ಮಹಿಷ ದಸರಾ ಮಾಡೇಮಾಡ್ತೇವೆ, ತಾಕತ್ತಿದ್ದರೆ ತಡೆಯಲಿ: ಸಂಸದ ಪ್ರತಾಪ್ ಸಿಂಹರಿಗೆ ಸವಾಲು
ಮೈಸೂರಿನಲ್ಲಿ ಅಕ್ಟೊಬರ್ 15ರಂದು ಈ ಬಾರಿಯೂ ಮಹಿಶ ದಸರಾ ಮಾಡೇ ಮಾಡ್ತೇವೆ. ತಾಕತ್ತಿದ್ದರೆ ತಡೆಯಲಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಅವರಿಗೆ ಪ್ರೊ.ಮಹೇಶ್‌ಚಂದ್ರ ಗುರು ಅವರು ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, “ಮೈಸೂರಿನಲ್ಲಿ ದಸರಾಗಿಂತ ಮುಖ್ಯವಾಗಿ ಆಚರಣೆ ಮಾಡಬೇಕಾಗಿರುವುದು ಮಹಿಷಾ ದಸರಾವನ್ನು. ಇದನ್ನು ವಿರೋಧಿಸುವವರು ಕಂತ್ರಿಗಳು, ಸಂವಿಧಾನ ವಿರೋಧಿಗಳು, ಮೂಲ ನಿವಾಸಿಗಳ ವಿರೋಧಿಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿಗಳು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಎಲ್ಲರೂ ಮರೆತಿರುವ ಚರಿತ್ರೆಯನ್ನು ನೆನಪಿಸಿಕೊಳ್ಳವ ಉದ್ದೇಶದಿಂದ ಮಹಿಷ ದಸರಾ ಆಚರಿಸುತ್ತಿದ್ದೇವೆ. ನಾವು ದೇಶದ ಮೂಲ ನಿವಾಸಿಗಳು. ಇಂದು ನಮ್ಮನ್ನು ಆಳುತ್ತಿರುವವರು ಮೂಲ ನಿವಾಸಿಗಳ ವಿರೋಧಿಗಳು. ಸರ್ಕಾರ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೈ ಮುಗಿದು ಬೇಡುವುದಿಲ್ಲ, ಆದರೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದ್ದಾರೆ.
“ನಾವು ಮಹಿಷಾ ದಸರವನ್ನು 2016 ರಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ, ಯಾವುದೆ ರೀತಿಯ ಗೊಂದಲ ಸೃಷ್ಟಿಯಾಗಿರಲಿಲ್ಲ. ಆದರೆ ಕಳೆದ ಬಾರಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ದಿಡೀರನೆ ಗೊಂದಲ ಉಂಟಾಯಿತು. ಈ ಗೊಂದಲದ ನಡುವೆಯು ನಾವು ಆಚರಣೆ ಮಾಡಿದ್ದೇವೆ. ಅದಲ್ಲದೆ ಈ ಗೊಂದಲದ ನಂತರ ತೆಗೆದುಕೊಂಡ ತೀರ್ಮಾನದಂತೆ ಪ್ರತಿ ತಿಂಗಳು ಅಮವಾಸ್ಯೆಯ ಹಿಂದಿನ ದಿನ ಮಹಿಷಾನಿಗೆ ಪುಷ್ಪಾರ್ಚಣೆ ಮಾಡಿಕೊಂಡು ಬರುತ್ತಿದ್ದೇವೆ” ಎಂದು ನಿಜದನಿ ದಿನಪತ್ರಿಕೆಯ ಸಂಪಾದಕ ಹಾಗೂ ಕರ್ನಾಟಕ ದಲಿತ ವೆಲ್ಫೇರ್ ಅಧ್ಯಕ್ಷರಾದ ಶಾಂತರಾಜು ಅವರು ಹೇಳಿದರು.
“ಮಹಿಷಾ ಸಾಮಾಜಿಕವಾಗಿ ಸಮಾನತೆಗೋಸ್ಕರ ಹೋರಾಟ ಮಾಡಿದ ವ್ಯಕ್ತಿಯಾಗಿದ್ದಾನೆ. ಆದ್ದರಿಂದಲೇ ಮೈಸೂರಿಗೆ ಮಹಿಷಾ ಮಂಡಲ, ಮಹಿಷಾಪುರ ಮುಂತಾದ ಹೆಸರು ಬಂದಿದೆ. ಮನುವಾದಿಗಳು ಸಾಮಾಜಿಕ ಸಮಾನತೆಗೆ ಹೋರಾಟ ಮಾಡಿದವರನ್ನು ರಾಕ್ಷಸರು ಎಂದು ಕರೆಯುತ್ತಾರೆ. ಇವತ್ತಿಗೂ ತಮಿಳುನಾಡಿನಿಂದ ಪ್ರತಿವರ್ಷ ಒಂದು ಗುಂಪು ಬಂದು ಮಹಿಷಾನಿಗೆ ಪೂಜೆ ಮಾಡಿ ಊಟ ಮಾಡಿಕೊಂಡು ಹೋಗುತ್ತಾರೆ, ಇವೆಲ್ಲವು ಗೊತ್ತಿರುವಂತಹ ವಿಚಾರ. ಪ್ರತಿ ವರ್ಷದಂತೆ ನಾವು ಈ ಬಾರಿಯು ಅಕ್ಟೋಬರ್ 15 ರಂದು ಮಹಿಷಾ ದಸರಾ ಆಚರಿಸುತ್ತೇವೆ” ಎಂದು ಶಾಂತರಾಜು ಹೇಳಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಎಸ್‌ವೈ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸುರ್ಜೇವಾಲ್

