ಫ್ಯಾಕ್ಟ್‌ಚೆಕ್ : ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಕಂಪಗಳಿಸಲು ಪ್ಯಾಲಸ್ತೇನಿ ಜನರು ಸಾವು ನೋವಿನ ನಾಟಕವಾಡುತ್ತಿದ್ದಾರಾ?

ಇಸ್ರೇಲ್ ಮತ್ತು ಪ್ಯಾಲಸ್ತೇನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಹಿನ್ನಲೆಯಲ್ಲಿ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಫ್ಯಾಲಸ್ತೇನಿಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಾನಭೂತಿ ಗಳಿಸಲು ಘರ್ಷಣೆ ವೇಳೆ ಗಾಯಗೊಂಡವರಂತೆ ಇನ್ನೂ ಕೆಲವರು ಶವವನ್ನು ಮೆರವಣಿಗೆ ಮಾಡುತ್ತಿರುವಂತೆ ನಾಟಕ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಒಂದು ವಿಡಿಯೋದಲ್ಲಿ  “ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ವಿಕ್ಟಿಮ್ ಕಾರ್ಡ್ ಗೆ ಸ್ವಾಗತ. ಇಲ್ಲಿ ನೀವು ರಾಸಾಯನಿಕವನ್ನು ಬಳಸಿಕೊಂಡು ಪೂರ್ಣ ಮೇಕಪ್ ಮಾಡುವುದು ಮತ್ತು ಅಳುವುದು ಹೇಗೆ ಎಂದು ಕಲಿಯಬಹುದು ಮತ್ತು ನಂತರ ಇಸ್ರೇಲ್ ಅನ್ನು ದೂಷಿಸಬಹುದು. ಈ ವಿಶ್ವವಿದ್ಯಾಲಯವು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನು ಹೊಂದಿದೆ.” ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ವಿಡಿಯೋ : 1

ಫ್ಯಾಕ್ಟ್‌ಚೆಕ್ :

ಇದು 2017ರ ಹಳೆಯ ವಿಡಿಯೋ ಆಗಿದ್ದು, ಚಿತ್ರದಲ್ಲಿರುವಾಕೆ ಮರಿಯಮ್ ಸಲಾಹ್ ಪ್ಯಾಲಸ್ಟೈನ್ ಮೆಕಪ್ ಕಲಾವಿದೆಯಾಗಿದ್ದು, ಗಾಜಾ ಪಟ್ಟಿಯಲ್ಲಿ ನಡೆದ ಸಿನಿಮಾವೊಂದರ ಯುದ್ಧದ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಈ ವಿಡಿಯೋ ಮಾಡಲಾಗಿದೆ. ಈ ವಿಡಿಯೋವನ್ನು “ಐ ಲವ್ ಇಸ್ರೆಲ್” ಎಂಬ ಯೂಟೂಬ್ ಚಾನೆಲ್‌ನಲ್ಲಿ ಫೆಬ್ರವರಿ 14, 2019ರಂದು ಪ್ರಕಟಿಸಲಾಗಿದೆ. “ಮೇಕಪ್ ಕಲಾವಿದರು ಗಾಜಾ ಚಲನಚಿತ್ರೋದ್ಯಮದಲ್ಲಿ ಲಿಂಗ ತಡೆಗೋಡೆಯನ್ನು ಮುರಿದಿದ್ದಾರೆ.” ಎಂಬ ಶೀರ್ಷಿಕೆ ಅಡಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಟರ್ಕಿ ಮೂಲದ ವೆರಿಫೈಡ್ ಯೂಟ್ಯೂಬ್ ಚಾನೆಲ್ TRT ವರ್ಲ್ಡ್ ಮಾರ್ಚ್ 2, 2017 ರಂದು ಪ್ರಕಟಿಸಿದ ವೀಡಿಯೊವೊಂದರಲ್ಲಿ ವಿಸ್ತೃತವಾಗಿ ಈ ಮೇಕಪ್ ಕಲಾವಿದೆಯ ಕುರಿತು ವರದಿ ಮಾಡಲಾಗಿದೆ. “ಗಾಝಾ ಪಟ್ಟಿಯಲ್ಲಿ ಹೆಚ್ಚು ಚಲನಚಿತ್ರ ನಿರ್ಮಾಣಗಳಿಲ್ಲ. ಆದರೆ ಅದು ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರ ಕನಸನ್ನು ಅನುಸರಿಸುವುದನ್ನು ತಡೆಯಲಿಲ್ಲ. ಸಾಂಪ್ರದಾಯಿಕವಾಗಿ ಪುರುಷರು ನಡೆಸುವ ವ್ಯವಹಾರಕ್ಕೆ ಪ್ರವೇಶಿಸುವ ಪ್ಯಾಲೆಸ್ಟೈನ್ ಚಲನಚಿತ್ರಗಳಿಗೆ ನಕಲಿ ರಕ್ತವನ್ನು ತಯಾರಿಸಲು ಅವರು ಸ್ವತಃ ಕಲಿತರು” ಎಂದು ವೀಡಿಯೊದ ವಿವರಣೆಯಲ್ಲಿ ಬರೆಯಲಾಗಿದೆ.

ಆದ್ದರಿಂದ ಕರುಣೆ ಗಿಟ್ಟಿಸಲು ಪ್ಯಾಲೇಸ್ತೇನಿಗಳು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು.

ವಿಡಿಯೋ : 2

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವಿಡಿಯೋದಲ್ಲಿ ಶವದ ಮೆರವಣಿಗೆಯನ್ನು ಮಾಡುತ್ತಿರುವಾಗ ಇಸ್ರೇಲ್‌ನ ಯುದ್ದ ಟ್ಯಾಂಕರ್ ಮಾಡುವ ಸೈರನ್‌ಗೆ ಹೆದರಿ ಎಲ್ಲರೂ ಓಡಿ ಹೋಗುವ ಕೊನೆಗೆ ಶವದಂತೆ ನಟಿಸುತ್ತಿದ್ದವನೂ ಓಡಿ ಹೋಗುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ :

ಇಸ್ರೇಲ್ ಸೈನಿಕರು ನಡೆಸಿದ ದಾಳಿಯಲ್ಲಿ ಪ್ಯಾಲಸ್ತೇನ್ ನಾಗರೀಕರು ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿ ಅನುಕಂಪ ಗಳಿಸಲು ಪ್ಯಾಲಸ್ತೇನಿಗಳು ಶವಯಾತ್ರೆ ಮಾಡುತ್ತಿರುವಂತೆ ನಾಟಕವಾಡುತ್ತಿದ್ದಾರೆ ಎಂಬ ವೈರಲ್ ವಿಡಿಯೋವನ್ನು ಪರಿಶೀಲಿಸಿದಾಗ, ವೈರಲ್ ವಿಡಿಯೋಗೂ ಪ್ಯಾಲಸ್ತೇನುಗೂ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.

ಯುವಕರು ಅಂತ್ಯಕ್ರಿಯೆಯನ್ನು ನಡೆಸುತ್ತಿರುವುದನ್ನು ಚಿತ್ರಿಸುವ ದೃಶ್ಯವು 2020 ರ ಹಿಂದಿನದು. ವಾಸ್ತವಾಗಿ, ಇದು ಜೋರ್ಡಾನ್ ಯುವಕರ ಒಂದು ಸಣ್ಣ ಗುಂಪು ಅಂತ್ಯಕ್ರಿಯೆಯನ್ನು ನಡೆಸುವಂತೆ ನಟಿಸುವ ಮೂಲಕ ತಮ್ಮ ದೇಶದಲ್ಲಿ ವಿಧಿಸಿದ್ದ COVID-19 ಲಾಕ್‌ಡೌನ್ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಹೀಗೆ ಮಾಡಿದ್ದಾರೆ ಎಂದು ಗೂಗಲ್ ರಿವರ್ಸ್ ಇಮೇಜಸ್‌ ಮೂಲಕ ಸರ್ಚ್ ಮಾಡಿದಾಗ ತಿಳಿದು ಬಂದಿದೆ.

ಇಸ್ರೇಲ್-ಹಮಾಸ್ ಯುದ್ಧ ಒಂದೆಡೆ ಜಗತ್ತನ್ನು ಕಂಗೆಡಿಸುತ್ತಿದ್ದರೆ, ಹಸಿ ಹಸಿ ಸುಳ್ಳು ಸುದ್ದಿಗಳ ಮೂಲಕ ದ್ವೇಷ ಹರಡುವ ನೀಚತನವೊಂದು ಮತ್ತೊಂದೆಡೆ ಯುದ್ಧದಷ್ಟೇ ಭಯಾನಕವಾಗಿ ಸಾಗಿದೆ. ಟ್ವಿಟರ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳು ಫೇಕ್ ನ್ಯೂಸ್ನಿಂದ ತುಂಬಿಹೋಗಿವೆ. ದ್ವೇಷ ಕಾರುವ ಇಂಥ ಫೇಕ್ ನ್ಯೂಸ್ಗಳ ಹರಡುವಿಕೆಯಲ್ಲಿ ಮುಖ್ಯ ವಾಹಿನಿಯ ನ್ಯೂಸ್ ಚಾನೆಲ್ಲುಗಳೇನು ಹಿಂದೆ ಬಿದ್ದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ಯಾಲೆಸ್ತೇನಿನಲ್ಲಿ ಅನುಕಂಪಕ್ಕಾಗಿ ಗಾಯಗೊಂಡವರಂತೆ ಪ್ರಾಣಕಳೆದುಕೊಂಡವರಂತೆ ನಟಿಸುತ್ತಿದ್ದಾರೆ ಎಂದು ಪ್ಯಾಲಸ್ತೇನ್‌ಗೆ ಸಂಬಂಧಿವಿಲ್ಲದ ದೃಶ್ಯಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಸಂಸದ ಮತ್ತು ಶಾಸಕರು ಪರಸ್ಪರ ಬೂಟಿನಲ್ಲಿ ಹೊಡೆದಾಡಿಕೊಳ್ಳುತ್ತಿರುವ ದೃಶ್ಯಗಳು ಎಲ್ಲಿಯದು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights