ಲಾಕ್‌ಡೌನ್ ಮಾಡಿಯೂ ವಿಫಲವಾದ ಏಕೈಕ ದೇಶ ಭಾರತ: ರಾಹುಲ್ ಗಾಂಧಿ

ಕೊರೊನಾ ವೈರಸ್‌ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಸಡಿಲ ಮಾಡಿರುವ ಏಕೈಕ ದೇಶ ಭಾರತ ಎಂದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿದ್ದ ನಾಲ್ಕು ಹಂತದ ಲಾಕ್‌ಡೌನ್ ಸಂಪೂರ್ಣ ವಿಫಲವಾಗಿದೆ. ಜಗತ್ತಿನಲ್ಲಿಯೇ ಸೋಂಕು ‌ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಏಕೈಕ ದೇಶ ಭಾರತ. ಇದೇ ಕಾರಣಕ್ಕೆ ಆರಂಭದಲ್ಲಿ ಮುಂಚೂಣಿಯಲ್ಲಿದ್ದ ಪ್ರಧಾನಿ ಮೋದಿ, ಈಗ ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆಯೇ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊವಿಡ್-19 ಲಾಕ್‌ಡೌನ್ ವಿಫಲವಾಗಿದೆ. ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವಾಗ ಲಾಕ್‌ಡೌನ್ ತೆರವುಗೊಳಿಸಿರುವ ಏಕೈಕ ದೇಶ ಭಾರತ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ವಿಫಲವಾದ ಲಾಕ್‌ಡೌನ್ ಫಲಿತಾಂಶವನ್ನು ಭಾರತ ಎದುರಿಸುತ್ತಿದೆ. 21 ದಿನಗಳಲ್ಲಿ ಕೊವಿಡ್ -19 ರೋಗವನ್ನು ಬಡಿದೋಡಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಆದರೆ 60 ದಿನಗಳ ನಂತರವೂ ಸೋಂಕು ಹೆಚ್ಚುತ್ತಿದೆ. ರೋಗವು ಹೆಚ್ಚಾಗುತ್ತಿರುವಾಗ ಎನ್‌ಡಿಎ ಸರ್ಕಾರ ಏನು ಮಾಡಲು ಯೋಜಿಸುತ್ತಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ವಿಫಲವಾಗಿದೆ‌.‌ ವಿಫಲವಾದ ಲಾಕ್‌ಡೌನ್ ಫಲಿತಾಂಶವನ್ನು ಭಾರತ ಈಗ ಎದುರಿಸುತ್ತಿದೆ. ಲಾಕ್‌ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು? ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನಿಂದ ನಯಾ ಪೈಸೆ ಪ್ರಯೋಜನವಿಲ್ಲ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights