ಕಾಂಗ್ರೆಸ್ಗೆ ರಾಹುಲ್ ಗಾಂಧಿ ನಾಯಕತ್ವವು ವಿನಾಶಕಾರಿ ಎಂಬುದು ಮತ್ತೆ ಬಹಿರಂಗವಾಗಿದೆ!
ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿರ್ದಿಷ್ಟ ಪರಿಚಯವಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನವನ್ನು ತೋರುತ್ತಿದೆ. ಅದರ ಕಾರ್ಯಕರ್ತರಲ್ಲಿ ಹತಾಶೆಯ ವಾತಾವರಣ ಬೆಳೆಯುತ್ತಿದೆ. ಪಕ್ಷದೊಳಗೆ ಭಿನ್ನಾಭಿಪ್ರಾಯದ ಗೊಣಗಾಟಗಳಿವೆ. ಆದರೆ, ಗಾಂಧಿ ಕುಟುಂಬವನ್ನು ಹೊಗಳಲು ಬಯಸುವ ನಿಷ್ಟಾವಂತರು ಇಂತಹ ಭಿನ್ನಾಭಿಪ್ರಾಯಗಳನ್ನು ಮಣಿಸಲು ಯತ್ನಿಸುತ್ತಾರೆ.
ಕೊನೆಯ ಸುತ್ತಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬಿಹಾರವು ಯಾವಾಗಲೂ ಕಷ್ಟಕರವಾಗಿರುತ್ತದೆ ಎಂದು ಒಪ್ಪಿಕೊಳ್ಳಬಹುದು. ಆದರೆ ಹಾಗಿದ್ದರೂ, ಕಾಂಗ್ರೆಸ್ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಉಪಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಪಕ್ಷದ ವೈಫಲ್ಯದ ವ್ಯಾಪ್ತಿ ಹೆಚ್ಚು ಆತಂಕಕಾರಿಯಾಗಿದೆ ಕಾಣಿಸಿದೆ.
ಕಾಂಗ್ರೆಸ್ ಸೋಲಿನಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದದ್ದು, ಮಧ್ಯಪ್ರದೇಶ ಚುನಾವಣಾ ಫಲಿತಾಂಶ, ಇದು ಬಿಹಾರಕ್ಕಿಂತಲೂ ಭಿನ್ನವಾಗಿದೆ. ಏಕೆಂದರೆ, ಕಾಂಗ್ರಸ್ ಇಲ್ಲಿ ಸಂಘಟನೆ ಮತ್ತು ಹಣದ ಬಲ ಎರಡನ್ನೂ ಹೊಂದಿತ್ತು. ಕಮಲ್ನಾಥ್ ಸರ್ಕಾರವನ್ನು ಉರುಳಿಸಿ, ಜ್ಯೋತಿರಾಧಿತ್ಯ ಸಿಂಧಿಯಾ ಜೊತೆ ಹೋದವರು ಬಿಜೆಪಿಯಲ್ಲಿ ಟಿಕೆಟ್ ಪಡೆದು ಗೆದ್ದುಬಂದರು. ಕಾಂಗ್ರೆಸ್ ತೊರೆದು ಹೊರಹೋಗುವುದಕ್ಕೆ ಸಂಕೇತವೆಂದರೆ, ಕಾಂಗ್ರೆಸ್ ತೊರೆದು ಹೊರಬಂದು ಚುನಾವಣೆಗಳನ್ನು ಸುಲಭವಾಗಿ ಗೆಲ್ಲಬಹುದು ಎಂಬುದೇ ಆಗಿದೆ. ಇದು ಕಾಂಗ್ರೆಸ್ ಪಕ್ಷದ ಬ್ಯಾನರ್ ಇನ್ನು ಮುಂದೆ ಪರಿಗಣನೆಗೆ ಬರುವುದಿಲ್ಲ ಎಂಬುದನ್ನು ಸೂಚಿಸುತ್ತಿದೆ.

ಕಾಂಗ್ರೆಸ್ ವೈಫಲ್ಯಕ್ಕೆ ಹಲವು ಕಾರಣಗಳಿವೆ. ಆದರೆ, ಸಾರ್ವಜನಿಕ ಮನಸ್ಸಿನಲ್ಲಿ ಒಂದೇ ವಿಷಯ ಬರುತ್ತದೆ. ಅದು ರಾಹುಲ್ ಗಾಂಧಿ ನಾಯಕತ್ವ. ಇದರಲ್ಲಿ ಕೆಲವು ಪಕ್ಷಪಾತದ ಮಾಧ್ಯಮಗಳು ಅವರನ್ನು ಗ್ರಹಿಸುವ ಮತ್ತು ಬಿಂಬಿಸುವುದರೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ, ರಾಹುಲ್ ಸ್ವತಃ ಪರಿಸ್ಥಿತಿಯನ್ನು ನಿಭಾಯಿಸುವ ರೀತಿಗೂ ಇದು ಸಂಬಂಧಿಸಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರವು ಪತ್ರಿಕೋದ್ಯಮದ ಕೊಲೆ ಮಾಡುತ್ತಿದೆ: ರಾಹುಲ್ಗಾಂಧಿ
ಮೊದಲನೆಯದಾಗಿ, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಅವರು ರಾಜೀನಾಮೆ ನೀಡಿದರು ಮತ್ತು ಅವರ ಕುಟುಂಬದ ಯಾವುದೇ ಸದಸ್ಯರು ಪಕ್ಷದ ಮುಖ್ಯಸ್ಥರಾಗುವುದಿಲ್ಲ ಎಂದು ಘೋಷಿಸಿದರು. ಇದು ಧೈರ್ಯಶಾಲಿ ಮತ್ತು ಪ್ರಭಾವಶಾಲಿ ಘೋಷಣೆಯಾಗಿದೆ. ಆದರೆ, ಅದನ್ನು ಸಂಪೂರ್ಣವಾಗಿ ಅವರು ಅನುಸರಿಸಲಿಲ್ಲ. ಈಗಲೂ ಪಕ್ಷವನ್ನು ಅವರೇ ನಡೆಸುತ್ತಿರುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರೂ ಅವರ ಸ್ಥಾನವನ್ನು ಪಡೆದುಕೊಂಡಿಲ್ಲ. ಅವರ ತಾಯಿ ಸೋನಿಯಾ ಗಾಂಧಿ ಮಾತ್ರ ಕೆಲವು ರೀತಿಯ ಜವಾಬ್ದಾರಿಗಳನ್ನು ಹೊಂದಿದ್ದಾರೆ.
ಎರಡನೆಯದಾಗಿ, ಅಸಮಾಧಾನಗೊಂಡ ಕಾಂಗ್ರೆಸ್ಸಿಗರು ಕೆಲವು ತಿಂಗಳ ಹಿಂದೆ ಪತ್ರವನ್ನು ಬರೆದಾಗ, ಅವರ ಕಳವಳಗಳನ್ನು ಗ್ರಹಿಸಲು ಅಥವಾ ಅವರನ್ನು ಮತ್ತೆ ಕಾಂಗ್ರೆಸ್ ಮಡಿಲಿಗೆ ಎಳೆಯಲು ಸಾಕಷ್ಟು ಪ್ರಯತ್ನ ಮಾಡಲಿಲ್ಲ. ಈ ಪತ್ರವನ್ನು ಲೆಸ್ ಮೆಜೆಸ್ಟೆಯ ಕೃತ್ಯವೆಂಬಂತೆ ನೋಡಲಾಯಿತು.
ಮೂರನೆಯದಾಗಿ, ಪತ್ರ ಬರೆಯುವವರನ್ನು ಗೋಡೆಗೆ ಅಡ್ಡಲಾದ ಹಲಗೆಯ ಮೇಲೆ ನಡೆಯುವಂತೆ ಮಾಡಿದರು. ಕಾಂಗ್ರೆಸ್ ಕೆಲವು ದೂರದೃಷ್ಟಿಯ ಸುಧಾರಣೆಗಳನ್ನು ಜಾರಿಗೆ ತರುತ್ತದೆ ಅಥವಾ ಕನಿಷ್ಠಪಕ್ಷ ಪೂರ್ಣ ಸಮಯದ ಅಧ್ಯಕ್ಷರನ್ನು ಕಂಡುಕೊಳ್ಳುತ್ತದೆ ಎಂದು ಆಶಿಸಿದವರೆಲ್ಲರೂ ನಿರಾಶೆಗೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಎಂದಿಗೂ ಪರಿಣಾಮಕಾರಿ ಪರ್ಯಾಯ ಪಕ್ಷವಾಗಿಲ್ಲ: ಕೈ ಮುಖಂಡ ಕಪಿಲ್ ಸಿಬಲ್
ಬಹುಶಃ ಈಗ ಕಾಂಗ್ರೆಸ್ ಜಾತ್ಯತೀತ, ಉದಾರವಾದಿ ಮೌಲ್ಯಗಳಿಗಾಗಿ ಮಾತನಾಡುವ ಏಕೈಕ ಪಕ್ಷವಾಗಿದೆ. ಆದರೆ, ಆಂತರಿಕ ಭಿನ್ನಾಭಿಪ್ರಾಯದ ಅಸಹಿಷ್ಣುತೆಯೊಂದಿಗೆ ಸಂಯೋಜಿಸುತ್ತದೆ ಎಂಬ ಕಾರಣದಿಂದಾಗಿ, ಇದು ಉದಾರ ದೃಷ್ಟಿಕೋನದ ಮಹತ್ವವನ್ನು ಅಪಮೌಲ್ಯಗೊಳಿಸಿದೆ.
ಪ್ರಸ್ತುತ ಪಕ್ಷದೊಳಗಿನ ಪರಿಸ್ಥಿತಿ ಇರುವವರೆಗೂ ಪಕ್ಷವು ಉತ್ತಮಗೊಳ್ಳುತ್ತವೆ ಎಂದು ಕಾಂಗ್ರೆಸ್ನೊಳಗಿನ ಯಾರೂ ನಂಬುವುದಿಲ್ಲ. ಕೆಲವು ಕಾಂಗ್ರೆಸ್ಸಿಗರು ರಾಹುಲ್ ಅವರ ವ್ಯಕ್ತಿತ್ವ ಮತ್ತು ಅವರ ಪ್ರಸ್ತುತ ನಡವಳಿಕೆಯ ನಡುವಿನ ವ್ಯತಿರಿಕ್ತತೆಯಿಂದ ಕೂಡಿದ್ದಾರೆ. ರಾಹುಲ್ಗಾಂಧಿಯನ್ನು ಬಲ್ಲವರು ಅವರು ಚೆನ್ನಾಗಿ ಓದಿದ, ತಿಳುವಳಿಕೆಯುಳ್ಳ ಮತ್ತು ಮೂಲಭೂತವಾಗಿ ಸಭ್ಯ ಎಂದು ಹೇಳುತ್ತಾರೆ. ಖಂಡಿತವಾಗಿಯೂ, ಅಂತಹ ವ್ಯಕ್ತಿಯು ತನ್ನ ಪಕ್ಷವು ಪ್ರತಿನಿಧಿಸುವ ಮೌಲ್ಯಗಳಲ್ಲಿ ಈಗ ಸಮಸ್ಯೆಯಾಗಿದೆ ಎಂದು ಅರಿತುಕೊಳ್ಳುತ್ತಾರಾ?
ತಾನು ವೈಯಕ್ತಿಕ ಅಧಿಕಾರವನ್ನು ಬಯಸುವುದಿಲ್ಲ ಎಂದು ರಾಹುಲ್ ಪದೇ ಪದೇ ಹೇಳಿದ್ದಾರೆ. ಇತ್ತೀಚೆಗೆ ಅವರು ಕಾಂಗ್ರೆಸ್ ಅನ್ನು ಮುನ್ನಡೆಸಲು ಬಯಸುವುದಿಲ್ಲ ಎಂದು ಪುನರಾವರ್ತಿಸಿದ್ದಾರೆ. ಖಂಡಿತವಾಗಿಯೂ, ಅವರು ಹಿಂದೆ ಸರಿಯುವುದು ಮತ್ತು ಕೆಲವು ಹೊಸ ನಾಯಕತ್ವ ಹೊರಹೊಮ್ಮಲು ಎಷ್ಟು ಮುಖ್ಯ ಎಂಬುದನ್ನು ಅವರು ಅರಿತುಕೊಳ್ಳಬೇಕು. ಅರಿತುಕೊಂಡಿದ್ದಾರೆಯೇ?
ಒಂದೆಡೆ, ಯಾವುದೇ ಸ್ಪಷ್ಟ ಉತ್ತರಾಧಿಕಾರಿ ಇಲ್ಲ ಎಂಬುದು ನಿಜ. ರಾಹುಲ್ ಗಾಂಧಿ ಪಕ್ಷದ ವ್ಯವಹಾರಗಳ ಚುಕ್ಕಾಣಿಯಿಂದ ಹಿಂದೆಸರಿದರೆ, ಒಂದು ಅಥವಾ ಎರಡು ವರ್ಷಗಳ ಕಾಲ ಅವ್ಯವಸ್ಥೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹೆಣಗಾಡಬೇಕಾಗಬಹುದು.
ಮತ್ತೊಂದೆಡೆ, ಕಾಂಗ್ರೆಸ್ ಈಗ ಚುನಾವಣೆಯಲ್ಲಿ ಗೆಲ್ಲುತ್ತಿದೆಯೇ? ಇದು ಮುಂದಿನ ದಿನಗಳಲ್ಲಿ ಆಗುವ ಸಾಧ್ಯತೆಯಿದೆಯೇ? ಹೇಗಾದರೂ ಪಕ್ಷವನ್ನು ಅವ್ಯವಸ್ಥೆಯ ಸ್ಥಿತಿಯಿಂದ ಹೊರ ತರುವ, ಪಕ್ಷವನ್ನು ಮೇಲೆತ್ತುವ, ಅದಕ್ಕಾಗಿ ಯೋಜಿಸುವ ಪ್ರಯತ್ನಗಳು ಕುಸಿದಿವೆ.

ಗಾಂಧಿಯರನ್ನು ದೂರ ಹೋಗುವಂತೆ ಯಾರೂ ಕೇಳುತ್ತಿಲ್ಲ. ಕುಟುಂಬದ ಅನೇಕ ಸದಸ್ಯರು ಭಾರತಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಸೋನಿಯಾ ಗಾಂಧಿ ಇಲ್ಲದಿದ್ದರೆ, ಕಾಂಗ್ರೆಸ್ 21 ನೇ ಶತಮಾನದವರೆಗೆ ಇರುತ್ತಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತನೂ (ಆದರೂ, ಬಹುಶಃ ಮತದಾರನಲ್ಲ) ಇದನ್ನು ಗುರುತಿಸುತ್ತಾನೆ ಮತ್ತು ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾನೆ. ರಾಹುಲ್ ಗಾಂಧಿಯವರು ಯಾವ ಸ್ಥಾನಗಳನ್ನು ಹೊಂದದಿದ್ದರೂ ಯಾವಾಗಲೂ ಭಾವನಾತ್ಮಕ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆ.
ಆದರೆ, ಕಾಂಗ್ರೆಸ್ ನಾಯಕತ್ವದ ಆಯ್ಕೆಯ ಸರ್ಕಸ್ ತುಂಬಾ ಉದ್ದವಾಗಿ ಹೋಗಿಲ್ಲವೇ? ಹೊಸ ಚುನಾಯಿತ ನಾಯಕತ್ವವನ್ನು ಕ್ಷೇತ್ರಕ್ಕೆ ಸೇರಿಸಲು ಇದು ಸಮಯವಲ್ಲವೇ? ವಿಚಿತ್ರವಾದ ಈ ಸ್ಥಿತಿಯು ಹೆಚ್ಚು ಕಾಲ ಉಳಿಯಬಹುದೇ? ಕಾಂಗ್ರೆಸ್ ನಾಯಕತ್ವದೊಂದಿಗೆ ಪಕ್ಷದೊಳಗಿನ ಪ್ರಸ್ತುತ ಅಸಮಾಧಾನವು ಬಿಜೆಪಿಯು ತನ್ನ ವ್ಯಂಗ್ಯಚಿತ್ರಗಳಲ್ಲಿ ಕಾಂಗ್ರೆಸ್ ಅನ್ನು ರಾಜಮನೆತನದ ಸದಸ್ಯರೊಬ್ಬರು ಮಾತ್ರ ಆಳಬಲ್ಲ ಪಕ್ಷವಾಗಿ ಬಿಂಬಿಸುವಾಗ ರಾಹುಲ್ ಇದನ್ನು ಅರಿತುಕೊಂಡಿಲ್ಲವೇ?
ಇವು ಕಾಂಗ್ರೆಸ್ಸಿಗೆ ವಿರುದ್ಧವಾಗಿರದೆ, ಕಾಂಗ್ರೆಸ್ ಜೊತೆಗೆ ಇರುವ ಅನೇಕ ಜನರು ಕೇಳುತ್ತಿರುವ ಪ್ರಶ್ನೆಗಳು.
ಆದರೆ, ಈ ಪ್ರಶ್ನೆಗಳಿಗೆ ಉತ್ತರಗಳು ಕಾಣಿಸುತ್ತಿಲ್ಲ.
ಕೃಪೆ: ಎನ್ಡಿ ಟಿವಿ
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ಬಿಹಾರದಲ್ಲಿ ಸೋತರೂ ರಾಹುಲ್ ಪರನಿಂತ ಜನ: ಟ್ವಿಟರ್ನಲ್ಲಿ ನನ್ನ ನಾಯಕ ರಾಹುಲ್ಗಾಂಧಿ; ಟ್ರೆಂಡಿಂಗ್

