ಅಹಂಕಾರ ಮೆರೆಯುತ್ತಿರುವ ಟೊಯೋಟಾ; ಮತ್ತೆ 20 ಕಾರ್ಮಿಕರ ಅಮಾನತು!

ಕಂಪನಿಯನ್ನು ಲಾಕ್‌ಔಟ್‌ ಮಾಡುವುದಾಗಿ ಟೊಯೋಟಾ ಕಿರ್ಲೋಸ್ಕರ್ ಘೋಷಿಸಿದ್ದು, ಕಳೆದ 27 ದಿನಗಳಿಂದ ಟೊಯೋಟಾ ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆಯ ನಡುವೆಯೂ ನಿನ್ನೆ 20 ಕಾರ್ಮಿಕರನ್ನು ಅಮಾನತು  ಮಾಡಿರುವ ಕಂಪೆನಿಯು ಕಾರ್ಮಿಕರ ವಿರುದ್ದ ತನ್ನ ದರ್ಪವನ್ನು ಮೆರೆದಿದೆ.

ನಿನ್ನೆ ಕೂಡಾ ಸುಮಾರು 3500 ಕಾರ್ಮಿಕರು ಕಂಪೆನಿಯ ಮುಖ್ಯ ಗೇಟ್ ಮುಂಬಾಗ ಪ್ರತಿಭಟನೆ ನಡೆಸಿದ್ದು, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಪುಟ್ಟಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟ ನಿರತ ಕಾರ್ಮಿಕರಿಗೆ ತಮ್ಮ ಬೆಂಬಲ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮೀನಾಕ್ಷಿ ಸುಂದರಂ, “ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದು ಕಾರ್ಮಿಕ ಸಂಘದ ಕೆಲಸ. ಅಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದ ಕಾರ್ಮಿಕ ನಾಯಕರನ್ನು ಕೆಲಸದಿಂದ ಅಮಾನತು ಮಾಡುವುದು ವಿಷಾದನೀಯ. ಈ ಹೋರಾಟ ಕರ್ನಾಟಕ ರಾಜ್ಯದಾದ್ಯಂತ ವ್ಯಾಪಿಸಲಿದೆ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

“ಕಾರ್ಮಿಕರ ಶ್ರಮಕ್ಕೆ ತಕ್ಕಫಲ ನೀಡಲೇ ಬೇಕು, ಅನುಭವಿ ಕಾರ್ಮಿಕರನ್ನು ಹೊರಗಿಟ್ಟು ಕಂಪೆನಿ ಉತ್ತಮ ಉತ್ಪನ್ನ ನೀಡಲು ಸಾಧ್ಯವಿಲ್ಲ. ಕಾರ್ಮಿಕ ಸಂಘಟನೆಗಳ ಒಕ್ಕೂಟವಾದ ಎಅಖಿU ನ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು” ಎಂದು ಅವರು ಹೇಳಿದರು.

ರೈತ ಮುಖಂಡ ಪುಟ್ಟಸ್ವಾಮಿ ಮಾತನಾಡಿ, “ಆಡಳಿತ ಮಂಡಳಿಯ ಬೆರಳೆಣಿಕೆಯ ಅವಿವೇಕಿಗಳು ಕಂಪೆನಿಯ ದಾರಿ ತಪ್ಪಿಸುತ್ತಿದ್ದಾರೆ. ಕಾರ್ಮಿಕರ ಶಾಪದಿಂದ ನಿಮ್ಮ ಭವಿಷ್ಯ ನುಚ್ಚು ನೂರಾಗುತ್ತದೆ. ಸಮಸ್ಯೆ ಆದಷ್ಟು ಬೇಗ ಬಗೆಹರಿಸದಿದ್ದರೆ ಕಾರ್ಮಿಕರ ಕುಟುಂಬ ಈ ಹೋರಾಟಕ್ಕೆ ಕೈಜೋಡಿಸಲಿದ್ದಾರೆ” ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ ತಮ್ಮ ಮೇಲೆ ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ, ಕಂಪೆನಿಯು ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಆರೋಪಿಸಿ ಲಾಕೌಟ್ ಘೋಷಿಸಿತ್ತು.

ಈ ನಡುವೆ ರಾಜ್ಯ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್‌ಔಟ್‌‌ ತೆರವುಗೊಳಿಸಬೇಕೆಂದು ನವೆಂಬರ್‌ 18 ರಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.


ಇದನ್ನೂ ಓದಿ: ಕಂಪನಿ ಲಾಕೌಟ್ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ: ಟೊಯೊಟಾ ಕಾರ್ಮಿಕರ ಎಚ್ಚರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights