ಬಿಜೆಪಿ ಮಂತ್ರಿಗಳ ಮಕ್ಕಳು ವಿದೇಶಿ ವಿವಿಗಳಲ್ಲಿ; ದೇಶದ ಯುವಜನರು ಬೀದಿ-ಜೈಲುಗಳಲ್ಲಿ

ದೇಶ-ರಾಷ್ಟ್ರಭಕ್ತಿ-ಸೈನ್ಯವನ್ನು ತಮ್ಮ ರಾಜಕೀಯ ಅಪಾಹಪಿತನಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ತನ್ನ ಹುಸಿ ದೇಶಭಕ್ತಿಯ ಹೆಸರಿನಲ್ಲಿ ದೇಶದ ಯುವಜನರ ಮನಸ್ಸಿನಲ್ಲಿ ವಿಷವನ್ನು ತುಂಬುತ್ತಿದೆ. ಶಿಕ್ಷಣವನ್ನು ಪಡೆದು ಸುಂದರ ಬದುಕು ಕಟ್ಟಿಕೊಂಡು, ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಯುವಜನರು ಸಂಘಪರಿವಾರದ ಹುಸಿ ದೇಶಭಕ್ತಿಯ ಮಾಯಾಜಾಲಕ್ಕೆ ಬಲಿಯಾಗಿ ತಮ್ಮ ಭವಿಷ್ಯ-ಬದುಕು ಎರಡನ್ನೂ ಕಳೆದುಕೊಳ್ಳುವುದರ ಜೊತೆಗೆ ದೇಶದ ಭವಿಷ್ಯಕ್ಕೂ ಅಪಾಯಕಾರಿಗಳಾಗಿ ರೂಪುಗೊಳ್ಳುತ್ತಿದ್ದಾರೆ.

ಶಿಕ್ಷಣದಿಂದ ವಿದ್ಯಾವಂತರಾಗಿ ಉದ್ಯೋಗಗಳನ್ನು ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವಜನರು ತಮ್ಮ ಬದುಕನ್ನು ಬಲಿಕೊಟ್ಟು ಆರೆಸ್ಸೆಸ್‌-ಬಿಜೆಪಿಯ ಕೋಮುವಾದಿ ರಾಜಕಾರಣದ ಕಾಲಾಳುಗಳಾಗಿ ದುಡಿಯುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಕೋಮು ಗಲಬೆಗಳು, ಗುಂಪು ಹಲ್ಲಗಳನ್ನು, ಗೋ ರಕ್ಷಣೆಯ ಹೆಸರಿನಲ್ಲಿ ಅಮಾಯಕರ ಹತ್ಯೆಗಳನ್ನು ಮಾಡುತ್ತಿರುವ ಯುವಜನರು ಸಂಘಪರಿವಾರದ ಹುನ್ನಾರಕ್ಕೆ ಬಲಿಯಾಗಿ ಅಪರಾಧಿಗಳಾಗಿ ಜೈಲು ಪಾಲಾಗುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲೇ ತಮ್ಮ ಉಜ್ವಲ ಭವಿಷ್ಯವನ್ನು ಧರ್ಮಾಂದತೆಯ ಬೇಗುದಿಯಲ್ಲಿ ಸುಟ್ಟುಹಾಕಿಕೊಳ್ಳುತ್ತಿದ್ದಾರೆ.

ಆದರೆ, ವಿಷಕಾರುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರ ಮಕ್ಕಳು ಇಂತಹ ಯಾವ ಕೋಮು ಗಲಬೆಗಳಲ್ಲಾಗಲೀ, ಮಾಬ್‌ಲಿಂಚಿಂಗ್‌ಗಳಲ್ಲಾಗಲಿ ಭಾಗಿಯಾಗುತ್ತಿಲ್ಲ. ಯಾವೊಬ್ಬ ಮಂತ್ರಿಯ ಮಕ್ಕಳೂ ಬೀದಿಗಳಲ್ಲಿ ದೊಣ್ಣೆ, ಕಲ್ಲುಗಳನ್ನಿಡಿದು ಹೊಡೆದಾಡುತ್ತಿಲ್ಲ. ಯಾರನ್ನಾದರೂ ಕೊಂದು ಜೈಲು ಸೇರುತ್ತಿಲ್ಲ. ಕೇಸರಿ ಜೆಂಡಾ ಹಿಡಿದು ಜೈಕಾರ ಕೂಗುತ್ತಿಲ್ಲ. ಬದಲಾಗಿ ಅವರೆಲ್ಲೆರೂ ಪ್ರಪಂಚದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಆದರೆ, ಇಂತಹ ಹೇಯ ಕೃತ್ಯಗಳಲ್ಲಿ ಭಾಗಯಾಗುತ್ತಿರುವುದು ಮಾತ್ರ ದೇಶದ ಹಿಂದುಳಿದ ಬಡ ಯುವಜನರು ಮಾತ್ರ.

ಕೇಂದ್ರ ಸರ್ಕಾರದ ಮೋದಿ ಸಂಪುಟದಲ್ಲಿರುವ 54 ಮಂತ್ರಿಗಳ ಪೈಕಿ 12 ಸಚಿವರು ತಮ್ಮ ಮಕ್ಕಳನ್ನು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಇತರ ಸಚಿವರುಗಳ ಮಕ್ಕಳ ದೇಶದಲ್ಲೇ ಇರುವ ಹಲವಾರು ಪ್ರತಿಷ್ಠಿತ ವಿವಿಗಳಲ್ಲಿ ವಿವಿಧ ಕೋರ್ಸುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ವಿದೇಶಿ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದು ಐಶಾರಾಮಿ ಬದುಕು ಸಾಗಿಸುತ್ತಿದ್ದಾರೆ.

 

ವಿದೇಶಿ ವಿವಿಗಳಲ್ಲಿ ಶಿಕ್ಷಣ ಪಡೆಯುತ್ತಿರು ಬಿಜೆಪಿ ಮಂತ್ರಿಗಳ ಮಕ್ಕಳ ವಿವರ:

ಪಿಯೂಶ್‌ ಗೋಯಲ್(ರೈಲು ಮತ್ತು ವಾಣಿಜ್ಯ ಮಂತ್ರಿ)ರವರು ಮಗಳು ರಾಧಿಕಾ ಹಾವರ್ಡ್ ವಿವಿಯಲ್ಲಿ ಪದವಿ ಮತ್ತು ಮಗ ದ್ರುವ್‌ ಹಾವರ್ಡ್‌ ವಿವಿಯಲ್ಲಿ ಬಿಎ ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಕಾಶ್‌ ಜಾವಡೇಕರ್‌(ವಾರ್ತಾ ಮತ್ತು ಪ್ರಚಾರ ಖಾತೆ ಮಂತ್ರಿ)ಯವರು ಮಗ ಅಪೂರ್ವ್ – ಬೋಸ್ಟನ್‌ ವಿವಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ.

ರಾಜನಾಥ್‌ ಸಿಂಗ್‌(ರಕ್ಷಣಾ ಮಂತ್ರಿ)ರವರ ಮಗ ನೀರಜ್‌ – ಯುಕೆಯ ಲೀಡ್ಸ್‌ ವಿವಿಯಲ್ಲಿ ಎಂಬಿಎ ಪದವಿ.

ನಿರ್ಮಲಾ ಸೀತಾರಾಮನ್‌(ಹಣಕಾಸು ಮಂತ್ರಿ)ರವರ ಪುತ್ರಿ ವಾಜ್ಞ್ಮಾಯಿ ಪರಕಾಳಾ – ನಾರ್ಥ್‌ವೆಸ್ಟನ್ ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ಪದವಿ.

ಜಯಶಂಕರ್‌(ವಿದೇಶಾಂಗ ವ್ಯವಹಾರ ಮಂತ್ರಿ)ರ ಮಗ ದ್ರುವ – ಅಮೇರಿಕಾದ ಜ್ಯೋರ್ಗೆಟನ್‌ ವಿವಿಯಲ್ಲಿ ಎಂಎ ಪದವಿ. ಮಗಳು ಮೇಧಾ ಡೆನಿಸನ್ ವಿವಿಯಲ್ಲಿ ಸಿನೆಮಾ ವಿಷಯದಲ್ಲಿ ಬಿಎ ಪದವಿ.

ರವಿಶಂಕರ್‌ ಪ್ರಸಾದ್‌(ಕಾನೂನು ಮಂತ್ರಿ) ಮಗ ಆದಿತ್ಯಾ ಶಂಕರ – ಕಾರ್ನೆಲ್‌ ವಿವಿಯಲ್ಲಿ ಎಲ್‌ಎಲ್‌ಎಂ ಪದವಿ ಪಡೆದು ಭಾರತದಲ್ಲಿ ವಕಾಲತ್ತು ಮಾಡುತ್ತಿದ್ದಾರೆ.

ಹರ್ಷವರ್ಧನ್(ಆರೋಗ್ಯ ಮಂತ್ರಿ) ಮಗ ಸಚಿನ್‌ – ಮೇಲ್ಬನ್‌ನ ಮೋನಾಶ್‌ ವಿವಿಯಲ್ಲಿ ಪದವಿ ಶಿಕ್ಷಣ.

ಹರಸಿಮ್ರತ್ ಕೌರ್‌ ಬಾದಲ್‌(ಆಹಾರ ಸಂಸ್ಕರಣಾ ಮಂತ್ರಿ) ಮಗಳು – ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರ ಪದವಿ.

ಗಜೇಂದ್ರ ಸಿಂಗ್‌ ಶೇಖಾವತ್‌(ಜಲಶಕ್ತಿ ಮಂತ್ರಿ) ಮಗಳು ಸುಹಾಸಿನಿ – ಆಕ್ಸ್‌ಫರ್ಡ್‌ ವಿವಿಯಲ್ಲಿ ಅಡ್ವಾನ್ಸ್‌ಡ್‌ ಡಿಪ್ಲಮಾ ಇನ್ ಲೀಡರ್‌ಶಿಪ್‌ ಕೋರ್ಸ್‌ ಶಿಕ್ಷಣ.

ಜೀತೇಂದ್ರ ಸಿಂಗ್‌(ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ರಾಜ್ಯಮಂತ್ರಿ) ಮಗ ಅರುಣೋದಯ್ – ಆಕ್ಸ್‌ಫರ್ಡ್‌ ವಿವಿಯಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ.

ಸಂಜಯ್‌ ಧೋರ್ತೆ(ಸಂಪರ್ಕ ಖಾತೆ ರಾಜ್ಯಮಂತ್ರಿ) ಮಗ ನಕುಲ್‌ – ಕ್ಯಾಲಿಫೋರ್ನಿಯಾ ವಿವಿಯಲ್ಲಿ ಎಂಜಿನಿಯರಿಂಗ್‌ ಪದವಿ.

ಹರ್ದಿಪ್‌ ಸಿಂಗ್‌ ಪುರಿ(ನಾಗರಿಕ ವಿಮಾನಯಾನ ಮಂತ್ರಿ) ಮಗಳು ತಿಲೋತ್ತಮಾ – ವಾರವಿಕ್ ವಿವಿಯ ಯೂನಿವರ್ಸಿಟಿ ಕಾಲೇಜ್ ಆಫ್‌ ಲಂಡನ್‌ನಲ್ಲಿ ಕಾನೂನು ಪದವಿ ಪಡೆದು ಅಮೇರಿಕಾದಲ್ಲಿ ವಾಸವಾಗಿದ್ದಾರೆ.

 

ಸ್ವದೇಶಿ ವಸ್ತುಗಳ ಬಳಕೆ ಮತ್ತು ದೇಶಪ್ರೇಮದ ಉದ್ದುದ್ದ ಭಾಷಣ ಮಾಡುವ ಬಿಜೆಪಿ ಮಂತ್ರಿಗಳ ತಮ್ಮ ಮಕ್ಕಳಿಗೆ ವಿದೇಶದಲ್ಲಿರುವ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಕೊಡಿಸಿ ಪ್ರತಿಷ್ಟೆಯಿಂದ ಬದುಕುವಂತೆ ಭವಿಷ್ಯಕಟ್ಟಿಕೊಡುತ್ತಿದ್ದಾರೆ. ಆದರೆ, ಹಿಂದುಳಿದ ಮತ್ತು ಬಡವರ ಮಕ್ಕಳನ್ನು ಕೋಮುಗಲಬೆಗಳಂತ ಹೇಯ ಕೃತ್ಯಗಳನ್ನು ಎಸಗುವಂತೆ ಪ್ರಚೋದಿಸಿ, ಅವರ ಭವಿಷ್ಯಕ್ಕೆ ಗೋರಿ ಕಟ್ಟಿ, ಆ ಗೋರಿಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಅಧಿಕಾರ ಹುಂಬು ಪಡೆಯುತ್ತಿರುವ ಇಂರಹ ಮಂತ್ರಿಗಳನ್ನು ದೇಶದ ಯುವಜನರು ಪ್ರಶ್ನಿಸುವಂತಾಗಬೇಕು.

ಬಿಜೆಪಿಗಳು ಇಂತಹ ಹುಸಿ ದೇಶಭಕ್ತಿಯ ಹುನ್ನಾರದ ಬಗ್ಗೆ ಎಚ್ಚೆತ್ತುಕೊಂಡು, ಶಿಕ್ಷಣ-ಜ್ಞಾನ ಪಡೆದು ನೈಜ ದೇಶಭಕ್ತಿಯೊಂದಿಗೆ ದೇಶಕಟ್ಟುವ ನಿಟ್ಟಿನಲ್ಲಿ ಯುವಜನರು ಮುಂದಾಗದಿದ್ದರೆ ಈ ದೇಶಕ್ಕೂ – ದೇಶದ ಯುವಜನರಿಗೂ ಭವಿಷ್ಯವಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights