ನಂಜನಗೂಡು ರೋಗಿ ಸಂಖ್ಯೆ 52 – ವದಂತಿಗಳೇ ಎಲ್ಲ, ಉತ್ತರಗಳು ಇಲ್ಲ!

ನಂಜನಗೂಡಿನ ಔಷಧ ಸಂಸ್ಥೆಯ ನೌಕರರೊಬ್ಬರು ಕೋವಿಡ್-19 ಸೋಂಕಿಗೆ ಒಳಗಾಗಿ ಮೂರು ವಾರ ಕಳೆಯುತ್ತಿದೆ. ಇದೆ ಸಮಯದಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ 28 ಸಹನೌಕರರಲ್ಲಿ 17 ಜನ ಸೋಂಕಿಗೆ ತುತ್ತಾಗಿದ್ದಾರೆ. ನಂಜನಗೂಡು ಪಟ್ಟಣದ ಒಳ ಬರಬಹುದಾದ, ಅಲ್ಲಿಂದ ಹೊರಕ್ಕೆ ಹೋಗಬಹುದಾದ ಎಲ್ಲ ದಾರಿಗಳನ್ನೂ ಮುಚ್ಚಲಾಗಿದೆ. ಹೀಗಿದ್ದೂ ಏಪ್ರಿಲ್ 15ರಂದು ನಂಜನಗೂಡಿನಲ್ಲಿ 9 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿದೆ.

ನಂಜನಗೂಡಿನಲ್ಲಿ ಮೊದಲು ಕೊರೊನ ಸೋಂಕಿಗೆ ಗುರಿಯಾದ ರೋಗಿ ಸಂಖ್ಯೆ 52 ಅವರಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ಹಲವು ವದಂತಿಗಳು ಓಡಾಡುತಿದ್ದರೂ ಅಧಿಕಾರಗಳ ಬಳಿ ಇದಕ್ಕೆ ಯಾವುದೇ ನಿಖರ ಪುರಾವೆಗಳು ಇಲ್ಲ. ಯಾವುದೇ ವಿದೇಶಿ ಪ್ರವಾಸದ ಇತಿಹಾಸ ಈ ರೋಗಿಗೆ ಇಲ್ಲ. ಈಗ ಓಡಾಡುತ್ತಿರುವ ಸದ್ಯದ ವದಂತಿಗಳ ಪ್ರಕಾರ ಇವರಿಗೆ ಆರೋಗ್ಯ ಕಾರ್ಯಕರ್ತರಿಂದ ಸೋಂಕು ತಗುಲಿತು, ಚೈನಾದಿಂದ ಇವರು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಬಂದಿದ್ದ ಪಾರ್ಸೆಲ್ ನಿಂದ ಸೋಂಕು ಬಂದಿತು, ಈ ಸಂಸ್ಥೆಗೆ ಕೆಲವು ದಿನಗಳ ಹಿಂದೆ ಭೇಟಿ ನೀಡಿದ್ದ ವಿದೇಶಿಯರಿಂದ ಸೋಂಕು ಹರಡಿರಬಹುದು ಎಂಬ ಮಾತುಗಳು ಓಡಾಡುತ್ತಿವೆ. ಆದರೆ ಅಲ್ಲಿನ ಅಧಿಕಾರಿಗಳಾಗಲೀ, ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ, ಕೋವಿಡ್-19 ಉಸ್ತುವಾರಿ ಸಚಿವರಾಗಲೀ ಇದಕ್ಕೆ ಸಮರ್ಪಕ ಉತ್ತರ ನೀಡುತ್ತಿಲ್ಲ.

ಈ ಪ್ರಕರಣದ ತನಿಖೆಯ ಬಗ್ಗೆ  ಕೋವಿಡ್-19 ಉಸ್ತುವಾರಿ ಸಚಿವ, ಕರ್ನಾಟಕ ಶಿಕ್ಷಣ ಸಚಿವ ಎಸ್ ಸುರೇಶ ಕುಮಾರ್ ಅವರು, ಆ ಔಷಧ ಸಂಸ್ಥೆಗೆ ಭೇಟಿ ಕೊಟ್ಟಿದ್ದ ವಿದೇಶಿಯರಿಂದ ರೋಗಿ ಸಂಖ್ಯೆ 52ಕ್ಕೆ ಸೋಂಕು ತಗುಲಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ ಎಂದು ದ ಕ್ವಿಂಟ್ ವರದಿ ಮಾಡಿದೆ. ಆದರೆ ಸೋಂಕಿಗೆ ಇದೇ ಕಾರಣ ಇರಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹಿರಿಯ ಆರೋಗ್ಯ ಅಧಿಕಾರಿಗಳೊಬ್ಬರು ಹೇಳಿರುವುದಾಗಿ ಕೂಡ ದ ಕ್ವಿಂಟ್ ವರದಿ ಮಾಡಿದೆ.

ಫೆಬ್ರವರಿ 4 ರಿಂದ 18 ರೊಳಗೆ ಅಮೇರಿಕ, ಜರ್ಮನಿ, ಜಪಾನ್ ಮತ್ತು ಚೈನಾದಿಂದ ಈ ಸಂಸ್ಥೆಗೆ ಹಲವು ಪ್ರತಿನಿಧಿಗಳು ಭೇಟಿ ನೀಡಿದ್ದಾರೆ, ಆದರೆ ಮಾರ್ಚ್ 13 ರಂದು ರೋಗಿ ಸಂಖ್ಯೆ 52 ರಲ್ಲಿ ಕೊರೊನ ಸೋಂಕು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇಷ್ಟು ದಿನಗಳ ಅಂತರ ಇರುವುದು ಇದನ್ನು ದೃಢಪಡಿಸಲು ಅಡ್ಡಿ ಬಂದಿರಬಹುದೇ ಎಂಬ ಪ್ರಶ್ನೆಗಳು ಇವೆ. ಒಂದು ಪಕ್ಷ ಇದು ನಿಜವಾದರೆ ಇನ್ನೂ ಹೆಚ್ಚಿನ ಕೊರೊನ ಸೋಂಕಿತ ರೋಗಿಗಲು ಇರಬಹುದೇ ಎಂಬ ಆತಂಕ ಕೂಡ ಏಳುತ್ತದೆ. ಸದ್ಯಕ್ಕೆ ಎಲ್ಲಿಯೂ ಕೊರೊನ ಸಮುದಾಯ ಸಾಂಕ್ರಾಮಿಕವಾಗಿ ಮಾರ್ಪಾಡಾಗಿದೆ ಎಂದು ಯಾವ ರಾಜ್ಯವೂ ಒಪ್ಪಿಕೊಂಡಿಲ್ಲ.

ಈಗ ಹೊಸ ಸಿದ್ಧಾಂತದ ಪ್ರಕಾರ ಚೈನಾದಿಂದ ಬಂದಿದ್ದ ಪಾರ್ಸೆಲ್ ನ ಸ್ಯಾಂಪಲ್ ಅನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಿ ಸುಧಾಕರ್ ಈ ಪಾರ್ಸೆಲ್ ನಿಂದ ಸೋಂಕು ಹರಡಿರಬಹುದಾದ ಶಂಕೆ ವ್ಯಕ್ತಪಡಿಸಿದ್ದರು.

ಚೈನಾದಿಂದ ನಂಜನಗೂಡು ತಲುಪುವವರೆಗೂ ಈ ವೈರಸ್ ಯಾವುದಾದರೂ ವಸ್ತುವಿನಲ್ಲಿ ಅಥವಾ ಅದರ ಮೇಲ್ಮೈನಲ್ಲಿ ಉಳಿಯಲು ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಪುಣೆಯ ವೈರಾಲಜಿ ಸಂಸ್ಥೆಯಿಂದ ಫಲಿತಾಂಶ ಬಂದ ನಂತರವಷ್ಟೇ ಗೊತ್ತಾಗಬೇಕು.

ಸಂಪೂರ್ಣ ಎಲ್ಲಾ ಚಟುವಟಿಕೆಗಳನ್ನು ನಂಜನಗೂಡಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಲಾಕ್ ಡೌನ್ ಜೊತೆಗೆ ಎಲ್ಲಾ ಒಳ ಬರುವ ಹೊರ ಹೋಗುವ ರಸ್ತೆಗಳನ್ನು ಮುಚ್ಚಲಾಗಿದೆ. ಆಶಾ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ನಾಗರಿಕರ ಸ್ವಾಸ್ಥ್ಯವನ್ನು ವಿಚಾರಿಸಿ ವರದಿ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights