ರಾಷ್ಟ್ರೀಯತೆಯನ್ನು ಹಿಂದಿ ಜೊತೆಗೆ ಗುರುತಿಸುವುದು ನಾಚಿಕೆಗೇಡು: ಸಂಸದೆ ಕನಿಮೋಳಿ

ಹಿಂದಿ ಭಾಷೆಯನ್ನು ರಾಷ್ಟ್ರೀಯತೆ ಜತೆ ತಳುಕು ಹಾಕುವುದು. ರಾಷ್ಟ್ರೀಯತೆಯನ್ನು ಹಿಂದಿ ಭಾಷೆಯಿಂದ ಅಳೆಯುವುದು ನಾಚಿಕೆಗೇಡಿನ ವಿಷಯ ಎಂದು ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಹೇಳಿದ್ದಾರೆ.

“ಭಾನುವಾರ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಮಹಿಳಾ ಅಧಿಕಾರಿಯೊಬ್ಬರಿಗೆ ತಮಿಳು ಅಥವಾ ಇಂಗ್ಲೀಷಿನಲ್ಲಿ ಮಾತನಾಡಿ, ನನಗೆ ಹಿಂದಿ ಗೊತ್ತಿಲ್ಲ’ ಎಂದು ಹೇಳಿದೆ. ಅದಕ್ಕೆ ಅವರು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದರು. ಭಾರತೀಯರಾಗಿದ್ದ ಮಾತ್ರಕ್ಕೆ ಎಲ್ಲರಿಗೂ ಹಿಂದಿ ಹೇಗೆ ಬರಲು ಸಾಧ್ಯ ಎಂಬುದನ್ನು ತಿಳಿಯಬಯಸುತ್ತೇನೆ” ಎಂದು ಕನಿಮೋಳಿ ಟ್ವೀಟ್‌ ಮಾಡಿದ್ದಾರೆ.

ನಾವು ಭಾರತೀಯರಾಗಿರಲು, ನಾವು ಭಾರತೀಯರು ಎಂದು ಸಾಬೀತು ಮಾಡಲು ಹಿಂದಿ ಕಲಿಯಬೇಕಾಗಿಲ್ಲ. ಹಿಂದಿ ಬರುವವರು ಮಾತ್ರವೇ ಭಾರತೀಯರಲ್ಲ ಎಂದು ಕನಿಮೋಳಿ ಹೇಳಿದ್ದಾರೆ.

ಇಲ್ಲಿ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ಆದರೆ ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು ಎಂದು ಕನಿಮೋಳಿ ಹೇಳಿದ್ದಾರೆ.

ನಾನು ಶಾಲೆಯಲ್ಲಿ ಹಿಂದಿ ಕಲಿಯಲೇ ಇಲ್ಲ, ನಾನು ಯಾರೊಬ್ಬರಿಗೂ ಹಿಂದಿ ತರ್ಜುಮೆ ಮಾಡಿಕೊಟ್ಟಿಲ್ಲ. ಇಂಗ್ಲಿಷ್ ತರ್ಜುಮೆ ಕೂಡಾ ಮಾಡಿಲ್ಲ. ಆ ಭಾಷೆ ಗೊತ್ತಿಲ್ಲದೆ ಅನುವಾದ ಹೇಗೆ ಸಾಧ್ಯ? ನಾನು ಶಾಲೆಯಲ್ಲಿ ತಮಿಳು ಮತ್ತು ಇಂಗ್ಲಿಷ್ ಮಾತ್ರ ಕಲಿತಿದ್ದೆ. ದೆಹಲಿಯಲ್ಲಿ ಹಲವು ವರ್ಷ ಇದ್ದರೂ ನನಗೆ ಹಿಂದಿ ಬರುವುದಿಲ್ಲ ಎಂದು ಕನಿಮೋಳಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ನನಗೆ ಹಿಂದಿ ಬರುವುದಿಲ್ಲ ಎಂದು ಹಲವಾರು ನಾಯಕರಿಗೆ ಗೊತ್ತು. ನನಗೆ ಅಥವಾ ಯಾರಿಗಾದರೂ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ವಿಷಯವಲ್ಲ. ಹಿಂದಿ ಕಲಿತರೆ ಮಾತ್ರ ಭಾರತೀಯ ಆಗುವುದು ಹೇಗೆ ಎಂಬುದು ವಿಷಯ. ಹಿಂದಿ ಮಾತನಾಡುವುದು, ಒಂದೇ ವಿಚಾರಧಾರೆ, ಒಂದೇ ಧರ್ಮವನ್ನು ಪಾಲಿಸಿದರೆ ಮಾತ್ರ ಭಾರತೀಯ ಎಂದು ಪರಿಗಣಿಸುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕನಿಮೋಳಿ ಹೇಳಿದ್ದಾರೆ.


Read Also:  ಸಂಸದೆಯನ್ನು ನೀವು ಭಾರತೀಯರೇ ಎಂದ CISF ಅಧಿಕಾರಿಗಳು: ಹಿಂದಿ ದಬ್ಬಾಳಿಕೆಯ ವಿರುದ್ಧ ಹೆಚ್‌ಡಿಕೆ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights