ಡೋಕ್ಲಾಮ್ ಘರ್ಷಣೆಯ ನಂತರ ಮತ್ತೆ ಮುಖಾಮುಖಿಯಾಗುತ್ತಿವೆ ಭಾರತ-ಚೀನಾ ಸೇನೆ

ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ವಿವಾದಿತ ಪ್ರದೇಶಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿ ಎದುರಾಗಿದ್ದರು. ಅವರ ಈ ಘರ್ಷಣೆಯು 2017 ರಲ್ಲಿ ಡೋಕ್ಲಾಮ್ ಘಟನೆಯ ನಂತರದ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಬಹುದು ಎಂದು ಸೂಚಿಸುತ್ತಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸುಮಾರು 5,000 ಸೈನಿಕರನ್ನು ಪಾಂಗೊಂಗ್ ತ್ಸೋ ಸರೋವರದ ಉತ್ತರ ದಡದಲ್ಲಿರುವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಬಳಿ ನಿಯೋಜಿಸಿದೆ. ಈ ಬೆಳವಣಿಗೆಗಳ ನಂತರ ಭಾರತವೂ ಹೆಚ್ಚುವರಿ ಸೈನ್ಯವನ್ನು ಪೂರ್ವ ಲಡಾಖ್‌ಗೆ ಕರೆದೊಯ್ದಿದೆ.

ಭಾರತ-ಚೀನಾ ವಿವಾದಿತ ಗಡಿಯುದ್ದಕ್ಕೂ ಉದ್ವಿಗ್ನತೆಯ ಉಲ್ಬಣವನ್ನು ಲಾಭ ಮಾಡಿಕೊಳ್ಳಲು ಪಾಕಿಸ್ತಾನ ಸೇನೆಯು ಯತ್ನಿಸಬಹುದು. ಒಂದು ವೇಳೆ ಅಂತಹ ಆಕ್ರಮಣವನ್ನು ಪಾಕಿಸ್ತಾನ ಮಾಡಿದ್ದೇ ಆದಲ್ಲಿ ಅದನ್ನೂ ಎದುರಿಸಲು ಕಾಶ್ಮೀರ ಗಡಿಯಲ್ಲಿಯೂ ಭಾರತೀಯ ಸೇನೆ ಜಾಗರೂಕತೆಯನ್ನು ಹೆಚ್ಚಿಸಿದೆ.

ಭಾರತ ಮತ್ತು ಚೀನಾದ ಆಡಳಿತಾಧಿಕಾರಿಗಳು ಹಾಗೂ ಮಿಲಿಟರಿ ನಾಯಕರು ಸಂಪರ್ಕದಲ್ಲಿದ್ದರೂ ಸಹ, ಪಾಂಗೊಂಗ್ ತ್ಸೋ ಸರೋವರದ ಉತ್ತರದ ದಂಡೆಯಲ್ಲಿರುವ ಗಡಿಯುದ್ದಕ್ಕೂ ಭಾರತೀಯ ಸೇನೆ ಮತ್ತು ಚೀನಾದ ಪಿಎಲ್‌ಎ ಸೇನೆ ನಿಯೋಜಿಸಿರುವುದು ಸೋಮವಾರವೂ ಮುಂದುವರೆದಿದೆ. ಆದರೆ, ಮೇ 5 ಮತ್ತು 6 ರಂದು ನಡೆದ ಘಟನೆಗಳ ನಂತರ ಯಾವುದೇ ಹೊಸ ಘಟನೆಗಳು ವರದಿಯಾಗಿಲ್ಲ.

ಚೀನಾದ ಸೈನಿಕರು ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯನ್ನು ಉಲ್ಲಂಘಿಸಿ ಭಾರತ ಪ್ರತಿಪಾದಿತ ಪ್ರದೇಶಗಳಿಗೆ ಊರು ಬಾರಿ ಪ್ರವೇಶಿಸಿದ್ದರು. ಅವರ ಬೆಂಬಲಕ್ಕಾಗಿ ಪಿಎಲ್‌ಎ ಸುಮಾರು 5000 ಸೈನಿಕರನ್ನು ಇತ್ತೀಚೆಗೆ ಚೀನಾ ಹಕ್ಕು ಸಾಧಿಸಿದ ಪ್ರದೇಶದೊಳಗೆ ಗಾಲ್ವಾನ್ ಕಣಿವೆಯಲ್ಲಿ ದೊಡ್ಡ ಶಿಬಿರದಲ್ಲಿ ನಿಯೋಜಿಸಿತ್ತು. ಚೀನಾದ ಪಿಎಲ್‌ಎ ನಿಯೋಜನೆಗೆ ಪ್ರತಿಯಾಗಿ ಭಾರತೀಯ ಸೇನೆಯು ಸೈನಿಕರನ್ನು “ಸಾಕಷ್ಟು ಸಂಖ್ಯೆಯಲ್ಲಿ” ನಿಯೋಜಿಸಿದೆ ಎಂದು ನವದೆಹಲಿಯ ಮೂಲಗಳು ತಿಳಿಸಿವೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

“ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಬಲವು ನಮ್ಮ ಎದುರಾಳಿಗಿಂತ ಉತ್ತಮವಾಗಿದೆ” ಎಂದು ಹೆಸರು ಹೇಳಲಿಚ್ಚಿಸದ ಉನ್ನತ ಮಿಲಿಟರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇಂಡಿಯನ್ ಪೋಸ್ಟ್ ಕೆಎಂ 120 ಸೇರಿದಂತೆ ಗಾಲ್ವಾನ್ ಕಣಿವೆಯ ಡಾರ್ಬುಕ್-ಶಾಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಯ ಉದ್ದಕ್ಕೂ ಹಲವಾರು ಪ್ರಮುಖ ಪ್ರದೇಶಗಳ ಬಳಿ ಚೀನಾದ ಸೈನಿಕರು ಇರುವುದು ಭಾರತೀಯ ಮಿಲಿಟರಿಗೆ ದೊಡ್ಡ ಕಳವಳವನ್ನು ಉಂಟುಮಾಡಿದೆ.

“ಸದ್ಯದ ಸ್ಥಿತಿ ಗಂಭೀರವಾಗಿದ್ದು, ಇದು ಸಾಮಾನ್ಯ ರೀತಿಯ ಉಲ್ಲಂಘನೆಯಲ್ಲ” ಎಂದು ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ಪಿಟಿಐಗೆ ತಿಳಿಸಿದ್ದಾರೆ.ಈ ಪ್ರದೇಶದಲ್ಲಿ ಎರಡು ಕಡೆಯವರ ನಡುವೆ ಯಾವುದೇ ವಿವಾದಗಳಿಲ್ಲದ ಕಾರಣ ಗಾಲ್ವಾನ್‌ನಂತಹ ಪ್ರದೇಶಗಳ ಮೇಲೆ ಅತಿಕ್ರಮಣಕ್ಕೆ ಚೀನಾ ಚಿಂತಿಸುತ್ತಿದೆ ಎಂದು ಅವರು ವಿಶೇಷವಾಗಿ ಒತ್ತಿ ಹೇಳಿದರು.

ಪಶ್ಚಿಮ ಭೂತಾನ್‌ನ ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ ಜೂನ್-ಆಗಸ್ಟ್ 2017 ರಲ್ಲಿ ಸಂಭವಿಸಿದಂತೆಯೇ ಇದು ಇನ್ನೂ ಮುಖಾಮುಖಿಯಾಗಿಲ್ಲ, ಭಾರತೀಯ ಮತ್ತು ಚೀನಾದ ಸೈನಿಕರು ಸುಮಾರು 72 ದಿನಗಳ ಕಾಲ ಫೇಸ್‌ ಟು ಫೇಸ್‌ ಪರಿಸ್ಥಿತಿಯಲ್ಲಿ ತೊಡಗಿದ್ದಾರೆ.

ಪಾಂಗೊಂಗ್ ತ್ಸೊ, ಡೆಮ್‌ಚಾಕ್ ಮತ್ತು ದೌಲತ್ ಬೇಗ್ ಓಲ್ಡಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಎರಡೂ ಕಡೆಯವರು ಮುಖಾಮುಖಿಯಾಗಿ ನಿಂತಿದ್ದಾರೆ. ಎರಡು ಸೇನೆಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪರಿಹರಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಮೂಲಗಳು ತಿಳಿಸಿವೆ.

ನೆರೆಯ ದೇಶದ ಮಿಲಿಟರಿ ಮತ್ತು ಜನಪ್ರತಿನಿಧಿಗಳ ಯುದ್ಧಮಾಡುವ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಭಾರತದ ನಿಯಂತ್ರಣ ರೇಖೆ (ಎಲ್‌ಒಸಿ)ಯ ಉದ್ದಕ್ಕೂ ಜಾಗರೂಕತೆಯನ್ನು ಹೆಚ್ಚಿಸಿದೆ.

“ಪಾಕಿಸ್ತಾನದ ವಿರುದ್ಧ ಯಾವುದೇ ದುಷ್ಕೃತ್ಯಕ್ಕೆ ಹೋದರೆ ಭಾರತಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು” ಎಂದು ನೆರೆಯ ದೇಶದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಹೇಳಿರುವುದಾಗಿ ಪಾಕಿಸ್ತಾನದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಚೀನಾದ ಕಡೆಯವರು ವಿಶೇಷವಾಗಿ ಗಾಲ್ವಾನ್ ಕಣಿವೆಯಲ್ಲಿ ಕಳೆದ ಎರಡು ವಾರಗಳಲ್ಲಿ ಸುಮಾರು 100 ಡೇರೆಗಳನ್ನು ನಿರ್ಮಿಸಿದ್ದಾರೆ ಮತ್ತು ಬಂಕರ್‌ಗಳ ನಿರ್ಮಾಣಕ್ಕಾಗಿ ಭಾರೀ ಉಪಕರಣಗಳನ್ನು ತಂದಿದ್ದಾರೆ.

ಮೇ 5 ರ ಸಂಜೆ ಸುಮಾರು 250 ಚೀನೀ ಮತ್ತು ಭಾರತೀಯ ಸೈನಿಕರು ಹಿಂಸಾತ್ಮಕ ಘರ್ಷಣೆ ಮಾಡಿಕೊಂಡ ನಂತರ ಪೂರ್ವ ಲಡಾಕ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿತು, ಅದು ಮರುದಿನದವರೆಗೂ ಹಾಗೇ ಉಳಿದಿತ್ತು. ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಭಾರತೀಯ ಮತ್ತು ಚೀನಾದ ಸೈನಿಕರು ಗಾಯಗೊಂಡಿದ್ದಾರೆ.

ನಂತರ, ಸುಮಾರು 150 ಭಾರತೀಯ ಮತ್ತು ಚೀನಾದ ಮಿಲಿಟರಿ ಸಿಬ್ಬಂದಿಗಳು ಮೇ 9 ರಂದು ಸಿಕ್ಕಿಂ ಸೆಕ್ಟರ್‌ನ ನಕು ಲಾ ಪಾಸ್ ಬಳಿ ಮುಖಾಮುಖಿಯಲ್ಲಿ ತೊಡಗಿದ್ದರು. ಎರಡೂ ಕಡೆಯಿಂದ ಕನಿಷ್ಠ 10 ಸೈನಿಕರು ಗಾಯಗೊಂಡಿದ್ದಾರೆ.

ಚೀನಾದ ಮಿಲಿಟರಿಯಿಂದಾಗಿ ಭಾರತೀಯ ಸೈನಿಕರು ಸಾಮಾನ್ಯ ಗಸ್ತು ತಿರುಗಲು ಅಡ್ಡಿಯಾಗುತ್ತಿದೆ ಎಂದು ಕಳೆದ ವಾರ ಭಾರತ ಹೇಳಿದೆ. ಗಡಿ ನಿರ್ವಹಣೆಗೆ ಯಾವಾಗಲೂ ಅತ್ಯಂತ ಜವಾಬ್ದಾರಿಯುತ ಮಾರ್ಗವನ್ನು ಭಾರತ ತೆಗೆದುಕೊಂಡಿದೆ ಎಂದು ಪ್ರತಿಪಾದಿಸಿದೆ.

ಗಡಿ ಸಮಸ್ಯೆಯ ಅಂತಿಮ ನಿರ್ಣಯ ಬಾಕಿ ಇರುವುದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳುವುದು ಅಗತ್ಯ ಎಂದು ಎರಡೂ ಕಡೆಯವರು ಪ್ರತಿಪಾದಿಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಮರುಸಂಘಟಿಸಿರುವುದನ್ನು ಚೀನಾ ಟೀಕಿಸುತ್ತಿದೆ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿಯೂ ವಿಶೇಷವಾಗಿ ಟೀಕಿಸಿದೆ. ಲಡಾಖ್‌ನ ಹಲವಾರು ಭಾಗಗಳ ಮೇಲೆ ಚೀನಾ ಹಕ್ಕು ಸಾಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು 2018ರ ಏಪ್ರಿಲ್‌ನಲ್ಲಿ ಚೀನಾದ ವೂಹಾನ್‌ನಲ್ಲಿ ನಡೆದ ತಮ್ಮ ಮೊದಲ ಅನೌಪಚಾರಿಕ ಶೃಂಗಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಉಭಯ ನಾಯಕರು ತಮ್ಮ ಸೈನಿಕರಿಗೆ ಸಂವಹನಗಳನ್ನು ಬಲಪಡಿಸಲು “ಕಾರ್ಯತಂತ್ರದ ಮಾರ್ಗದರ್ಶನ” ನೀಡಲು ನಿರ್ಧರಿಸಿದರು ಇದರಿಂದ ಅವರು ವಿಶ್ವಾಸ ಮತ್ತು ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.

ಮೋದಿ ಮತ್ತು ಕ್ಸಿ ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೆನ್ನೈ ಬಳಿಯ ಮಾಮಲ್ಲಾಪುರಂನಲ್ಲಿ ನಡೆಸಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights