ರಾಜ್ಯದ ವಿವಿಧೆಡೆ ಗುಡುಗು, ಗಾಳಿ ಸಹಿತ ಭಾರೀ ಮಳೆ : ಸಿಡಿಲು ಬಡಿದು 21 ಕುರಿ ಸಾವು!

ರಾಜ್ಯದ  ವಿವಿಧಡೆ ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಿದ್ದು , ಸಿಡಿಲು ಬಡಿದು ಮೂಖ ಪ್ರಾಣಿಗಳು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಹೌದು…. ಗದಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಭಾರೀ ಮಳೆಯಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು 21 ಕುರಿ, ಒಂದು ಎತ್ತು ಸಾವನ್ನಪ್ಪಿದೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿ ಹಾನಿಯಾಗಿದೆ. ದೇವದುರ್ಗ ತಾಲೂಕಿನ ಕುರ್ಲೇರ ದೊಡ್ಡಿಯಲ್ಲಿ ಮಧ್ಯಾಹ್ನದ ವೇಳೆ ಕುರಿಗಳನ್ನ ಮೇಯಿಸಲು ಮಲ್ಲಯ್ಯ ಎಂಬವರು ಹೋದಾಗ ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಹನುಮಂತ ಎಂಬವರಿಗೆ ಸೇರಿದ 11 ಕುರಿಗಳು ಮಾನ್ವಿ ತಾಲೂಕಿನ ಕಾತರ್ಕಿಯಲ್ಲಿ ಕೊರವಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾಗಿವೆ.

ಇನ್ನೂ ಲಿಂಗಸುಗೂರಿನ ಮುದಗಲ್ ಸಮೀಪದ ಕೆ.ಮರಿಯಮ್ಮನಹಳ್ಳಿಯಲ್ಲಿ ಜಮೀನಿನಲ್ಲಿ ಬೇವಿನ ಮರದ ಕೆಳಗೆ ಕಟ್ಟಿ ಹಾಕಲಾಗಿದ್ದ ಪ್ರಕಾಶಪ್ಪ ಎನ್ನುವ ರೈತನಿಗೆ ಸೇರಿದ್ದ ಎರಡು ಎತ್ತುಗಳಲ್ಲಿ ಒಂದು ಎತ್ತು ಸಿಡಿಲು ಬಡಿದು ಸಾವನ್ನಪ್ಪಿದೆ. ಎತ್ತು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆಯಾಗಿದ್ದು, ಮಳೆಯ ವೇಳೆ ಸಿಂಧನೂರಿನ ಬಾದರ್ಲಿಯಲ್ಲಿ ಸಿಡಿಲು ಬಡಿದು ತೆಂಗಿನ ಗಿಡಕ್ಕೆ ಬೆಂಕಿ ಬಿದಿದೆ.

ಗದಗದಲ್ಲೂ ಆಲಿಕಲ್ಲು ಮಳೆಯ ಆರ್ಭಟಕ್ಕೆ ಜನ ನಲುಗಿಹೋಗಿದ್ದು, ಸತತ ಒಂದು ಗಂಟೆಕಾಲ ಆಲಿಕಲ್ಲು, ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣ ಅಬ್ಬರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆ ಕೆಲ ಪ್ರದೇಶಗಳಲ್ಲಿ ಮಳೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights