FACT CHECK | ಪ್ರಧಾನಿ ಮೋದಿ ತಮ್ಮನ್ನು ಕಳ್ಳ ಎಂದು ಹೇಳಿಕೊಂಡರೆ
‘ನಾನು ಸಣ್ಣ ಕಳ್ಳತನಗಳನ್ನು ಮಾಡುವ ವೇಳೆ ನನ್ನ ತಾಯಿ ಆ ದಿನಗಳಲ್ಲೇ ನನ್ನನ್ನು ತಡೆದಿದ್ದರೆ, ಇಂದು ನಾನು ಇಷ್ಟು ದೊಡ್ಡ ದರೋಡೆಕೋರ ಆಗುತ್ತಿರಲಿಲ್ಲ’ ಎಂದು ಪ್ರಧಾನಿ ಹೇಲುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಾರ್ವಜನಿಕವಾಗಿ ಮೋದಿ ತಮ್ಮನ್ನು ಕಳ್ಳ ಎಂದು ಒಪ್ಪಿಕೊಂಡಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ಮೋದಿ ತಮ್ಮ ಬಗ್ಗೆ ತಾವೇ ಹೀಗೆ ಹೇಳಿಕೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವೇ? ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಸೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 10 ಏಪ್ರಿಲ್ 2021ರಂದು ಬಿಜೆಪಿಯ ಪಶ್ಚಿಮ ಬಂಗಾಳ ವಿಭಾಗದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದನ್ನು ಫ್ಯಾಕ್ಟ್ ಕ್ರೆಸೆಂಡೊ ಎಂಬ ಸುದ್ದಿತಾಣವು ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.
2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಮುನ್ನ ಸಿಲಿಗುರಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕ್ಲಿಪ್ 59:25 ನಿಮಿಷದಿಂದ ಆರಂಭವಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ತೊಲಗಬೇಕು, ಬಿಜೆಪಿ ಸರ್ಕಾರ ಬರಬೇಕು ಎಂದು ಬಯಸುತ್ತದೆ ಎಂದು ಹೇಳುತ್ತಾ ಈ ಕುರಿತಾಗಿ ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೇಳಿದ್ದ ಕಥೆಯೊಂದನ್ನು ನಿಮಗೆ ಹೇಳುತ್ತೇನೆ ಎಂದು ಮೋದಿ ಹೇಳುವುದನ್ನು ಕೇಳಬಹುದು.
ಹಿಂದೆ ಒಬ್ಬ ದೊಡ್ಡ ದರೋಡೆಕೋರ ಇದ್ದ. ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಗಲ್ಲಿಗೇರಿಸುವ ಮುನ್ನ ನಿನ್ನ ಕಡೆಯ ಆಸೆ ಏನು ಎಂದು ಕೇಳಿದಾಗ ನಾನು ನನ್ನ ತಾಯಿಯನ್ನು ಭೇಟಿ ಮಾಡಬೇಕು ಎಂದ. ಆತನ ಕೋರಿಕೆಯಂತೆ ಸರ್ಕಾರಿ ಅಧಿಕಾರಿಗಳು ಆತನ ತಾಯಿಯನ್ನು ಕರೆ ತಂದಾಗ, ಆತ ತನ್ನ ತಾಯಿಯನ್ನು ಅಪ್ಪಿಕೊಂಡು ಆಕೆಯ ಮೂಗನ್ನು ಕಚ್ಚಿದ. ಏಕೆ ಹೀಗೆ ಮಾಡಿದೆ ಎಂದು ಜನರು ಕೇಳಿದಾಗ ಆತ ವಿವರಿಸಿದ. ‘ನಾನು ಸಣ್ಣ ಪುಟ್ಟ ಕಳ್ಳತನಗಳನ್ನು ಮಾಡುತ್ತಿದ್ದಾಗ ನನ್ನ ತಾಯಿ ನನ್ನನ್ನು ತಡೆಯಲಿಲ್ಲ. ಆಕೆ ಅವತ್ತೇ ನನ್ನನ್ನು ತಡೆದಿದ್ದರೆ ಇಂದು ನಾನು ಇಷ್ಟು ದೊಡ್ಡ ದರೋಡೆಕೋರ ಆಗುತ್ತಿರಲಿಲ್ಲ’ ಎಂದು ಹೇಳುತ್ತಾನೆ ಎಂದು ಪ್ರಧಾನಿ ಮೋದಿ ಹೇಳುವುದನ್ನು ಕೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಹೇಳಿದ ಕತೆಯ ದೃಶ್ಯಗಳನ್ನು ಎಡಿಟ್ ಮಾಡಿ ನಾನು ಚಿಕ್ಕನಿದ್ದಾಗ ಕಳತನ ಮಾಡಿದ್ದೆ ಆಗ ನನ್ನ ತಾಯಿ ನನಗೆ ಬುದ್ದಿ ಹೇಳಿದ್ದರೆ ಈಗ ನಾನು ದರೋಡೆಕೋರ ಆಗುತ್ತಿರಲಿಲ್ಲ ಎಂದು ಮೋದಿಯವರೇ ತಮ್ಮನ್ನು ಕಳ್ಳ ಎಂದು ಒಪ್ಪಿಕೊಂಡಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅರವಿಂದ್ ಕೇಜ್ರಿವಾಲ್ ಜೆಇಇ ಪರಿಕ್ಷೆಯಲ್ಲಿ ಫೇಲ್ ಆಗಿದ್ದರಂತೆ ? ವೈರಲ್ ಪೋಸ್ಟ್‌ನ ಅಲೀಯತ್ತೇನು ಗೊತ್ತೇ?