ಫ್ಯಾಕ್ಟ್‌ಚೆಕ್ : ಸಂಸದ ತೇಜಸ್ವಿ ಸೂರ್ಯನಿಂದ ಮತ್ತೊಂದು ಸುಳ್ಳು
ಅರಿಶಿನ ಕುಂಕುಮ ಬಳಸದೇ ಆಯುಧ ಪೂಜೆ ಮಾಡಿ ಎಂದು ಕಾಂಗ್ರೆಸ್ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂದು ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿವೆ.

ಇಂಡಿಯಾ ಒಕ್ಕೂಟ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದೂಗಳ ವಿರುದ್ಧ ಆದೇಶ ಹೊರಡಿಸಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿ ಟ್ವೀಟ್ ಮಾಡಿದ್ದಾರೆ.
I.N.D.I.A ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲೆ ದ್ವೇಷ ಮತ್ತು ತಿರಸ್ಕಾರ ಮಾಡುವುದರಲ್ಲಿ ಒಂದಾಗಿದ್ದಾರೆ. ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿವೆ.
2 states. 2 GOs. One target – Ayudha Puja.
There may be hundred differences between I.N.D.I alliance parties, but they are united in their hatred and contempt for the indigenous culture of this land.
DMK Govt in TN & Congress Govt in Karnataka have both issued GOs today… pic.twitter.com/ZimJ3keoI3
— Tejasvi Surya (@Tejasvi_Surya) October 18, 2023
ಹಿಂದಿನಿಂದಲೂ ದಕ್ಷಿಣ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳ ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾ ಬಂದಿದ್ದಾರೆ. ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಮೈತ್ರಿಕೂಟ ತನ್ನ ತಡೆಯೊಡ್ಡಿದೆ ಎಂಬ ಹೇಳಿಕಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಆಯುಧ ಪೂಜೆಯಲ್ಲಿ ಅರಿಶಿನ ಕುಂಕುಮ ಬಳಸಬಾರದು ಎಂದು ಹೇಳಿದೆಯೇ ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿ ಮಾಡಿರುವ ತಲೆ ಬರಹದಲ್ಲಿ ವಿಧಾನ ಸೌಧದಲ್ಲಿ ಅರಿಶಿನ ಕುಂಕುಮ ಬಳಸದೆ ಆಯುಧ ಪೂಜೆ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ ಎಂಬು ವರದಿಮಾಡಿದೆ. ಇದ್ಕೆ ಇಂಬು ನೀಡುವಂತೆ BJP ಸಂಸದ ತೇಜಸ್ವಿ ಸೂರ್ಯ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕದೊಂದಿಗೆ ತಮಿಳುನಾಡು ಸರ್ಕಾರವನ್ನು ಸೇರಿಸಿ X ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ವಾಸ್ತವವಾಗಿ ಆದೇಶದಲ್ಲಿ ಏನಿದೆ ಗೊತ್ತೇ?
ಆಯುಧ ಪೂಜೆ ಸಂದರ್ಭದಲ್ಲಿ ಯಾವುದೇ ರೀತಿಯ ರಾಸಾಯಾನಿಕ ಮಿಶ್ರಿತ ವಸ್ತಗಳನ್ನು ಬಳಸದಂತೆ ಆದೇಶ ಹೊರಡಿಸಿದೆ. ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಆಯುಧಪೂಜೆ ವೇಳೆ ಕಛೇರಿ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಸೂಚಿಸಲಾಗಿದೆ

ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ?
ʼʼಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆʼʼ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ (ಟ್ವೀಟ್) ಪೋಸ್ಟ್ ಮಾಡಿದ್ದಾರೆ.
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ… pic.twitter.com/5QguMBgWg0
— Siddaramaiah (@siddaramaiah) October 19, 2023
ಹಿಂದಿನ ಸರ್ಕಾರ ಅಂದರೆ BJP ಆಡಳಿತದ ಅವಧಿಯಲ್ಲೂ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿರುವುದನ್ನು ಕಾಣಬಹುದು. ಈ ಹಳೆಯ ಆದೇಶಗಳನ್ನು ಪರಿಶೀಲಿಸಿದಾಗ 2020 ಮತ್ತು 2021ರಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಿರುವುದು ಕಂಡುಬಂದಿದೆ.
ಬಿಜೆಪಿ ಆಳ್ವಿಕೆಯಲ್ಲಿಯೂ ಸಹ “ಅರಿಶಿನ ಕುಂಕುಮ ಸೇರಿ ರಾಸಾಯನಿಕ ವಸ್ತುಗಳನ್ನು ವಿಧಾನಸೌಧದಂತಹ ಪಾರಂಪರಿಕ ಕಟ್ಟಡಗಳಲ್ಲಿ ಬಳಸದಿರುವಂತೆ” ಪ್ರತಿ ವರ್ಷವೂ ಸುತ್ತೋಲೆ ಹೊರಡಿಸಲಾಗಿದೆ. 2021, 2022 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ಸುತ್ತೋಲೆ ಹೊರಡಿಸಿದೆ.
ವಾಸ್ತವವಾಗಿ ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಲು ಅವಕಾಶವಿಲ್ಲ. ಆದರೆ ದಸರಾ ಮತ್ತು ಆಯುಧ ಪೂಜೆ ನಾಡಿನ ಹಬ್ಬ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ರಾಸಾಯನಿಕ ವಸ್ತುಗಳಿಂದ ಕೂಡಿದ ಸಾಮಗ್ರಿಗಳನ್ನು ಬಳಸದಿರುವುದು ಜನಸಾಮಾನ್ಯರಿಗೆ ಮಾದರಿ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಸಂಸದ ತೇಜಸ್ವಿ ಸೂರ್ಯ ಜನಸಾಮಾನ್ಯರಿಗೆ ಸರ್ಕಾರದ ಮೇಲೆ ತಪ್ಪು ಭಾವನೆ ಬರುವಂತೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮನಸ್ಸಲ್ಲಿ ಬಿತ್ತುವ ಉದ್ದೇಶದಿಂದ ಹಿಂದಿನಿಂದಲೂ (ಹಳೆಯ ) ಚಾಲ್ತಿಯಲ್ಲಿರುವ ಸರ್ಕಾರಿ ಅದೇಶವನ್ನು ಸಂಸದ ತೇಜಸ್ವಿ ಸೂರ್ಯ ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಂಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಕಂಪಗಳಿಸಲು ಪ್ಯಾಲಸ್ತೇನಿ ಜನರು ಸಾವು ನೋವಿನ ನಾಟಕವಾಡುತ್ತಿದ್ದಾರಾ?

