ರಾಜ್ಯದ ಸಮಗ್ರ ಅಭಿವೃದ್ದಿಗೆ ಏನನ್ನೂ ನೀಡದ ಜನ ವಿರೋಧಿ ಬಜೆಟ್ – ಎಎಪಿ ಟೀಕೆ

ರಾಜ್ಯದ ಸಮಗ್ರ ಅಭಿವೃದ್ದಿಗೆ ಏನನ್ನೂ ನೀಡದ ಜನ ವಿರೋಧಿ ಬಜೆಟ್ ಇದಾಗಿದೆ. ಬೆಂಗಳೂರು ಭಾಗಶಃ ಹೊರತು ಪಡಿಸಿ, ಇತರೆ ಮುಖ್ಯ ನಗರಗಳಿಗೆ ಯಾವುದೇ ರೀತಿಯ ಅನುಕೂಲವನ್ನು ಈ ಬಜೆಟ್ ಕಲ್ಪಿಸಿಲ್ಲ. ಮೈಸೂರು, ಬೆಳಗಾವಿ, ಕಲಬುರ್ಗಿ, ಮಂಗಳೂರು ನಗರಗಳ ಸ್ಮಾರ್ಟ್ ಸಿಟಿ ಯೋಜನೆಯ ದೂರ ದರ್ಶಿತ್ವ ಹಾಗೂ ಸಮಗ್ರ ಅಭಿವೃದ್ದಿಗೆ ಹೊಂದಿರುವ ಯಾವುದೇ ರೀತಿಯ ಆರ್ಥಿಕ ಯೋಜನೆ ನೀಡದೆ ಪ್ರಮುಖ  ನಗರಗಳನ್ನು ಕಡೆಗಣಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಸಹ ಸಂಚಾಲಕ ಮೋಹನ್ ದಾಸರಿ ಆರೋಪಿಸಿದ್ದಾರೆ.

ಇತರ ನಗರಗಳನ್ನೂ ಅಭಿವೃದ್ಧಿ ಪಡಿಸದಿದ್ದರೆ ರಾಜ್ಯಕ್ಕೆ ಹೂಡಿಕೆದಾರರು ಬರುವುದಿಲ್ಲ ಹಾಗೂ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈಗಾಗಲೇ ಇರುವ ಪ್ರಾದೇಶಿಕ ಅಸಮತೋಲನ ಮತ್ತಷ್ಟು ಹೆಚ್ಚಾಗುತ್ತಿದೆ. ಇದರಿಂದಾಗಿ ರಾಜ್ಯದ ಜನತೆ ಅನ್ನಕ್ಕಾಗಿ ಗುಳೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಲು ಯೋಜನೆ ರೂಪಿಸುವಲ್ಲಿ ಸರ್ಕಾರದ ದೂರ ದೃಷ್ಟಿಯ ಕೊರತೆ ಎದ್ದು ಕಾಣುತ್ತದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಕೇವಲ ಶೇ. 4 ಬಜೆಟ್ ಇಟ್ಟುಕೊಂಡು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವೇ ಇಲ್ಲ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶೈಶಾವಾವಸ್ಥೆಯಲ್ಲಿ ಇದ್ದು. ಇವುಗಳನ್ನು ಉನ್ನತೀಕರಿಸಲು ಆರೋಗ್ಯ ಇಲಾಖೆಗೆ ನೀಡಿರುವ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ರಾಜ್ಯದ ಬಡ ಜನತೆ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುವ ಹುನ್ನಾರ ಇದರಲ್ಲಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಣ ವ್ಯವಸ್ಥೆ ಬದಲಾಯಿಸ ಬೇಕೆಂದರೆ ಬರೀ ಶಿಕ್ಷಕ ಮಿತ್ರ ಎಂಬ ತಂತ್ರಾಶದಿಂದ ಸಾದ್ಯವಿಲ್ಲ. ದೆಹಲಿಯಲ್ಲಿ ಶೇ 24 ರಷ್ಟು ಬಜೆಟ್ ಅನ್ನು ಮೀಸಲಿಟ್ಟು ಇಡೀ ದೇಶವೇ ದೆಹಲಿಯತ್ತ ನೋಡುವಂತಹ ಮಾದರಿ ವ್ಯವಸ್ಥೆ ಹಾಗೂ ಶಿಕ್ಷಣ ಕ್ರಾಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಮೀಸಲಿಟ್ಟಿರುವ ಶೇ 11 ಅನುದಾನದಿಂದ ಮಾಡಲು ಯಾವುದೇ ಕಾರಣಕ್ಕೂ ಸಾದ್ಯವಿಲ್ಲ.

ಪ್ರವಾಹದಿಂದ ನಾಶವಾದ 6,064 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ 774 ಕೋಟಿ ರೂಪಾಯಿ ಆನೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಮುಂಬರುವ ಶೈಕ್ಷಣಿಕ ವರ್ಷಗಳಲ್ಲೂ ಸಹ ರಾಜ್ಯದ ಲಕ್ಷಾಂತರ ಮಕ್ಕಳು ಶಾಲಾ ಕೊಠಡಿಗಳು ಇಲ್ಲದೇ ವಿದ್ಯಾಬ್ಯಾಸದಿಂದ ವಂಚಿತರಾಗುವ ಆತಂಕ ಎದ್ದು ಕಾಣುತ್ತಿದೆ.

ರಾಜ್ಯದ ರೈತರು ಕೃಷಿ ಸಾಲ ಮನ್ನಾ, ಕೃಷಿ ಬೆಂಬಲಬೆಲೆಯ ನಿರೀಕ್ಷೆಯೂ ಈಡೇರಿಲ್ಲ. 24 ಗಂಟೆಗಳ ಕಾಲ 2 ಫೇಸ್ ವಿದ್ಯುತ್ ನೀಡುವ ಬಗ್ಗೆ ಯಾವುದೇ ರೀತಿಯ ಪ್ರಾಸ್ತಾವನೆಯೇ ಇಲ್ಲ. ರಾಜ್ಯದ ಪ್ರಮುಖ ನೀರಾವರೀ ಯೋಜನೆಗಳಾದ ಭ್ರದ್ರಾ ಮೇಲ್ದಂಡೆ ಮತ್ತು ಬಳಕೆ ಆಗದಿರುವ ಕೃಷ್ಣಾ ಬೀ ಸ್ಕೀಂ ಬಗ್ಗೆ ಯಾವುದೇ ಯೋಜನೆಗಳಿಲ್ಲ ಎಂದು ಟೀಕಿಸಿದ್ದಾರೆ.

ರಾಜಧಾನಿಯ ಸಬ್ ಅರ್ಬನ್ ರೈಲು ಯೋಜನೆಯ ಗಾತ್ರ 19 ಸಾವಿರ ಕೋಟಿ. ಇದರಲ್ಲಿ ರಾಜ್ಯದ ಪಾಲು ಕೇವಲ ಶೇ 20 ರಂತೆ ಇದಕ್ಕೆ 3 ಸಾವಿರದ 800 ಕೋಟಿ ಮೀಸಲಿಡುವ ಜಾಗದಲ್ಲಿ ಕೇವಲ 500 ಕೋಟಿ ನೀಡಿ ಬೆಂಗಳೂರಿಗರ ಬಹುಕಾಲದ ಟ್ರಾಫಿಕ್ ಸಮಸ್ಯೆ ನೀಗಿಸುವ ದೃಷ್ಠಿಯಲ್ಲಿ ಭ್ರಮನಿರಸನಗೊಳಿಸಿದೆ.

ಬಿಬಿಎಂಪಿ, ಬಿಡಿಎ, ಬಿಡಬ್ಲೂ ಎಸ್ಎಸ್ಬಿ ಇನ್ನು ಮುಂತಾದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ. ಇದರಿಂದ ಬೆಂಗಳೂರಿನ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು, ಕಾಮಗಾರಿಯ ನೆಪದಲ್ಲಿ ಲೂಟಿಮಾಡುವ ಪ್ರಕ್ರಯೆಗೆ ಅಂಕುಶ ಹಾಕುವ ಪ್ರಸ್ತಾವನೆ ಕಾಣುತ್ತಿಲ್ಲ.
ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋಗಿದ್ದ ರಾಜ್ಯದ ಜನರಿಗೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆಹಾಕಿದಂತಾಗಿದೆ.

ಒಟ್ಟಾರೆಯಾಗಿ 2020- 21 ರ ಬಜೆಟ್ ರಾಜ್ಯದ ಜನ ವಿರೋಧಿ ರೈತ ವಿರೋಧಿ, ಶಿಕ್ಷಣ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿ ವಿರೋಧಿ ಬಜೆಟ್‌ ಇದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights