ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

ಬಿಡದಿಯ ಟೊಯೋಟಾ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ನಡೆಯುತ್ತಿರುವ ಸ್ಟೇಲ್‌ಮೇಟ್‌ಅನ್ನು ಪ್ರಪಂಚದ ಉತ್ಪಾದನಾ ಕ್ಷೇತ್ರದಲ್ಲಾಗುತ್ತಿರುವ, ಅದರಲ್ಲೂ ಆಟೋಮೊಬೈಲ್ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಚೌಕಟ್ಟಿನಲ್ಲಿ ನೋಡಬೇಕು. ಇಲ್ಲದಿದ್ದರೆ ನಿರ್ದಿಷ್ಟವಾದೊಂದು ದಿನ ಕಾರ್ಖಾನೆಯಲ್ಲಿ ನಡೆದೊಂದು ನಿರ್ದಿಷ್ಟ ಘಟನೆಯ ಸುತ್ತ ಕಳೆದುಹೋಗುವ ಸಾಧ್ಯತೆಯಿದೆ.

ಭಾರತದಲ್ಲಿ ಟಾಟಾ (ಟಾಟಾ ಮೋಟಾರ್ಸ್) ಹಾಗೂ ಬಿರ್ಲಾ (ಹಿಂದೂಸ್ತಾನ್ ಮೋಟಾರ್ಸ್)ರಂತಹ ದೊಡ್ಡ ಉದ್ದಿಮೆಪತಿಗಳು ಇದ್ದಾಗಲೂ ಆಟೋಮೊಬೈಲ್ ಕ್ಷೇತ್ರಕ್ಕೆ ಬಹಳ ಹಿಂದೆಯೇ ಲಗ್ಗೆಯಿಟ್ಟ ಜಪಾನ್ ಹಾಗೂ ದಕ್ಷಿಣ ಕೊರಿಯಾದ ಕಂಪೆನಿಗಳು ಬಹುತೇಕ ಏಕಸ್ವಾಮ್ಯ ಸಾಧಿಸಿವೆ. ಸರ್ಕಾರೀ ಸ್ವಾಮ್ಯದಲ್ಲಿ ಆರಂಭವಾದ ಮಾರುತಿ ಸಹಾ ಜಪಾನಿನ ಸುಜುಕಿ ಕೈಯ್ಯಲ್ಲೇ ಇದೆ. ಈ ಕಂಪೆನಿಗಳು ಕಾರ್ಮಿಕರನ್ನು ಮನುಷ್ಯರ ರೀತಿಯಲ್ಲದೇ ರೊಬೋಟ್‌ಗಳೆಂದು ಭಾವಿಸಿದ್ದಾರೆ. 1936ರಲ್ಲಿ ಪ್ರಸಿದ್ಧ ಚಿತ್ರ ನಿರ್ದೇಶಕ ಚಾರ್ಲಿ ಚಾಪ್ಲಿನ್ ನಿರ್ದೇಶಿಸಿದ ಮಾಡರ್ನ್ ಟೈಮ್ಸ್ ಚಲನಚಿತ್ರದಲ್ಲಿ ತೋರಿಸುವ ಸಂಗತಿಗಳು ಯಾವ ರೀತಿಯಲ್ಲೂ ಉತ್ಪ್ರೇಕ್ಷೆ ಅಲ್ಲ ಎಂಬುದು ಈ ಅಸೆಂಬ್ಲಿ ಲೈನ್ ಉದ್ದಿಮೆಯನ್ನು ನೋಡಿದರೆ ಮನವರಿಕೆಯಾಗುತ್ತದೆ.

ಆರಂಭದಲ್ಲಿ ಈ ಬಹುರಾಷ್ಟ್ರೀಯ ಕಂಪನಿಗಳು, ಸ್ಥಳಿಯರಿಗೆ ಉದ್ಯೋಗ ನಿಡುವುದಾಗಿಯೂ, ದೇಶದ ಅಭಿವೃದ್ಧಿಗೆ ಪೂರಕವಾಗುವುದಾಗಿಯೂ ಭರವಸೆ ನೀಡಿ ಸಬ್ಸಿಡಿಯಲ್ಲಿ ಜಾಗವನ್ನು ಪಡೆದು ಕಂಪನಿ ಆರಂಭಿಸುತ್ತಾರೆ. ಕಾಲ ಸಂದಂತೆ ಇವುಗಳನ್ನೆಲ್ಲಾ ಗಾಳಿಗೆ ತೂರಿ, ದೇಶದ ಕಾನೂನಿಗೂ ಬೆಲೆ ಕೊಡದೇ ತಮ್ಮದೇ ಸರ್ವಾಧಿಕಾರವನ್ನು ನಮ್ಮ ಮೇಲೆ ಚಲಾಯಿಸುತ್ತಾರೆ. ನಿಯಮಗಳನ್ನು ಕಠಿಣಗೊಳಿಸಿ ಸ್ಥಳೀಯ ಕಾರ್ಮಿಕರ ರಕ್ತವನ್ನು ಜಿಗಣೆಗಳಂತೆ ಹೀರಿ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದನ್ನ ಪ್ರತಿಭಟಿಸಿದರೆ ಅವರನ್ನು ಕೆಲಸದಿಂದ ತೆಗೆಯುತ್ತಾರೆ. ಯೂನಿಯನ್ ಕಟ್ಟಿಕೊಳ್ಳದಿದ್ದರೆ ಕಾರ್ಮಿಕರು ಒಂದೋ ರೋಬೋಟ್‌ಗಳು ಅಥವಾ ಜೀತದಾಳುಗಳಾಗಿರುತ್ತಾರೆ. ಯೂನಿಯನ್ ಕಟ್ಟಿಕೊಳ್ಳಲೇ ಸಾಧ್ಯವಾಗದಂತೆ ಕಂಪೆನಿಯು ಸಾಧ್ಯವಿರುವ ಎಲ್ಲಾ ದಾರಿಗಳನ್ನು ಹುಡುಕುತ್ತದೆ.

ಇದನ್ನೂ ಓದಿ: ಲಾಕ್‌ಔಟ್‌ ಆಗಲಿದೆ ಟೊಯೊಟಾ ಕಾರ್‌ ಕಂಪನಿ? 3,500 ಕಾರ್ಮಿಕರಿಂದ ಆಹೋರಾತ್ರಿ ಪ್ರತಿಭಟನೆ!

ಕಾರ್ಮಿಕರ ಮೇಲೆ ನಡೆಯುವ ಶೋಷಣೆ, ದಬ್ಬಾಳಿಕೆಗಳು ಅವ್ಯಾಹತವೂ ಅಮಾನವೀಯವೂ ಆಗಿರುತ್ತವೆ. ಅದನ್ನು ’ನಾರ್ಮಲ್ ಎಂದು ಭಾವಿಸಬೇಕೆಂದು ಕಂಪೆನಿಯು ’ಸಹಜ’ವಾಗಿ ಭಾವಿಸುತ್ತದೆ. ಹಾಗಾಗಿ ಕಾರ್ಮಿಕರು ಆಗಾಗ್ಗೆ ತೋರಿಸುವ ಸಿಟ್ಟು ’ಅಸಹಜ’ವೆಂದು ಕಾಣುತ್ತದೆ. ಅಂತಹ ಘಟನೆಗಳು ಆಟೋಮೊಬೈಲ್ ಉದ್ದಿಮೆಯಲ್ಲಿ ಸಾಕಷ್ಟು ನಡೆದಿವೆ. ಹರಿಯಾಣದ ಗುರ್ಗಾಂವ್‌ನ ಬಳಿಯ ಮಾನೇಸರ್‌ನ ಮಾರುತಿ ಸುಜುಕಿ ಫ್ಯಾಕ್ಟರಿಯಲ್ಲಿ 2012ರ ಜುಲೈ 18ರಂದು ಅಂತಹದೊಂದು ಘಟನೆ ನಡೆಯಿತು. ಅದನ್ನು ಬಳಸಿಕೊಂಡು ಫ್ಯಾಕ್ಟರಿಯ ಲಾಕ್‌ಔಟ್ ಮಾಡಿದ್ದಲ್ಲದೇ ನೂರಾರು ಕಾರ್ಮಿಕರನ್ನು ಜೈಲುಪಾಲು ಮಾಡಲಾಯಿತು. ಕೆಲವರಿಗೆ ಕೆಳನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸುವವರಿಗೆ ಅದು ಹೋಯಿತು. ದಲಿತ ಸಮುದಾಯಕ್ಕೆ ಸೇರಿದ ಕಾರ್ಮಿಕರೊಬ್ಬರನ್ನು ಜಾತಿನಿಂದನೆ ಮಾಡಿದ ಮೇಲಧಿಕಾರಿಯ ವಿರುದ್ಧ ಸಿಡಿದ ಆಕ್ರೋಶವು ಕಾರ್ಖಾನೆಯಲ್ಲಿ ಗಲಭೆಗೆ ಕಾರಣವಾಯಿತು. ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರ ಸಾವಿನಲ್ಲಿ ಅದು ಅಂತ್ಯವಾಗಿತ್ತು. ವಾಸ್ತವದಲ್ಲಿ ಕಾರ್ಖಾನೆಯೊಳಗೆ ಕಂಪೆನಿಯು ಬೌನ್ಸರ್‌ಗಳನ್ನಿಟ್ಟುಕೊಂಡು ಕಾರ್ಮಿಕರಿಗೆ ಬಡಿಯಲಾಗುತ್ತಿತ್ತು ಎಂಬುದಾಗಲೀ, ಉಚ್ಚೆ ಉಯ್ಯಲೂ ಕಾರ್ಮಿಕರಿಗೆ ಬಿಡುವಿರುತ್ತಿರಲಿಲ್ಲ ಎಂಬುದಾಗಲೀ, ಅತ್ಯಂತ ಕಡಿಮೆ ಸಂಬಳಕ್ಕೆ ಯಂತ್ರಗಳಂತೆ ದುಡಿಸಲಾಗುತ್ತಿತ್ತು ಎಂಬುದಾಗಲೀ ಹೊರಬಂದಿರಲಿಲ್ಲ. ಅದೆಲ್ಲವೂ ಈ ಘಟನೆಯ ನಿಮಿತ್ತ ಹೊರಬಂದರೂ ಸಹಾ ಎಲ್ಲಾ ದೊಡ್ಡ ದಿನಪತ್ರಿಕೆಗಳು/ಚಾನೆಲ್‌ಗಳೂ ಕಂಪೆನಿ ಹೇಳಿದ ಸುಳ್ಳುಗಳನ್ನೇ ಪ್ರಸಾರ ಮಾಡಿದ್ದವು. ನಿಗೂಢವಾಗಿ ಸತ್ತ ಎಚ್.ಆರ್. ಅಧಿಕಾರಿಯ ಸಾವಿನ ಮೂಲ ಗೊತ್ತಾಗಲೇ ಇಲ್ಲ.

ಇದೇ ರೀತಿ 2015-16ರ ಫೆಬ್ರವರಿಯಲ್ಲಿ, ಹರಿಯಾಣ ಮತ್ತು ರಾಜಸ್ಥಾನದ ಗಡಿಯಲ್ಲಿರುವ ಹೋಂಡಾ ಮೋಟಾರ್ಸ್ ಕಾರ್ಮಿಕರೂ ಕೂಡ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಅಲ್ಲಿನ ಆಡಳಿತವು ಎಲ್ಲರಿಗಿಂತ ಒಂದು ಕೈ ಮುಂದೆ ಹೋಗಿ, ಬೌನ್ಸರ್ಸ್ ಮತ್ತು ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿ, ಕಾರ್ಮಿಕರನ್ನು ಜೈಲಿಗೆ ಕಳುಹಿಸಿದ್ದರು. ಸುಮಾರು 86 ಕಾರ್ಮಿಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು.

ಕಳೆದ 4 ವರ್ಷಗಳಿಂದ 30ಕ್ಕೂ ಹೆಚ್ಚು ಕಾರ್ಮಿಕರು ಇನ್ನೂ ಜೈಲಿನಲ್ಲಿದ್ದಾರೆ. ನೂರಾರು ಕಾರ್ಮಿಕರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲಿನ ಕಾರ್ಮಿಕರ ಮೇಲೆ ಆಡಳಿತವು ಇನ್ನಿಲ್ಲದಂತೆ ದೌರ್ಜನ್ಯ ಮಾಡಿದರೂ ಸಹ ಆರೋಪಗಳೆಲ್ಲವನ್ನೂ ಕಾರ್ಮಿಕರ ಮೇಲೆಯೇ ಹೊರಿಸಲಾಯಿತು.

ಇಂತಹ ಸಂದರ್ಭಗಳಲ್ಲಿ ಕಂಪೆನಿಯೇ ಹುನ್ನಾರ ನಡೆಸಿ ಅಥವಾ ಕಾರ್ಮಿಕರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ಅವರಿಂದಲೇ ತೊಂದರೆಯಾಗಿದೆಯೆಂದು ಕಂಪನಿಯನ್ನು ಮುಚ್ಚುತ್ತಾರೆ (ಇದನ್ನು ಲಾಕ್‌ಔಟ್ ಎನ್ನಲಾಗುತ್ತದೆ). ಇದರಿಂದ ಕಂಪನಿಯ ಮಾಲೀಕರಿಗೆ ಅಂತಹ ದೊಡ್ಡ ನಷ್ಟವಾಗುವುದಿಲ್ಲ. ಆದರೆ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕಾರ್ಮಿಕರ ಬದುಕು ಅನಿಶ್ಚಿತತೆಗೆ ತಳ್ಳಲ್ಪಡುತ್ತದೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಹುಲ್ ‌ಗಾಂಧಿ ನಾಯಕತ್ವವು ವಿನಾಶಕಾರಿ ಎಂಬುದು ಮತ್ತೆ ಬಹಿರಂಗವಾಗಿದೆ!

ಟೊಯೋಟಾ ಮೋಟಾರ್ಸ್ ಕಿರ್ಲೋಸ್ಕರ್ ಕಂಪನಿ ಇದಕ್ಕೆ ಜ್ವಲಂತ ಉದಾಹರಣೆ. ಸುಮಾರು 3500 ಕಾರ್ಮಿಕರು ಬೀದಿಗಿಳಿದು ಈ ಕಂಪನಿಯ ಲಾಕೌಟ್ ನಿರ್ಧಾರ ಮತ್ತು ಕಾರಣವಿಲ್ಲದೇ ಕಾರ್ಮಿಕರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಕಳೆದ ಒಂದು ವಾರದಿಂದ ಹೋರಾಟ ಮಾಡುತ್ತಿದ್ದಾರೆ. ಜಪಾನ್ ಮೂಲದ ಕಂಪನಿಯು 1999ರಿಂದಲೂ ಬಿಡದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಾವಿರಾರು ಕಾರ್ಮಿಕರು ಕಳೆದ 20 ವರ್ಷದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವೈಜ್ಞಾನಿಕ ಕೆಲಸದ ಸಮಯ ಮತ್ತು ಕೆಲಸದ ಶಿಫ್ಟ್, ಪ್ರಶ್ನೆ ಮಾಡುವ ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರ ಅಮಾನತು, ದಿಢೀರ್ ಲಾಕೌಟ್ ಸೇರಿದಂತೆ ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಟೊಯೊಟಾ ಕಂಪನಿಯ ಸುಮಾರು 3500 ಕಾರ್ಮಿಕರು ನಿರಂತರ ಧರಣಿ ನಡೆಸುತ್ತಿದ್ದಾರೆ.

ಮೊದಲು ಕಾರ್ಮಿಕ ಸಂಘದ ಖಜಾಂಚಿಯನ್ನು ಅಮಾನತು ಮಾಡುವುದರೊಂದಿಗೆ ಈ ಸಾರಿಯ ಘಟನಾವಳಿಗಳು ಶುರುವಾದವು. ಈಗಾಗಲೇ ಸುಮಾರು 39 ಕಾರ್ಮಿಕರನ್ನು ಅಮಾನತುಗೊಳಿಸಿರುವ ಕಂಪನಿ, ಹೋರಾಟದಲ್ಲಿ ತೊಡಗಿರುವ ಕಾರ್ಮಿಕರ ವಿರುದ್ಧ ಮತ್ತು ಪ್ರಶ್ನೆ ಮಾಡುತ್ತಿರುವ ಕಾರ್ಮಿಕರ ವಿರುದ್ಧ ಈ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ. ಕಳೆದ 21 ವರ್ಷದಿಂದ ಕೆಲಸ ಮಾಡುತ್ತಿರುವ ಮತ್ತು ಈಗ ಅಮಾನತುಗೊಂಡಿರುವ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಗಂಗಾಧರ್ ’ಗೌರಿ ಲಂಕೇಶ್ ನ್ಯಾಯಪಥ ಪತ್ರಿಕೆ’ಗೆ ನೀಡಿದ ಹೇಳಿಕೆಯಲ್ಲಿ, “ಈ ಕಂಪನಿಯಲ್ಲಿ ಮೊದಲಿನಿಂದಲೂ ನಮಗೆ ನೂರಾರು ಸಮಸ್ಯೆಗಳಿವೆ. ಇದನ್ನೆಲ್ಲಾ ಪ್ರಶ್ನಿಸಿದರೆ ಹೇಳಿಕೊಂಡವರ ಮೇಲೆ ಇಲ್ಲಸಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗೆ ಕಾರ್ಮಿಕರೊಬ್ಬರು ತಮ್ಮ ಸಮಸ್ಯೆಯನ್ನು ಟಿವಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರೆಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಮತ್ತೊಬ್ಬ ಕಾರ್ಮಿಕನನ್ನು ಅಮಾನತುಗೊಳಿಸಿತ್ತು. ಹಾಗಾಗಿ ಆಡಳಿತದ ಈ ಕ್ರಮವನ್ನು ಪ್ರಶ್ನಿಸಲು ನಾವು ಮೊದಲ ಶಿಫ್ಟಿನ ಕೆಲಸ ಮುಗಿಸಿ ಕಳೆದ ವಾರ ಒಂದೆಡೆ ಗುಂಪು ಸೇರಿ ಕೆಲವು ಘೋಷಣೆಗಳನ್ನೂ ಕೂಗಿದೆವು. ಆದರೆ ಇದನ್ನೇ ಕಾರಣ ಮಾಡಿಕೊಂಡು, ಇದು ಕಾನೂನು ಬಾಹಿರ ಹೋರಾಟ ಎಂದು ಕಂಪನಿಯನ್ನು ಲಾಕೌಟ್ ಮಾಡಲು ಹೊರಟಿದೆ” ಎಂದು ಹೇಳಿದರು.

3000ಕ್ಕೂ ಹೆಚ್ಚು ಕಾರ್ಮಿಕರು ಕಂಪನಿಯ ಮುಂದೆ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದರೆ ಇದುವರೆಗೂ ಸರ್ಕಾರದ ಕಡೆಯಿಂದಾಗಲೀ, ಆಡಳಿತ ಮಂಡಳಿಯ ಕಡೆಯಿಂದಾಗಲೀ ಯಾವುದೇ ಗಮನಾರ್ಹ ಕ್ರಮ ಕೈಗೊಂಡಿರುವುದಿಲ್ಲ. ಕಳೆದ ಗುರುವಾರ ಅಸಿಸ್ಟೆಂಟ್ ಲೇಬರ್ ಕಮಿಷನರ್ ಕಚೇರಿಯಲ್ಲಿ ಸಂಧಾನ ಸಭೆಯೊಂದನ್ನು ಏರ್ಪಡಿಸಲಾಗಿತ್ತು. “ಅಂದು ಕಾರ್ಮಿಕರು ದಿಢೀರನೆ ಹೋರಾಟ ಆರಂಭಿಸಿದರು, ಹಾಗಾಗಿ ಲಾಕೌಟ್ ಮಾಡಬೇಕಾಗಿ ಬಂತು” ಎಂದು ಕಂಪನಿಯು ಹೇಳಿದೆ. ನಂತರ ನಮ್ಮ ನಿಯಮಗಳಿರುವುದೇ ಹೀಗೆ ಎಂದೂ, ಕಾರ್ಮಿಕರ ಹೋರಾಟವನ್ನು ಹಿಂತೆಗೆದುಕೊಳ್ಳುವಂತೆ ಕಂಪನಿ ಒತ್ತಾಯಿಸಿತು. ಈ ರೀತಿಯ ಕಂಪನಿಯ ದರ್ಪದಿಂದಾಗಿ ಈ ಸಂಧಾನ ಸಭೆ ವಿಫಲವಾಯಿತು. ಆದರೆ ವಾಸ್ತವದಲ್ಲಿ ಕಾರ್ಮಿಕರು ಅಂದು ಪ್ರತಿಭಟನೆ ಮಾಡಲು ಸೇರಿರಲಿಲ್ಲ. ಕಂಪನಿಯ ಲಾಕೌಟ್ ನಿರ್ಧಾರದ ನಂತರ ನಾವು ಪ್ರತಿಭಟಿಸುವ ತೀರ್ಮಾನವನ್ನು ತೆಗೆದುಕೊಂಡೆವು ಎಂದು ಕಾರ್ಮಿಕ ಹೋರಾಟಗಾರರು ಹೇಳುತ್ತಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ BJP ಬೆಳೆಯಲು ನೆರವಾಗುತಿದ್ಯಾ AIADMK: ಚುನಾವಣಾ ಮೈತ್ರಿ ಸಾಧ್ಯತೆ!

ಹಲವು ವರ್ಷಗಳ ಸಮಸ್ಯೆಯಿಂದ ರೋಸಿಹೋಗಿದ್ದ ಕಾರ್ಮಿಕರು ಈಗ ದೃಢ ನಿರ್ಧಾರ ಮಾಡಿ, ಈ ಲಾಕೌಟ್ ಮತ್ತು ಅಮಾನತು ಕ್ರಮವನ್ನು ಹಿಂಪಡೆಯುವಂತೆ ಹಾಗೂ ತಮ್ಮ ದೀರ್ಘಕಾಲಿಕ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಮೊದಲಿನಿಂದಲೂ ನಮ್ಮ ಸಮಸ್ಯೆಗಳ ಬಗ್ಗೆ ನಾವು ಪ್ರಶ್ನೆ ಮಾಡುತ್ತಲೇ ಬಂದಿದ್ದೇವೆ ಎನ್ನುತ್ತಾರೆ ಹೋರಾಟನಿರತ ಕಾರ್ಮಿಕರು. ಆದರೆ ಈ ರೀತಿ ಪ್ರಶ್ನೆ ಮಾಡುವವರ ವಿರುದ್ಧ ಆಡಳಿತ ಮಂಡಳಿಯು ಅನ್-ಆಥರೈಸ್ಡ್ ರಜೆಯ ಅಸ್ತ್ರವನ್ನು ಬಳಸಿ ಅವರನ್ನು ಕೆಲಸದಿಂದ ತೆಗೆಯುವ ಹುನ್ನಾರ ಮಾಡುತ್ತಿದೆ. ಜೊತೆಗೆ ಕಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಕು ಎನ್ನುವ ಉದ್ದೇಶದಿಂದ ಕೆಲಸದ ಸಮಯವನ್ನು ಕಡಿಮೆಗೊಳಿಸಿ, ಉತ್ಪಾದನಾ ಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದೆ.

ಈ ಕಂಪನಿಯಲ್ಲಿ ಕಾರ್ಮಿಕರು ರೋಬೋಟ್‌ಗಳಂತೆ ಕೆಲಸ ನಿರ್ವಹಿಸಬೇಕು ಎಂದು ಆಡಳಿತ ಹೇಳುತ್ತದೆ. ಹಾಗಾಗಿಯೇ 2010ರ ನಂತರ ಇಲ್ಲಿಗೆ ನೇಮಿಸಿಕೊಳ್ಳುವ ಕಾರ್ಮಿಕರನ್ನು ವೈದ್ಯಕೀಯ ಪರೀಕ್ಷೆಯೊಂದಿಗೆ, ಭಾರತೀಯ ಸೇನೆಯಲ್ಲಿ ಮಾಡುವಂತಹ ದೈಹಿಕ ಪರೀಕ್ಷೆಯನ್ನೂ ಮಾಡಿ ನೇಮಿಸಿಕೊಳ್ಳಲಾಗುತ್ತದೆ.

ನಿರ್ದಿಷ್ಟ ಸಮಯದಲ್ಲಿ ಇಷ್ಟು ದೂರ ಓಡಬೇಕು, ಇಷ್ಟು ಭಾರ ಎತ್ತಬೇಕು ಇನ್ನು ಮುಂತಾದ ಮಾನದಂಡಗಳನ್ನು ನಿಗದಿಪಡಿಸಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಆದರೆ ಈ ವಿಧಾನದ ಮೂಲಕ ಆಯ್ಕೆಯಾಗಿರುವ ಕಾರ್ಮಿಕರಿಗೂ ಸಹ ಈಗ, ಮೂಳೆ ಸವೆತ, ಮಿದುಳು ಬಳ್ಳಿಯ ಸಮಸ್ಯೆ, ಕಿಡ್ನಿ ಸ್ಟೋನ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಇದಕ್ಕೆ ಕಾರಣ ಇಲ್ಲಿನ ಅವೈಜ್ಞಾನಿಕ ಕೆಲಸದ ಸಮಯ ಮತ್ತು ಶಿಫ್ಟ್ ವ್ಯವಸ್ಥೆ.

“ಲಾಕ್‌ಡೌನ್ ನಂತರ ನಮ್ಮ ಸಮಸ್ಯೆಗಳು ಮತ್ತಷ್ಟು ಜಟಿಲವಾಗಿವೆ. ಕಾರ್ಮಿಕರು ಕೆಲಸ ಮಾಡುವ ಶಿಫ್ಟ್ ವ್ಯವಸ್ಥೆಯೇ ಅವೈಜ್ಞಾನಿಕವಾಗಿದ್ದು, ಮೊದಲ ಶಿಫ್ಟ್ ಮಧ್ಯರಾತ್ರಿ 2 ಗಂಟೆಗೆ ಮುಗಿಯುತ್ತದೆ. ಎರಡನೇ ಶಿಫ್ಟ್ ಬೆಳಗಿನ ಜಾವ 3 ಗಂಟೆಗೆ ಆರಂಭವಾಗುತ್ತದೆ. ಪ್ರತಿ ವಾರವೂ ಈ ಶಿಫ್ಟ್ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ದೈನಂದಿನ ಅವಶ್ಯಕ ಕೆಲಸಗಳಾದ ಊಟ-ನಿದ್ರೆಯಲ್ಲಿ ಏರುಪೇರಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ” ಎನ್ನುತ್ತಾರೆ ಕಾರ್ಮಿಕರು.

ಇದನ್ನೂ ಓದಿ: ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು: ಅಜಿತ್ ಪವಾರ್

ಒಂದು ದಿನಕ್ಕೆ ಇಲ್ಲಿ 300 ಕಾರುಗಳು ಸಿದ್ಧವಾಗುತ್ತವೆ. 1 ಕಾರಿಗೆ 3 ನಿಮಿಷದಂತೆ ಒಬ್ಬ ಕಾರ್ಮಿಕ ಕೆಲಸ ಮಾಡಬೇಕು ಎಂದು ಆಡಳಿತ ಹೇಳುತ್ತದೆ. ಒಬ್ಬ ವ್ಯಕ್ತಿ ದಿನದಲ್ಲಿ 430 ನಿಮಿಷ ಕೆಲಸ ಮಾಡಬೇಕಾಗುತ್ತದೆ. ಅಂದರೆ ಒಬ್ಬ ಕಾರ್ಮಿಕ ಮೊದಲ ಸೆಕೆಂಡಿನಿಂದ ಯಾವ ಸಾಮರ್ಥ್ಯದಲ್ಲಿ ಕೆಲಸ ಆರಂಭಿಸಿರುತ್ತಾನೋ ಅದನ್ನೇ ಕೊನೆಯ ಸೆಕೆಂಡ್‌ವರೆಗೂ ಉಳಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಕಾರ್ಮಿಕರು ಉಸಿರು ಬಿಗಿಹಿಡಿದು ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ಒಂದು ಕ್ಷಣ ಹೆಚ್ಚು-ಕಡಿಮೆಯಾದರೂ ಇಡೀ ಉತ್ಪಾದನೆಯನ್ನು ನಿಲ್ಲಿಸಿ ಕಾರ್ಮಿಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡಬೇಕು ಎಂಬುದು ಇಂತಹ ಯಾವುದೇ ಕಂಪೆನಿಯ ಮಂತ್ರವಾಗಿರುತ್ತದೆ. ಹಾಗಾಗಿ ಕಂಪನಿ ಪ್ರತಿ ವರ್ಷವೂ ಕೆಲವರನ್ನು ಕೆಲಸದಿಂದ ತೆಗೆಯುತ್ತದೆ. ಆದರೆ ಉತ್ಪಾದನೆ ಮಾತ್ರ ಅಷ್ಟೇ ಇರಬೇಕು ಎಂದು ಹೇಳುತ್ತದೆ. ಆದರೆ ಈಗ ಲಾಕ್‌ಡೌನ್‌ಗಿಂತ ಮೊದಲು ಒಂದು ಕಾರು ತಯಾರಿಸಲು ಒಬ್ಬ ಕಾರ್ಮಿಕ 3 ನಿಮಿಷ ದುಡಿಯಬೇಕಾಗಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಲಾಕ್‌ಡೌನ್ ನಂತರದಲ್ಲಿ 2.5 ನಿಮಿಷದಲ್ಲಿ ಅದೇ ಕೆಲಸವನ್ನು ಮುಗಿಸಬೇಕು ಎಂದು ಹೇಳುತ್ತದೆ.

ಇದು ಯಾವ ನ್ಯಾಯ ಎಂದು ಕಾರ್ಮಿಕರು ಕೇಳುತ್ತಾರೆ. ತಾಂತ್ರಿಕ ಸಹಕಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಸಂಬಳದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಆದರೆ ಕಡಿಮೆ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಉತ್ಪಾದನೆ ಮಾತ್ರ ಹೆಚ್ಚಾಗಬೇಕು ಎಂದು ಹೇಳುತ್ತಿದ್ದಾರೆ. ಹಳೆಯ ನಿಯಮವೇ ಕಾರ್ಮಿಕರಿಗೆ ಹೊರೆಯಾಗಿರುವಾಗ ಈ ಹೊಸ ನಿಯಮ ಬಾಣಲೆಯಿಂದ ಬೆಂಕಿಗೆ ಹಾಕಿದಂತಾಗಿದೆ.

ಈಗಾಗಲೇ 40 ವರ್ಷ ದಾಟುತ್ತಿದ್ದಂತೆ ಕೆಲವರಿಗೆ ಮೂಳೆ ಸವೆತ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಇನ್ನು ಕೆಲಸದ ನಡುವೆ ಪ್ರತಿ 2 ಗಂಟೆಗೊಮ್ಮೆ ಕಾರ್ಮಿಕರಿಗೆ ನೀಡುವ 10 ನಿಮಿಷ ವಿಶ್ರಾಂತಿ ಸಮಯದಲ್ಲಿ ಏನು ಮಾಡಲೂ ಸಾಧ್ಯವಿಲ್ಲ. ವಿಶ್ರಾಂತಿ ಕೊಠಡಿಗೆ ಹೋಗಿ ಬರುವುದಕ್ಕೆ 5-6 ನಿಮಿಷ ಬೇಕು. ಹೀಗಿರುವಾಗ ನೀರು ಕುಡಿಯಲು, ಮೂತ್ರ ವಿಸರ್ಜಿಸಲೂ ಸಮಯವಿಲ್ಲ. ಹಾಗಾಗಿ ಇದರಲ್ಲಿ ವಿಶ್ರಾಂತಿಯ ಮಾತೇ ಇಲ್ಲ. ಕೆಲಸದ ಮಧ್ಯೆ ಕಾರ್ಮಿಕರು ನೀರು ಕುಡಿಯಬೇಕಾದರೂ ಮ್ಯಾನೇಜರ್‌ಗೆ ಕರೆ ಮಾಡಿ, ಅವರು ಬಂದು ರಿಲೀವ್ ಮಾಡಿ ಅಪ್ಪಣೆ ಕೊಟ್ಟರೆ ಮಾತ್ರ ಹೋಗಿ ನೀರು ಕುಡಿಯಬೇಕು. ಇದು ಇಲ್ಲಿನ ಪರಿಸ್ಥಿತಿ. ಆಡಳಿತ ಅಕ್ಷರಶಃ ಕಾರ್ಪೋರೇಟ್ ರೌಡಿಯಂತೆ ವರ್ತಿಸುತ್ತಿದೆ. ಕಾರ್ಮಿಕರು ಕಾರ್ಪೊರೇಟ್ ಗುಲಾಮರಾಗಬೇಕೆಂದು ಅದು ಬಯಸುತ್ತದೆ.

ಅನ್-ಆಥರೈಸ್ಡ್ ಅಸ್ತ್ರ

ಈ ಸಮಸ್ಯೆಗಳನ್ನು ಪ್ರಶ್ನಿಸಿದರೆ ಅವರ ಮೇಲೆ ಅನ್-ಆಥರೈಸ್ಡ್ ರಜೆಯ ಅಸ್ತ್ರವನ್ನು ಬಳಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಬಹುಶಃ ಈ ಕಂಪನಿಯಲ್ಲಿ ಈ ಕ್ರಮಕ್ಕೆ ಒಳಗಾಗದ ಕಾರ್ಮಿಕರೇ ಇಲ್ಲ ಎನ್ನುತ್ತಾರೆ. ಅನ್-ಆಥರೈಸ್ಡ್ ರಜೆ ಎಂದರೆ, ಕಾರ್ಮಿಕರು ಆಡಳಿತದ ಗಮನಕ್ಕೆ ತರದೇ ಕಂಪನಿಯ ನಿಯಮವನ್ನು ಉಲ್ಲಂಘಿಸಿ ರಜೆ ತೆಗೆದುಕೊಂಡಿದ್ದಾರೆ ಎಂಬುದು. ಕಾರ್ಮಿಕರು ಆಡಳಿತದ ಗಮನಕ್ಕೆ ತಂದು ರಜೆ ತೆಗೆದುಕೊಂಡಿದ್ದರೂ ಸಹ ಇದನ್ನೂ ಅನ್-ಆಥರೈಸ್ಡ್ ರಜೆ ಎಂದು ತನಗಾಗದವರ ವಿರುದ್ಧ ಬಳಸಿಕೊಳ್ಳುತ್ತಿದೆ..

ಈ ಪ್ರತಿಭಟನೆಗೆ ತತ್‌ಕ್ಷಣದ ಕಾರಣ, ಪದಾಧಿಕಾರಿಗಳ ಅಮಾನತುಗೊಳಿಸುವಿಕೆ ಮತ್ತು ಕಂಪನಿ ಲಾಕೌಟ್ ಕ್ರಮವಾಗಿದ್ದು, ದೀರ್ಘಕಾಲಿಕವಾದ ಇಲ್ಲಿ ನೂರಾರು ಸಮಸ್ಯೆಗಳಿವೆ. ಇವುಗಳಿಗೆ ನ್ಯಾಯ ಸಿಗುವವರೆಗೂ ನಾವು ನ್ಯಾಯಯುತವಾಗಿ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಕಾರ್ಮಿಕರು ಹೇಳುತ್ತಾರೆ.

ಇದನ್ನೂ ಓದಿ: ಮೀಸಲಾತಿಯನ್ನು ಚರ್ಚೆಗೆ ತಂದ ಪಟಾಕಿ ವಿಚಾರ: ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ!

ಕಾರ್ಮಿಕ ಇಲಾಖೆಯು ಸಂಧಾನ ಮಾಡುವ ಪ್ರಾಧಿಕಾರದಂತೆ ವರ್ತಿಸುತ್ತಾ ಎಂದಿನಂತೆ ಕಂಪೆನಿಯ ಪರ ನಿಲ್ಲುತ್ತದಾ, ತಮಗೆ ಜಾಹೀರಾತು ತರುವ ಕಂಪೆನಿಯ ಪರವಾಗಿ ಸುದ್ದಿ ಮಾಡುವ ಮಾಧ್ಯಮವು ತನ್ನ ನಿಲುವಿನಲ್ಲಿ ಬದಲಾವಣೆ ತಂದುಕೊಳ್ಳುತ್ತದಾ, ಸರ್ಕಾರವು ಮೂಕಪ್ರೇಕ್ಷಕನಂತೆ ಇರುವ ಮೂಲಕ ಕಾರ್ಮಿಕರನ್ನು ಹಣಿಯಲು ಸಹಾಯ ಮಾಡುತ್ತದಾ ಎಂಬುದನ್ನು ಇನ್ನೂ ಒಮ್ಮೆ ಒರೆಗೆ ಹಚ್ಚಬೇಕಿದೆ.

ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಪ್ರಜ್ಞಾವಂತ ಜನರು ಶೋಷಿತ ಸ್ಥಳೀಯ ಕಾರ್ಮಿಕರ ಪರ ನಿಲ್ಲದಿದ್ದರೆ, ವಿದೇಶೀ ಕಂಪೆನಿಯು ಗುಲಾಮಗಿರಿಯನ್ನು ಮುಂದುವರೆಸುವುದರಲ್ಲಿ ಸಂಶಯವೇ ಇಲ್ಲ.

ಮ್ಯಾನೇಜ್‌ಮೆಂಟ್ ಹೇಳಿಕೆ

ಕಾರ್ಮಿಕರ ಸಮಸ್ಯೆಗಳು ಮತ್ತು ಲಾಕೌಟ್ ಕುರಿತು ಪ್ರತಿಕ್ರಿಯಿಸಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಮ್ಯಾನೇಜ್‌ಮೆಂಟ್‌ಅನ್ನು ಸಂಪರ್ಕಿಸಿದೆವು. ಸಂಸ್ಥೆಯನ್ನು ಪ್ರತಿನಿಧಿಸುವ ಸಾರ್ವಜನಿಕ ಸಂಪರ್ಕ ಸಂಸ್ಥೆಯ ಈಮೇಲ್‌ನಂತೆ, ಉಪಮುಖ್ಯಮಂತ್ರಿ ಸಿ ಎನ್ ಅಶ್ವಥ್‌ನಾರಾಯಣ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮತ್ತಿತರ ಜೊತೆಗೆ ನಡೆದ ಸಂಧಾನ ಸಭೆಯ ನಂತರ “ಕಾರ್ಖಾನೆಯ ಒಳಗೆ ಮತ್ತು ಹೊರಗೆ ಸಹಕಾರಯುತ ಮತ್ತು ಶಾಂತಿಯುತ ವಾತಾವರಣ ಕಾಪಾಡಿಕೊಂಡು ಹೋಗಲು ಕಾರ್ಮಿಕರು ಮತ್ತು ಯೂನಿಯನ್ ಭರವಸೆ ನೀಡಿದರೆ, ಲಾಕೌಟ್‌ಅನ್ನು ತೆರವುಗೊಳಿಸಲು ಮ್ಯಾನೇಜ್‌ಮೆಂಟ್ ಒಪ್ಪಿದೆ. ಇದರ ಅನುಸಾರ ಕಾರ್ಯಚಟುವಟಿಕೆಗಳು ಶೀಘ್ರ ಪ್ರಾರಂಭವಾಗುವ ನಂಬಿಕೆಯಿದೆ” ಎಂದು ಹೇಳಿದೆ.

ಈ ಕುರಿತು ಹೋರಾಟನಿರತ ಕಾರ್ಮಿಕ ಮುಖಂಡ ಗಂಗಾಧರ್ ಪ್ರತಿಕ್ರಿಯಿಸಿ, “ಕಂಪನಿ ಮೊದಲಿನಿಂದಲೂ ಇದನ್ನೇ ಹೇಳಿಕೊಂಡುಬರುತ್ತಿದೆ. ಆದರೆ ನಮ್ಮ ಸಮಸ್ಯೆಯ ಬಗ್ಗೆ ಮಾತನಾಡಲು ಅವರಿಗೆ ಆಸಕ್ತಿಯಿಲ್ಲ. ಅವರ ಹೇಳಿಕೆಯ ಪ್ರಕಾರ, ಈಗಾಗಲೇ ಅಮಾನತುಗೊಳಿಸಿರುವ ಕಾರ್ಮಿಕರನ್ನು ಮತ್ತೊಮ್ಮೆ ಸೇರಿಸಿಕೊಳ್ಳುವುದಿಲ್ಲ, ಬದಲಿಗೆ ಈ ಮೊದಲಿನಂತೆಯೇ ಕಂಪನಿ ನಡೆಯುತ್ತದೆ ಎನ್ನುವುದೇ ಆಗಿದೆ. ಆದರೆ ವಾಸ್ತವದಲ್ಲಿ ಕಾರ್ಮಿಕರ ಪರಿಸ್ಥಿತಿ ಈ ಮೊದಲಿಗಿಂತಲೂ ಹದಗೆಡುತ್ತದೆ. ಈಗಿರುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಉಸಿರುಗಟ್ಟುವಂತೆ ಮಾಡುತ್ತಾರೆ. ಇದೇ ಹುನ್ನಾರ. ಆದರೆ ನಮ್ಮ ಸಮಸ್ಯೆಗಳು ಬಗೆಹರಿಯುವ ತನಕ ನಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ನಾವು ದೃಢ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು

– ಪ್ರತಾಪ್ ಹುಣಸೂರು


ಇದನ್ನೂ ಓದಿ: ಬಿಹಾರದಲ್ಲಿ ಹೀನಾಯ ಸೋಲು: ಕಾಂಗ್ರೆಸ್‌ ಮುಖಂಡರು ರಾಜೀನಾಮೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights