ಫ್ಯಾಕ್ಟ್‌ಚೆಕ್: ಸರ್ಕಾರಿ ಶಾಲೆಯಲ್ಲಿ ನಕಲಿ ಶಿಕ್ಷಕ – ವೈರಲ್ ವಿಡಿಯೋದ ವಾಸ್ತವವೇನು?

ಸರ್ಕಾರಿ ಶಾಲೆ ಎಂದರೆ ಎಲ್ಲರಿಗೂ ಬೇಕಾಬಿಟ್ಟಿ. ಯಾವಾಗ ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ತಮ್ಮ ಕೈ ಕಾಲುಗಳನ್ನು ಒತ್ತಿಸಿಕೊಳ್ಳಲು ಪ್ರಾಥಮಿಕ ಶಾಲಾ ಮಕ್ಕಳನ್ನು ಬಳಸಿಕೊಂಡ ವರದಿಯಾಗಿತ್ತು, ಅಷ್ಟರ ಮಟ್ಟಿಗೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈಗ ಸರ್ಕಾರಿ ಶಾಲೆಯ ಮತ್ತೊಂದು ಸುದ್ದಿ ವೈರಲ್ ಆಗಿದೆ.

ಸರ್ಕಾರಿ ಶಾಲೆಯಲ್ಲಿ ತಮ್ಮ ಸಂಬಂಧಿಕರ ಜಾಗದಲ್ಲಿ ಕೆಲಸ ಮಾಡುತ್ತಿರುವ ನಕಲಿ ಶಿಕ್ಷಕರನ್ನು ಪತ್ರಕರ್ತರೊಬ್ಬರು ಬಯಲಿಗೆಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ಸರ್ಕಾರಿ ಶಾಲೆಯಲ್ಲಿ ನಕಲಿ ಶಿಕ್ಷಕ” ಎನ್ನುವ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊವನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ ಹರ್ಷ ರಜಪೂತ್ ಯೂಟ್ಯೂಬ್ ಚಾನೆಲ್‌ನ ವಾಟರ್‌ಮಾರ್ಕ್ ಅನ್ನು ನೋಡಬಹುದು. ಅಲ್ಲದೆ, ಪೋಸ್ಟ್‌ನಲ್ಲಿ ವರದಿಗಾರನ ಹೆಸರನ್ನು ಹರ್ಷ ರಜಪೂತ್ ಎಂದು ಉಲ್ಲೇಖಿಸಲಾಗಿದೆ. ಗೂಗಲ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿಕೊಂಡು ಈ ವೀಡಿಯೊವನ್ನು ಹುಡುಕಿದಾಗ, 19 ಜುಲೈ 2022 ರಂದು ಹರ್ಷ ರಜಪೂತ್ ಅವರ YouTube ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಹರ್ಷ ರಜಪೂತ್ ಒಬ್ಬ ವಿಡಿಯೊ ಕ್ರಿಯೇಟರ್‌ ಆಗಿದ್ದು, ಅವರು ಸ್ಕ್ರಿಪ್ಟ್ (ನಟಿಸಿದ) ಮಾಡಿದ ವೀಡಿಯೊಗಳನ್ನು ಪ್ರಕಟಿಸಿದ್ದಾರೆ. ಹರ್ಷ ರಜಪೂತ್ ಈ ವೀಡಿಯೊವನ್ನು ಮನರಂಜನೆ ಮತ್ತು ಜಾಗೃತಿ ಉದ್ದೇಶಗಳಿಗಾಗಿ ರಚಿಸಲಾಗಿದ್ದು, ಇದು ಸ್ಕ್ರಿಪ್ಟ್ ಮಾಡಲಾದ ದೃಶ್ಯಗಳು ಎಂದು ಹೇಳಲಾಗಿದೆ.

“ವೀಡಿಯೊ ಸಂಪೂರ್ಣ ಕಾಲ್ಪನಿಕವಾಗಿದೆ, ವೀಡಿಯೊದಲ್ಲಿನ ಎಲ್ಲಾ ಘಟನೆಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಮನರಂಜನಾ ಉದ್ದೇಶಕ್ಕಾಗಿ ಮಾಡಲಾಗಿದೆ. ಇದು ಯಾವುದೇ ರೀತಿಯ ಚಟುವಟಿಕೆಯನ್ನು ಉತ್ತೇಜಿಸುವುದಿಲ್ಲ ಅಥವಾ ಯಾವುದೇ ರೀತಿಯ ಆಚರಣೆಗಳನ್ನು ದೂಷಿಸುವುದಿಲ್ಲ. ಜೀವಂತ ವ್ಯಕ್ತಿಗಳಿಗೆ,  ನಿಜವಾದ ಘಟನೆಗಳಿಗೆ ಯಾವುದೇ ಹೋಲಿಕೆಗಳು ಕಂಡುಬಂದರೂ ಅದು ಸಂಪೂರ್ಣವಾಗಿ ಕಾಕತಾಳೀಯವಾಗಿದೆ ಎಂದು ಬರೆದು ಹರ್ಷ ರಜಪೂತ್ ಇದೇ ವಿಡಿಯೋವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಹರ್ಷ ರಜಪೂತ್ ಪ್ರಕಟಿಸಿದ ಕೆಲವು ಇತರ ಸ್ಕ್ರಿಪ್ಟ್ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಆಧಾರಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ನಿಜ ಘಟನೆಯಲ್ಲ ಬದಲಿಗೆ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರಿ ಶಾಲೆಯ ನಕಲಿ ಶಿಕ್ಷಕರನ್ನು ಪತ್ರಕರ್ತರೊಬ್ಬರು ಪತ್ತೆ ಹಚ್ಚಿ ಬಹಿರಂಗಪಡಿಸುವ ದೃಶ್ಯಗಳು ಎಂದು ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಮಾಜಿ ರಾಷ್ಟ್ರಪತಿಗೆ ಅಗೌರವ ತೋರಿಲ್ಲ, ಆದರೆ ಫೋಟೋಗ್ರಾಫರ್‌ ಕಡೆ ಹೆಚ್ಚು ಗಮನ ಹರಿಸಿದ್ದಾರೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights