತೆ ನಡೆಸಿದ ಅವರು ಟಿಕೆಟ್ ಪಡೆದುಕೊಂಡಿದ್ದಾರೆ. ಆದರೆ, ಪರಿಷತ್‌ ಆಕಾಂಕ್ಷಿಗಳಾಗಿದ್ದ ಕುಪೇಂದ್ರ ರೆಡ್ಡಿ ಹಾಗೂ ಶರವಣಗೆ ಅವಕಾಶ ತಪ್ಪಿದೆ.

ನಾವು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುತ್ತಿದ್ದೇವೆ. ಹೀಗಾಗಿ ಕೋಲಾರ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಗೋವಿಂದ ರಾಜು ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಚ್​​ಡಿ ದೇವೇಗೌಡರಿಗಾಗಿ ರಾಜ್ಯಸಭೆ ಸ್ಥಾನವನ್ನು ಕುಪೇಂದ್ರ ರೆಡ್ಡಿ ಬಿಟ್ಟುಕೊಟ್ಟಿದ್ದರು. ಈ ವೇಳೆ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಈಗ ಭರವಸೆ ಹುಸಿಯಾಗಿದೆ. ಜೆಡಿಎಸ್ ವರಿಷ್ಠರ ನಡೆಯಿಂದ ಕುಪೇಂದ್ರ ರೆಡ್ಡಿ ಅಸಮಾಧಾನಗೊಂಡಿದ್ದಾರೆ.

kupendra reddy

‘ತಮ್ಮ ರಾಜ್ಯಸಭೆ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೇನೆ. ಆದರೆ ತನಗೆ ಪರಿಷತ್ ಟಿಕೇಟ್ ಕೊಟ್ಟಿಲ್ಲ,’ ಎಂದು ಕಿಡಿಕಾರಿದ್ದಾರೆ. ಇನ್ನು, ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿ ಶರವಣ ಕೂಡ ಸಿಟ್ಟಾಗಿದ್ದಾರೆ.

ರಾಜ್ಯಸಭಾ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಪೇಂದ್ರ ರೆಡ್ಡಿ, “ನಮ್ಮ ರಾಜ್ಯದ ಧ್ವನಿಯಾಗಿ ದೇವೇಗೌಡರು ರಾಜ್ಯಸಭೆಗೆ ಹೊಗಬೇಕೆಂಬುದು ನನ್ನ ಆಶಯ. ಒಂದು ವೇಳೆ ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದರೆ, ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ” ಎಂದು ಕುಪೇಂದ್ರ ರೆಡ್ಡಿ ಹೇಳಿದ್ದರು. ಅಂತೆಯೇ ಅವರು ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights