ಲಸಿಕೆಗೂ ಮುನ್ನವೇ ಶಾಲೆಗಳ ಆರಂಭ: ಮಕ್ಕಳ ಬದುಕಿನಲ್ಲಿ ಸರ್ಕಾರ ಚೆಲ್ಲಾಟ.?

ಕೊರೊನಾ ಆತಂಕ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲೇ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಯೋಚಿಸದೆ 10 ವರ್ಷದೊಳಗಿನ ಮಕ್ಕಳ ಶಾಲಾರಂಭಕ್ಕೂ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ದ ಪೋಷಕರ ಆಕ್ರೋಶ ಭುಗಿಲೆದ್ದಿದೆ. ಲಸಿಕೆಗೂ ಮುನ್ನವೇ ಶಾಲಾರಂಭದ ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಸರ್ಕಾರಕ್ಕೆ ಸವಾಲೆಂಬಂತಾಗಿದೆ.

ಬೆಳಗಾವಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪೋಷಕರು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಶಿಕ್ಷಕರು ಎರಡೆರಡು ಡೋಸ್ ಲಸಿಕೆ ಪಡೆಯಲೇಬೇಕೆಂದು ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಮಕ್ಜಳ ಸುರಕ್ಷತೆ ಬಗ್ಗೆ ಯೋಚಿಸಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಮಕ್ಕಳಿಗೆ ಲಸಿಕೆ ಸಿಗುವವರೆಗೂ ಶಾಲಾರಂಭದ ನಿರ್ಧಾರವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಏನಿದೆ..?

ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಇನ್ನೂ ಹತೋಟಿಗೆ ಬಂದಿಲ್ಲ. ಇದೀಗ ಮೂರನೇ ಅಲೆಯ ಆತಂಕ ಕಾಡುತ್ತಿರುವಾಗಲೇ ಕರ್ನಾಟಕ ಸರ್ಕಾರ ಶಾಲಾರಂಭದ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಕೋವಿಡ್ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆದರೂ ಕರ್ನಾಟಕ ಸರ್ಕಾರ ಆತುರದ ನಿರ್ಧಾರ ಕೈಗೊಂಡು 1ರಿಂದ 5ನೇ ತರಗತಿವೆರೆಗಿನ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕ್ರಮವನ್ನು ರಾಜ್ಯದ ಪ್ರಜ್ಞಾವಂತರು ಒಪ್ಪಲು ಸಾಧ್ಯವಿಲ್ಲ.

ಎಲ್ಲಾ ವಿಚಾರಗಳಿಗೂ ಎರಡೆರಡು ವ್ಯಾಸಿನೇಶನ್ ಪಡೆಯದವರಿಗೆ ಅವಕಾಶ ಇಲ್ಲ ಎನ್ನುತ್ತಿರುವ ಸರ್ಕಾರವು ಶಿಕ್ಷಕರೂ ಎರಡೆರಡು ಡೋಸ್ ಲಸಿಕೆ ಪಡೆದಿರಲೇಬೇಕು ಎಂದು ಮಾರ್ಗಸೂಚಿ ಪ್ರಕಟಿಸಿದೆ. ಆದರೆ ಮಕ್ಕಳಿಗೆ ಲಸಿಕೆ ಕೊಡಿಸುವ ಬಗ್ಗೆ ಯಾವ ಪ್ರಸ್ತಾಪವನ್ನೂ ಸರ್ಕಾರ ಮಾಡಿಲ್ಲ. ವಿದೇಶಗಳಿಗೆ ತೆರಳಲು ವ್ಯಾಕ್ಸಿನೇಷನ್‌ ಅಗತ್ಯವಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೊರೋನಾ ಲಸಿಕೆ ಪಡೆದಿರಲೇಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಹೀಗಿರುವಾಗ ಶಾಲೆಗಳ ವಿಚಾರದಲ್ಲಿ ವ್ಯತಿರಿಕ್ತ ನಿಲುವು ತಾಳಿದೆ.

ಕರ್ನಾಟಕ ಸರ್ಕಾರ ಪೋಷಕರ ಅಭಿಪ್ರಾಯ ಪಡೆಯದೇ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿರುವುದು ಆಕ್ಷೇಪಾರ್ಹ ನಿರ್ಧಾರವಾಗಿದೆ. ಹಾಗಾಗಿ 10 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳುವವರೆಗೂ ಶಾಲೆಗಳ ಆರಂಭ ಮಾಡಬಾರದು. ಪೋಷಕರ ಹಾಗೂ ವೈದ್ಯರ ಆಕ್ಷೇಪಣೆಗಳಿವೆಯೇ ಎಂಬ ಮಾಹಿತಿ ಸಂಗ್ರಹಿಸಬೇಕು. ಆವರೆಗೂ 1-5ನೇ ತರಗತಿ ಶಾಲಾರಂಭಕ್ಕೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಮುಝಫರ್‌ನಗರ ಕೋಮುಗಲಭೆ ಪ್ರಕರಣ: ಬಿಜೆಪಿ ಶಾಸಕ ಸೇರಿ 12 ಮಂದಿ ಖುಲಾಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights