ಫ್ಯಾಕ್ಟ್‌ಚೆಕ್ : ನಾಯಿ ತಿನ್ನುವ ಬಿಸ್ಕೆಟ್‌ಅನ್ನು ಕಾರ್ಯಕರ್ತನಿಗೆ ತಿನ್ನಲು ನೀಡಿದ್ರಾ ರಾಹುಲ್ ಗಾಂಧಿ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಿಯನ್ನು ಮುದ್ದಿಸಿ ಆಹಾರ ನೀಡಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ನಾಯಿ ಮರಿಯೊಂದನ್ನು ಮುದ್ದಿಸಿ ಬಿಸ್ಕೆಟ್ ನೀಡಲು ಮುಂದಾಗುತ್ತಾರೆ ಅದನ್ನು ನಾಯಿ ಮರಿ ತಿನ್ನದಿದ್ದಾಗ ಅದನ್ನೆ ಕಾರ್ಯಕರ್ತನಿಗೆ ತಿನ್ನಲು ನೀಡುತ್ತಾರೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರನ್ನು ನಾಯಿಗೂ ಕಡೆಯಾಗಿ ನೋಡಲಾಗುತ್ತದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕರು ರಾಹುಲ್ ಕಾರ್ಯಕರ್ತನಿಗೆ ನಾಯಿ ಬಿಸ್ಕೆಟ್ ನೀಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಅಧ್ಯಕ್ಷರಾದ ಖರ್ಗೆ ಅವರು ಪಕ್ಷದ ಬೂತ್ ಏಜೆಂಟರನ್ನು ನಾಯಿಗೆ ಹೋಲಿಸಿದ್ದರು ಮತ್ತು ಇಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ನಾಯಿಗೆ ಬಿಸ್ಕತ್ ತಿನ್ನಿಸುತ್ತಿದ್ದು, ನಾಯಿ ತಿನ್ನದೇ ಇದ್ದಾಗ ಅದೇ ಬಿಸ್ಕೆಟ್ ಅನ್ನು ತಮ್ಮ ಕಾರ್ಯಕರ್ತನಿಗೆ ನೀಡಿದರು. ಅಧ್ಯಕ್ಷ ಮತ್ತು ಪಟ್ಟದ ರಾಜಕುಮಾರ ತನ್ನ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಸಹಜ” ಎಂಬ ಹೇಳಿಕೆಯೊಂದಿಗೆ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಇದೇ ವಿಡಿಯೋವನ್ನು ಮತ್ತೊಬ್ಬ  ಎಕ್ಸ್‌ ಖಾತೆಯ ಬಳಕೆದಾರರು ಪೋಸ್ಟ್‌ ಮಾಡಿದ್ದು,  “ಇದಕ್ಕಾಗಿಯೇ ಸ್ವಾಭಿಮಾನ ಹೊಂದಿರುವ ಯಾರೂ ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ. ರಾಹುಲ್ ಮೊದಲು ನಾಯಿಗೆ ಬಿಸ್ಕೆಟ್ ಕೊಟ್ಟರು. ನಾಯಿ ನಿರಾಕರಿಸಿದಾಗ ಅದೇ ಬಿಸ್ಕೆಟ್ ಅನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೆ ಎಂದು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ರಾಹುಲ್ ಗಾಂಧಿ ತನ್ನ ಕಾರ್ಯಕರ್ತನಿಗೆ ತಿನ್ನಲು ನಾಯಿಯ ಬಿಸ್ಕೆಟ್‌ ನೀಡಿದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ರಾಹುಲ್ ಗಾಂಧಿ ವೈರಲ್ ವಿಡಿಯೋ ಕುರಿತು ಮಾತನಾಡಿರುವುದು ಕಂಡುಬಂದಿದೆ. ಪತ್ರಿಕಾಗೋಷ್ಠಿಯಲ್ಲಿ ವಿವಾದದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನಾಯಿಯ ಸಂಕಟವನ್ನು ಗಮನಿಸಿ ಅದಕ್ಕೆ ತಿನ್ನಲು ಬಿಸ್ಕೆಟ್ ನೀಡಿದ್ದೇನೆ, ಬಿಸ್ಕೆಟ್‌ಅನ್ನು ನಾಯಿಯ ಮಾಲೀಕನ ಮೂಲಕ ನೀಡಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ನಾಯಿಗೆ ಆಹಾರ ನೀಡುತ್ತಿರುವ ವೈರಲ್ ವಿಡಿಯೋ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿರುವುದನ್ನು ANI ಟ್ವೀಟ್ ಮಾಡಿದೆ.

“ಯಾತ್ರೆ ವೇಳೆ ನಾಯಿಯೊಂದು ಹಸಿವಿಂದ ಸಂಕಟ ಪಡುತ್ತಿತ್ತು, ನಾನು ನಾಯಿಯ ಮಾಲೀಕರನ್ನು ಕರೆದು. ನಾಯಿಗೆ ತಿನ್ನಲು ಬಿಸ್ಕೆಟ್ ನೀಡಲು ಮುಂದಾದೆ, ನಾಯಿ ಹೆದರಿ ಬಿಸ್ಕಟ್‌  ತಿನ್ನಲಿಲ್ಲ, ಹಾಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕತ್ತುಗಳನ್ನು ಕೊಟ್ಟು  ನಾಯಿಗೆ ನೀಡಲು ಹೇಳಿದೆ. ಮಾಲಿಕ ನೀಡಿದಾಗ ಅವುಗಳನ್ನು ನಾಯಿ ತಿಂದಿತು, ಅದರಲ್ಲಿ ಏನು ಸಮಸ್ಯೆ ಎಂದು ನನಗೆ ಅರ್ಥವಾಗುತ್ತಿಲ್ಲ. ಎಂದಿದ್ದಾರೆ.

ಈ ವ್ಯಕ್ತಿ ( ನಾಯಿ ಮಾಲಿಕ) ಕಾಂಗ್ರೆಸ್ ಕಾರ್ಯಕರ್ತ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಇಲ್ಲ, ಅವನು ಕಾಂಗ್ರೆಸ್ ಕಾರ್ಯಕರ್ತನಲ್ಲ, ಬಿಜೆಪಿಗೆ ನಾಯಿಗಳ ಬಗ್ಗೆ ಇರುವ ವ್ಯಾಮೋಹ ನನಗೆ ಅರ್ಥವಾಗುತ್ತಿಲ್ಲ” ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಇಂಡಿಯಾ ಟುಡೆಯೊಂದಿಗೆ ಮಾತನಾಡಿರುವ ನಾಯಿಯ ಮಾಲಿಕ ಕುಮಾರ್ ”  ಯಾತ್ರೆ ವೇಳೆ ರಾಹುಲ್ ಗಾಂಧಿ ನನ್ನ ನಾಯಿ ‘ಲೂಸಿ’ಯನ್ನು ನೋಡಿ ಹತ್ತಿರ ಕರೆದು ಅದಕ್ಕೆ ಬಿಸ್ಕೆಟ್ ನೀಡಿದರು ಅದು ವಾಹನದ ಮೇಲೆ ಇದ್ದ ಕಾರಣ ಹೆದರಿತ್ತು. ಬಿಸ್ಕೆಟ್ ತಿನ್ನದೆ ನಡುಗುತ್ತಿತ್ತು, ಹಾಗಾಗಿ ಅದನ್ನು ನನ್ನ ಕೈಗೆ ಕೊಟ್ಟು ನಾಯಿಗೆ ನೀಡಲು ಹೇಳಿದರು, ಅಲ್ಲದೆ ನಾನು ಕಾಂಗ್ರೆಸ್ ಕಾರ್ಯಕರ್ತನಲ್ಲ ಎಂದು ಕುಮಾರ್ ಸ್ಪಷ್ಟಪಡಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ನಾಯಿಗೆ ನೀಡಿದ ಬಿಸ್ಕೆಟ್‌ಅನ್ನು ನಾಯಿ ತಿನ್ನದಿದ್ದಾಗ ಅದನ್ನೆ ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ್ದಾರೆ ಎಂದು ಸುಳ್ಳು ಪೋಸ್ಟ್‌ಅನ್ನು BJP ನಾಯಕರು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಆತ ಕಾಂಗ್ರೆಸ್ ಕಾರ್ಯಕರ್ತನಲ್ಲ ಮತ್ತು ಬಿಸ್ಕೆಟ್‌ಅನ್ನು ನಾಯಿಗೆ ತಿನ್ನಿಸಲು ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿಚಿತ್ರ ಪ್ರಾಣಿಯೊಂದು ಗುಬ್ಬಿಯಲ್ಲಿ ಕಾಣಿಸಿಕೊಂಡಿದೆಯೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights