ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 4,313 ಕೋಟಿ ರೂ ಜಿಎಸ್ಟಿ ಪರಿಹಾರ ಬಿಡುಗಡೆ!
ಸರಕು ಮತ್ತು ಸೇವಾ ತೆರಿಗೆ (ಜಿಎಸ್’ಟಿ) ಕಾಯ್ದೆಯ ಅನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 4,313 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. 2018ರ ಡಿಸೆಂಬರ್ನಿಂದ 2020ರ ಫೆಬ್ರವರಿ ತಿಂಗಳವರೆಗೆ ಮೂರು ತಿಂಗಳ ಆದಾಯ ನಷ್ಟದ ಪರಿಹಾರವಾಗಿ ಒಟ್ಟು 4,313 ಕೋಟಿ ರೂಗಳನ್ನು ನೀಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಕ್ಕೆ ಬಿಡುಗಡೆ ಮಾಡಲಾಗಿರುವ ಒಟ್ಟು ಪರಿಹಾರ ಮೊತ್ತಕ್ಕಿಂತ ರಾಜ್ಯದ ನಷ್ಟ ಹೆಚ್ಚಿದ್ದರೆ, ನಂತರದ ಹಂತದಲ್ಲಿ ರಾಜ್ಯದ ಆದಾಯ ಕಾರ್ಯಕ್ಷಮತೆಯನ್ನು ಸುಧಾರಣೆಗೆ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
2017ರ ಜು.1ರಂದು ಜಾರಿಯಾದ ಜಿಎಸ್’ಟಿ ಕಾಯ್ದೆಯಂತೆ 5 ವರ್ಷಗಳ ಕಾಲ ಕೇಂದ್ರವು ರಾಜ್ಯಗಳಿಗೆ ಆದಾಯ ನಷ್ಟದ ಪರಿಹಾರವನ್ನು ನೀಡಲಿದೆ. ಲಾಕ್’ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ಇದು ನೆರವಾಗಲಿದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರದ ಪರಿಹಾರ ಬಿಡುಗಡೆಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಗೃಹ ಸಚಿವ ಹಾಗೂ ಜಿಎಸ್ಟಿ ಸಮಿತಿ ಸದಸ್ಯ ಬಸವರಾಜ ಬೊಮ್ಮಾಯಿ, ಕಳೆದ ಫೆಬ್ರವರಿವರೆಗಿನ ಮೂರು ತಿಂಗಳ ಅವಧಿಯ ಜಿಎಸ್ಟಿ ಬಾಕಿ ಬಿಡುಗಡೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದ್ದರು. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಜಿಎಸ್ಟಿ ಪರಿಹಾರ ಮೊತ್ತ ರೂ.1800 ಕೋಟಿ ಬರಬೇಕಾಗಿದೆ. ಅದು ಮುಂದಿನ ಜುಲೈ ತಿಂಗಳಿನಲ್ಲಿ ಬರಬಹುದು ಎಂದು ತಿಳಿಸಿದ್ದಾರೆ.
ಜಿಎಸ್ಟಿ ಹೊರತಪಡಿಸಿ, 15ನೇ ಹಣಕಾಸು ಆಯೋಗವು ಈ ಹಿಂದೆ ಶಿಫಾರಸು ಮಾಡಿದ್ದ ವಿಶೇಷ ಅನುದಾನದಲ್ಲಿಯೂ ಕೂಡ 5,495 ಕೋಟಿ ರೂ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದು, ರಾಜ್ಯಸರ್ಕಾರ ಹಣ ಬಿಡುಗಡೆ ನಿರೀಕ್ಷೆಯಲ್ಲಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

