ಹಳ್ಳಿ ಮಾತು-5: ಕಿಸಾನ್ ಸಮ್ಮಾನ್ ಹೆಸರಿನಲ್ಲಿ ಏರ್ ಟೆಲ್ ಲೂಟಿಗೆ ರಹದಾರಿ?

‘ಕಾದಿದ್ದ ಕಣವ ಕಳ್ಳ ದೋಚಿದ’ ಎಂಬ ಗಾದೆ ಮಾತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚೆನ್ನಾಗಿ ಅನ್ವಯಿಸುತ್ತದೆ. ಆಧಾರ್ ಕಾರ್ಡ್ ನ ಆಧಾರದಲ್ಲಿ ವರ್ಗಾವಣೆ ಆಗುತ್ತಿರುವ ತಲಾ 2000 ರೂ ನಂತೆ ವಾರ್ಷಿಕ ಮೂರು ಕಂತುಗಳ ಈ ಹಣ ಪ್ರಧಾನ ಮಂತ್ರಿ ಕಛೇರಿ ದಾಟಿದ ಮೇಲೆ, ಕೃಷಿ ಇಲಾಖೆ ದೃಡೀಕರಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುತ್ತಿಲ್ಲ.

ಎಲ್ಲ ಹಣವೂ ಹೀಗೆ ಆಗುತ್ತಿಲ್ಲ; ಆದರೆ ಗಣನೀಯ ಪ್ರಮಾಣದ ಹಣ ದಾರಿ ಮಧ್ಯದಲ್ಲಿ ಕಾಣೆ ಆಗುತ್ತಿರುವುದಂತೂ ಸತ್ಯ: ಈ ಉದಾಹರಣೆ ನೋಡಿ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕಸಬಾ ಹೋಬಳಿ ವಳೆಗೆರಹಳ್ಳಿ ಗ್ರಾಮದ ಲೇಟ್ ಚಿಕ್ಕಮುತ್ತಯ್ಯರವರ ಮಗ ವಿ.ಸಿ.ರಾಮು ‘ಕಿಸಾನ್ ಸಮ್ಮಾನ್’ ಬಯಸಿದವರು.ಇವರ ಅರ್ಜಿ ನೊಂದಣಿ ಸಂಖ್ಯೆ ಹಾಗೂ ದಿನಾಂಕ ಕ್ರಮವಾಗಿ KA 221199442 ಹಾಗೂ 12-06-19. ಇವರ ಎಲ್ಲಾ ದಾಖಲಾತಿಗಳು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಹೀಗೆ ಎಲ್ಲವನ್ನು ಪರೀಶೀಲಿಸಿ ಸ್ವೀಕರಿಸಲಾಗಿದೆ. ಪಿಎಂ ಕಿಸಾನ್ ನಿಧಿ ವೆಬ್ ಸೈಟ್ ಪ್ರಕಾರ ಪ್ರಥಮ ಕಂತು ಇವರ ಬ್ಯಾಂಕ್ ಖಾತೆಗೆ ದಿನಾಂಕ 14-11-2019 ರಂದು UTR no 3393280175 ಮೂಲಕ, ಎರಡನೇ ಕಂತು 21-11-19 ರಂದು UTR no 3526914295, ಮೂರನೇ ಕಂತು 2-1-2020 ರಂದು UTR no 4370734000 ಮೂಲಕ ಹಾಗೂ ನಾಲ್ಕನೇ ಕಂತು 9-4-2020 ರಂದು UTR no 6694653249 ರ ಮೂಲಕ ಸಂದಾಯವಾಗಿದೆ. ಆದರೆ ಇವರ ಉಳಿತಾಯ ಖಾತೆ ಇರುವ ಎಸ್ ಬಿ ಐ ಮದ್ದೂರು ಶಾಖೆಗೆ ಈ ಸಂಬಂಧ ಯಾವ ಹಣವೂ ಬಂದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇವರು ಹೊಂದಿರುವ ಖಾತೆ ಇದೊಂದೇ. ಇವರ ಇನ್ನೆರಡು ಉಳಿತಾಯ ಖಾತೆಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸೇರಿದಂತೆ ಸಹಕಾರ ಸಂಘಗಳ ಬ್ಯಾಂಕ್ ಗಳೇ.ಇವುಗಳಿಗೆ ನಿಧಿ ವರ್ಗಾಯಿಸುವ PFMS (ಪಬ್ಲಿಕ್ ಫಂಡ್ ಮೆಯ್ನಂಟೇನೆನ್ಸ್ ಸಿಸ್ಟಮ್) ನ ಮಾನ್ಯತೆ ಇಲ್ಲ. ಹಾಗಾಗಿ ಇಲ್ಲೂ ಕೂಡ ಹಣ ಬಂದಿಲ್ಲ.

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಾಗಿರುವ ವಿ.ಸಿ ರಾಮು, ಕಛೇರಿಗಳನ್ನು ಸುತ್ತಾಡಿದ ಅನುಭವ ಇರುವ ರೈತ. ಹಾಗಾಗಿ, ಬ್ಯಾಂಕ್ ಗೆ ಹೋಗಿ ವಿಚಾರಿಸಿದರೆ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ನನ್ನ ‘ಕಿಸಾನ್ ಸಮ್ಮಾನ್’ ಹಣ ಎಲ್ಲಿ ಹೋಗಿದೆ ಹುಡುಕಿ ಎಂದು ಮದ್ದೂರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ವಿ.ಸಿ.ರಾಮುವಿನಂತೆಯೇ ಉಪ್ಪಿನಕೆರೆ ಗ್ರಾಮದ ಶಿವಲಿಂಗಯ್ಯ ಹಾಗೂ ಜಯಮ್ಮ, ಹುಲಿಗೆರೆಪುರ ಗ್ರಾಮದ ರಾಮಲಿಂಗಯ್ಯ ಕೂಡ ಮದ್ದೂರು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ.

ಇದೇ ರೀತಿ ಮದ್ದೂರು ತಾಲ್ಲೂಕು ಒಂದರಲ್ಲೇ ಐವತ್ತಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ಪಿ ಎಂ ಕಿಸಾನ್ ವೆಬ್ ಸೈಟ್ ನಲ್ಲಿ ಹಣ ವಿತರಣೆಯಾದ ದಾಖಲೆ ಇದ್ದು, ಬ್ಯಾಂಕ್ ಗೆ ಸಂದಾಯವಾಗದ ಪ್ರಕರಣಗಳು ತಾಲ್ಲೂಕೊಂದರಲ್ಲೇ ಐವತ್ತಕ್ಕೂ ಹೆಚ್ಚು ದೂರು ಅರ್ಜಿಗಳು ಬಂದಿದ್ದರೆ ಇಡೀ ದೇಶದಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಲೆಕ್ಕ ಹಾಕುವುದು ಕಷ್ಟವೇನಲ್ಲ. ದೂರು ಅರ್ಜಿ ಸಲ್ಲಿಸದವರ ಸಂಖ್ಯೆಯ ಪ್ರಮಾಣವನ್ನು ಸಹ ಪರಿಗಣಿಸಿದರೆ ಲಕ್ಷಾಂತರ ಸಂಖ್ಯೆ ಆಗುವುದರಲ್ಲಿ ಸಂಶಯವೇ ಇಲ್ಲ. ಗಮನಿಸಿ; ಇದು ಪೇಮೆಂಟ್ ವಿತರಣೆಯಾಗಿ ಬ್ಯಾಂಕ್ ಗೆ ಒಂದೂ ಕಂತು ಪಡೆಯದ ಫಲಾನುಭವಿಗಳ ಸಂಖ್ಯಾ ಪ್ರಮಾಣ ಮಾತ್ರ!

ಕೊಪ್ಪ ಹೋಬಳಿ ಚಿಕ್ಕೊನಹಳ್ಳಿ ಗ್ರಾಮದ ಸಿದ್ದೇಗೌಡ ಅಲಿಯಾಸ್ ತಮ್ಮಯ್ಯ ರವರ ಪತ್ನಿ ಜಯಮ್ಮ, ಹೊಂಬಾಳೇಗೌಡನ ದೊಡ್ಡಿ ಗ್ರಾಮದ ಗೂಳೀಗೌಡರ ಮಗ ಶಿವರಾಮು ಒಂದೂ ಕಂತು ಬರದೇ ಇದ್ದರೂ ವಿಚಾರಿಸಲು ಕೃಷಿ ಇಲಾಖೆಗೆ ಹೋಗಿಲ್ಲ.ಇಂತಹವರ ಪಟ್ಟಿಯೂ ಗಮನಾರ್ಹ ಪ್ರಮಾಣದಲ್ಲಿ ಇದೆ.  ಮದ್ದೂರು ತಾಲ್ಲೂಕು ಆತಗೂರು ಹೋಬಳಿ ಅಡಗನಹಳ್ಳಿ ಗ್ರಾಮದ ರಾಮೇಗೌಡರ ಪತ್ನಿ ಸುಜಯಮ್ಮ, ತಮ್ಮಯ್ಯರವರ ಮಗ ಹರೀಶ್, ಬಿಳೀಗೌಡರ ಮಗ ಶಿವಸ್ವಾಮಿ ಹಾಗೂ ಗೊರವನಹಳ್ಳಿ ಗ್ರಾಮದ ಬೋರೆಗೌಡ ಇವರೆಲ್ಲರಿಗೂ ಒಂದು ಕಂತು ಮಾತ್ರ ಬಂದಿದ್ದು ಉಳಿದ ನಾಲ್ಕು ಕಂತುಗಳು (ರಾಜ್ಯ ಸರ್ಕಾರದ ಒಂದು ಕಂತು ಸೇರಿ) ಇನ್ನು ಸಂದಾಯವಾಗಿಲ್ಲ. ಇಂತಹವರ ಪಟ್ಟಿ ಕೂಡ ಪ್ರತಿ ಗ್ರಾಮದಲ್ಲೂ ಸಾಕಷ್ಟು ದೊಡ್ಡದಿದೆ.

ಬೆಳತೂರು ಗ್ರಾಮದ ಈರೇಗೌಡರ ಮಗ ಪುಟ್ಟಸ್ವಾಮಿಯಂತೆ ಕೆಲವರಿಗೆ ಎರಡು ಕಂತು ಮಾತ್ರ ಬಂದಿದ್ದರೆ ಮತ್ತೂ ಕೆಲವರಿಗೆ ಮೂರು ಕಂತು ಮಾತ್ರ ಬಂದಿದೆ. 5 ಕಂತು ಹಣ ಪಡೆದವರು ಮಾತ್ರ ಈಗ ಗ್ರಾಮದಲ್ಲಿ ಗಣ್ಯರಾಗಿ ಕಂಗೊಳಿಸುತ್ತಿದ್ದಾರೆ. ಹಳ್ಳಿ ಜನರ ಮಾತುಗಳಲ್ಲಿ ಹೇಳುವುದಾದರೆ ‘ಅದೃಷ್ಟವಂತರು’.!

ಕೋವಿಡ್-19 ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಘೋಷಿಸಿದ 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ನ ಅಂತಿಮ ಹಂತದ ಲೆಕ್ಕ ವಿವರಿಸುವಾಗ ಮೇ 17,2020 ರಂದು ನಿರ್ಮಲಾ ಸೀತಾರಾಮನ್ 8.19 ಕೋಟಿ ರೈತರಿಗೆ ಈ ವರ್ಷದ ಮೊದಲ 2000 ರೂ ಕಂತು ತಲುಪಿದೆ ಎಂದು ಹರ್ಷ ವ್ಯಕ್ತಪಡಿಸಿದರು. 20 ಲಕ್ಷ ಕೋಟಿ ರೂಪಾಯಿ ಲೆಕ್ಕಾಚಾರಗಳ ಟೊಳ್ಳುತನದ ಬಗ್ಗೆ ಬಹುತೇಕರಿಗೆ ಆಕ್ಷೇಪ ಇದ್ದರೂ ಪಿಎಂ ಕಿಸಾನ್ ನಿಧಿ ಹಣ ವರ್ಗಾವಣೆ ಕುರಿತು ಯಾರಿಗೂ ಅನುಮಾನವಿರಲಿಲ್ಲ. ಕೋವಿಡ್ -19 ಕ್ಕಿಂತ ಮುಂಚೆ ಇದ್ದ ಯೋಜನೆಯ ಹಣವನ್ನು ಈ ಪ್ಯಾಕೇಜ್ ನಲ್ಲಿ ಪರಿಗಣಿಸಿದ ಕುರಿತು ಮಾತ್ರ ಆಕ್ಷೇಪ ಇತ್ತು. ಈ 8.19 ಕೋಟಿ ಗಳಲ್ಲಿ ಮಂಡ್ಯ ಜಿಲ್ಲೆಯ 262954 ಫಲಾನುಭವಿಗಳು ಇದ್ದಾರೆ. ಈ ಸಂಖ್ಯೆ ಒಟ್ಟು ಅರ್ಜಿ ಸಲ್ಲಿಸಿದ ಶೇಕಡಾ 91 ರಷ್ಟಾಗುತ್ತದೆ. ಆದರೆ ಗ್ರಾಮ ಮಟ್ಟದ ಲೆಕ್ಕದ ಪ್ರಕಾರ ಐದು ಕಂತು ಪಡೆದವರು ಬೆರಳೆಣಿಕೆ ಮಾತ್ರ. ಐದಕ್ಕಿಂತ ಕಡಿಮೆ ಪಡೆದವರೇ ಬಹು ಸಂಖ್ಯಾತರು.

ಹಾಗಾದರೆ ‘ಕಿಸಾನ್ ಸಮ್ಮಾನ್’ ಹಣ ಕಾಣೆಯಾಗಿದ್ದು ಎಲ್ಲಿ ? ಹೇಗೆ?

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ದೂರು ಹೇಳಿಕೆಗೆ ಬೆಚ್ಚಿದ್ದ ಏರ್ ಟೆಲ್ ಕಂಪನಿ 2017 ಡಿಸೆಂಬರ್ 18 ರಂದು ಅಡುಗೆ ಅನಿಲ ಸಬ್ಸಿಡಿ ಹಣ 190 ಕೋಟಿ ರೂ ಅನ್ನು ಮರಳಿಸುವುದಾಗಿ ಹೇಳಿಕೆ ನೀಡಿತ್ತು. ಎಲ್ ಪಿ ಜಿ ಗ್ರಾಹಕರ ಆಧಾರ್ ಜೋಡಣೆಯು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಮ್ಯಾಪರ್ ನಲ್ಲಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಗೆ ಹೋಗುವಂತೆ ಬದಲಾವಣೆ ಪಡೆದುಕೊಂಡಿದ್ದರಿಂದಾಗಿ ಅಡುಗೆ ಅನಿಲ ಸಬ್ಸಿಡಿ ಫಲಾನುಭವಿಗಳ ಖಾತೆಗೆ ಹೋಗುವ ಬದಲು ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನ ನಕಲಿ ಖಾತೆಗಳಿಗೆ ಹೋಗುತ್ತಿದೆ ಎಂದು ದೂರಿತ್ತು.

ಅರ್ಜಿ ಸಲ್ಲಿಸಿ ಸುಮಾರು ವರ್ಷವೇ ಕಳೆದರೂ ಒಂದು ಕಂತೂ ತನಗೆ ತಲುಪದೇ ಇರುವುದರಿಂದ ಕುಪಿತಗೊಂಡ ಮದ್ದೂರು ತಾಲ್ಲೂಕು ಚನ್ನಸಂದ್ರ ಗ್ರಾಮದ ಲಕ್ಷ್ಮಣ್, ಈ ಮಾಹಿತಿಯ ಚುಂಗು ಹಿಡಿದು ಏರ್ ಟೆಲ್ ಕಂಪನಿ ಮೇಲೆ ದೂರು ದಾಖಲಿಸುವ ಪ್ರಯತ್ನ ಮಾಡಿದರು. ಏರ್ ಟೆಲ್, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಛೇರಿಗಳಿಗೆ ಅಲೆದಾಡಿ ಕೂಗಾಡಿದರು. ಅವರಿಗೆ ಅಶ್ಚರ್ಯವಾಗುವಂತೆ ಒಂದು ತಿಂಗಳ ಹಿಂದೆ 24 ಗಂಟೆಗಳ ಅವಧಿಯೊಳಗೆ ತಲಾ 2000 ರೂಗಳ ಮೂರು ಕಂತುಗಳನ್ನು ಪಡೆದಿದ್ದಾರೆ.  ಈ ಅನುಭವದ ಲಕ್ಷ್ಮಣ್ “ಮದ್ದೂರು ತಾಲ್ಲೂಕು ಒಂದರಲ್ಲೇ 200 ರಿಂದ 300 ರೈತರ ಹಣ ಏರ್ ಟೆಲ್ ಖಾತೆಗೆ ಜಮೆ ಆಗಿದೆ. ಯಾರ ಗಮನಕ್ಕೂ ಬರದಂತೆ ಹಣ ಲಪಟಾಯಿಸಲಾಗುತ್ತಿದೆ” ಎಂದು ಆರೋಪಿಸುತ್ತಾರೆ.

ಇವರ ಅನುಭವದ ಮಾತನ್ನೇ ಸ್ವತಃ ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿ.ಸಿ.ಪಾಟೀಲ್, “ಹಾವೇರಿ ಜಿಲ್ಲೆಯಲ್ಲಿ 60 ರೈತರ ಬೆಳೆ ವಿಮೆ ಪರಿಹಾರದ ಮೊತ್ತ ಏರ್ ಟೆಲ್ ಖಾತೆಯಲ್ಲಿ ಜಮೆ ಆಗಿರುವುದನ್ನು ಪತ್ತೆ ಮಾಡಲಾಗಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ ಸಾಕ್ಷಿ ಒದಗಿಸಿದ್ದಾರೆ. (ಪ್ರಜಾವಾಣಿ ವರದಿ, ಜೂನ್ 5, 2020). ಆದರೆ ಇವರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ ರೈತರ ತಪ್ಪಿನಿಂದ ಹೀಗಾಗಿದೆ ಎಂದಿದ್ದಾರೆ. ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಜೊತೆ ಜೋಡಣೆ ಆಗಿರುವುದನ್ನು ಕೃಷಿ ಇಲಾಖೆ ಪರಿಶೀಲಿಸಿ ದೃಡೀಕರಿಸಿದ ನಂತರವಷ್ಟೇ ವಿವರಗಳು ಬೆಳೆ ವಿಮೆ ಅಥವಾ ಪಿಎಂ ಕಿಸಾನ್ ನಂತಹ ಯೋಜನೆಗಳ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುತ್ತದೆ ಎಂಬುದು ಸಚಿವರಿಗೆ ತಿಳಿಯದೇ ಇರುವ ವಿಷಯವೇನಲ್ಲಾ.

ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ನರೇಂದ್ರ ಮೋದಿ -1.0 ಸರ್ಕಾರ ಘೋಷಿಸಿದ ಪಿಎಂ ಕಿಸಾನ್ ಯೋಜನೆ ಮೂಲಕ ಕೃಷಿಕರಿಗೆ ಬೇಸಾಯದ ವೆಚ್ಚ ನಿರ್ವಹಿಸಲು ನೆರವು ನೀಡುವುದಾಗಿ ಪ್ರಕಟಿಸಿತ್ತು. ಬೀಜ, ಗೊಬ್ಬರ, ಕೀಟನಾಶಕ, ಡೀಸೆಲ್‌ ಮತ್ತಿತರ ಕೃಷಿ ಲಾಗುವಾಡುಗಳ ವೆಚ್ಚದ ಮೇಲೆ ಯಾವುದೇ ನಿಯಂತ್ರಣಕ್ಕೆ ಎಂದೂ ಪ್ರಯತ್ನಿಸದ ಹಾಗೂ ಬೆಂಬಲ ಬೆಲೆ ನಿಗದಿ ಮಾಡುವಾಗ ಉತ್ಪಾದನಾ ವೆಚ್ಚವನ್ನು ಸಮರ್ಪಕವಾಗಿ ಲೆಕ್ಕಕ್ಕೆ ತೆಗೆದುಕೊಳ್ಳದ ಈ ಸರ್ಕಾರದ ಈ ಯೋಜನೆ ಮೋಸದಿಂದ ಓಟು ಗಿಟ್ಟಿಸುವ ಗಿಮಿಕ್ ಎಂದು ಟೀಕೆಗೆ ಒಳಪಟ್ಟರೂ ಎಷ್ಟೋ ಒಂದಷ್ಟು ಬರಲಿ ಎಂಬ ನಿರೀಕ್ಷೆಯನ್ನು ರೈತರಲ್ಲಿ ಹುಟ್ಟು ಹಾಕಿತ್ತು. ಆಡಳಿತದ ಪ್ರತಿಯೊಂದು ಧೋರಣೆಗಳಲ್ಲಿ ಕಾರ್ಪೊರೇಟ್ ಗಳ ಹಿತವೇ ಪ್ರಧಾನವಾಗಿದ್ದರೂ, ನಷ್ಟದಲ್ಲಿ ಬೆಳೆಯುತ್ತಿರುವ ರೈತರ ಎಲ್ಲಾ ವಿಭಾಗಕ್ಕೆ ಅಲ್ಲದಿದ್ದರೂ ಒಂದು ವಿಭಾಗಕ್ಕೆ ಮಾತ್ರವೇ ತಲುಪಬಹುದಾಗಿದ್ದ ಅತಿ ಸಣ್ಣ ಮೊತ್ತವೂ ಹೇಗೆ ಖಾಸಗಿ ಕಂಪನಿಗಳ ದರೋಡೆಗೆ ತುತ್ತಾಗುತ್ತಿವೆ ಎಂಬುದಕ್ಕೆ ಏರ್ ಟೆಲ್ ನ ಈ ಹಗರಣ ಒಂದು ತಾಜಾ ಉದಾಹರಣೆ.

ಅಡುಗೆ ಅನಿಲ ಸಬ್ಸಿಡಿ, ಬೆಳೆ ವಿಮೆ, ಕಿಸಾನ್ ಸಮ್ಮಾನ್ ಹೀಗೆ ಯೋಜನೆ ಯಾವುದೇ ಇರಲಿ, ಆಧಾರ್ ಮೂಲಕ ನಡೆಯುವ ನೇರ ನಗದು ವರ್ಗಾವಣೆಯಲ್ಲಿ ಡಿಜಿಟಲ್ ಕಂಪನಿಗಳು ಕರಾಮತ್ತು ತೋರಿಸುತ್ತಿವೆ. ನೋಟು ರದ್ದು ಮಾಡಿ ಡಿಜಿಟಲ್ ವಹಿವಾಟನ್ನು ದಿಢೀರನೇ ಹಲವು ಪಟ್ಟು ಹೆಚ್ಚಿಸಿ ಡಿಜಿಟಲ್ ಹಣ ವರ್ಗಾವಣೆ ಕಂಪನಿಗಳ ಡಾರ್ಲಿಂಗ್ ಆಗಿರುವ ನರೇಂದ್ರ ಮೋದಿಯವರಿಗೆ ಇವೆಲ್ಲಾ ತಿಳಿಯುವುದಿಲ್ಲ ಎನ್ನಲು ಸಾಧ್ಯವೇ?

ತಾನೂ ತಿನ್ನುವುದಿಲ್ಲ; ತಿನ್ನಲೂ ಬಿಡುವುದಿಲ್ಲ ಎಂದಿದ್ದ ನರೇಂದ್ರ ಮೋದಿ ಈ ಹಗರಣಕ್ಕೆ ಕಡಿವಾಣ ಹಾಕಲಿ ಮತ್ತು ಇನ್ನು ಮುಂದೆ ಫಲಾನುಭವಿಗಳಿಗೆ ನಗದು ವರ್ಗಾವಣೆಯನ್ನು ರಾಜ್ಯ ಸರ್ಕಾರಗಳ ಖಜಾನೆ ಮೂಲಕ ನಿರ್ವಹಿಸುವ ಒತ್ತಡವಾದರೂ ಬಲಗೊಳ್ಳಲಿ; ಡಿಜಿಟಲ್ ಪೇಮೆಂಟ್ ಕಂಪನಿಗಳ ಹಗರಣ ಸಮಗ್ರ ತನಿಖೆ ಆಗಲಿ.

(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected],  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights