FACT CHECK | ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದು ನಿಜವೇ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಭಾರತದ ಸಂವಿಧಾನ ಮತ್ತು ಭಾರತದ ಪ್ರಜಾಪ್ರಭುತ್ವವನ್ನು “ಉಳಿಸಲು” ಬೀದಿಗಿಳಿಯುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳಲಾಗಿದೆ.

“ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ನಿಮ್ಮ ಸಹಕಾರವೂ ಬಹಳ ಮುಖ್ಯ, ಜನರೆಲ್ಲರೂ ಒಗ್ಗೂಡಿ  ಬೀದಿಗಿಳಿದು ತಮ್ಮ ಹಕ್ಕುಗಳನ್ನು ಸರಕಾರದ ಮುಂದೆ ಕೇಳಬೇಕು. ಈ ಸರ್ವಾಧಿಕಾರಿ ಸರಕಾರವು ನಿಮ್ಮನ್ನು ಹೆದರಿಸುತ್ತದೆ, ಆದರೆ ನೀವು ಭಯಪಡಬೇಡಿ, ಧೈರ್ಯ ಮಾಡಿ ಸರ್ಕಾರವನ್ನು ಪ್ರಶ್ನಿಸಿ, ಪ್ರಭುತ್ವ ನಿಮ್ಮ ಪ್ರಶ್ನೆಗೆ ಉತ್ತರ ನೀಡಲೇಬೇಕು, ನಾನು ನಿಮ್ಮೊಂದಿಗಿದ್ದೇನೆ – ಡಿವೈ ಚಂದ್ರಚೂಡ್ (ಮುಖ್ಯ ನ್ಯಾಯಮೂರ್ತಿ).

Viral social media post that falsely quoted CJI Chandrachud

ಅಥ್ಲೀಟ್ ವಿಜೇಂದರ್ ಸಿಂಗ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪ್ರೊಫೈಲ್‌ನಿಂದ ವೈರಲ್ ಗ್ರಾಫಿಕ್ಸ್ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇದು ಸಿಜಿಐ ನೀಡಿದ ಹೇಳಿಕೆ ಎಂಬ ಉಲ್ಲೇಖದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು, ಕಾನೂನು ವಿಷಯಗಳನ್ನು ಒಳಗೊಂಡ ಸುದ್ದಿ ವೆಬ್‌ಸೈಟ್ ಲೈವ್ ಲಾ ಅಸೋಸಿಯೇಟ್ ಎಡಿಟರ್ ಬ್ರಿಜ್ ದುಬೆ ಅವರನ್ನು ಸಂಪರ್ಕಿಸಿದಾಗ “ಈ ಪೋಸ್ಟ್ ಸಂಪೂರ್ಣವಾಗಿ ನಕಲಿಯಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಎಲ್ಲಿಯೂ ಇಂತಹ ಮಾತನ್ನು ಹೇಳಿಲ್ಲ. ಸುಪ್ರೀಂ ಕೋರ್ಟ್‌ನ್ನಲ್ಲಾಗಲಿ ಅಥವಾ ಯಾವುದೇ ಪ್ರಕರಣದ ವಿಚಾರಣೆಯ ಸಮಯದಲ್ಲಿ ಅಥವಾ ಕಾರ್ಯಕ್ರಮದಲ್ಲಿ ಇಂತಹ ಹೇಳಿಕೆಯನ್ನು ನೀಡಿಲ್ಲ.

vishvasnews

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ವಿಶ್ವಾಸ್ ನ್ಯೂಸ್ ಸುಪ್ರೀಂ ಕೋರ್ಟ್ ವಕೀಲ ರುದ್ರ ವಿಕ್ರಮ್ ಸಿಂಗ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು,  “ಸಿಜೆಐ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದು ಸಂಪೂರ್ಣ ನಕಲಿ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಿಜೆಐ ಇಂತಹ ಹೇಳಿಕೆ ನೀಡುವ ಸಂಪ್ರದಾಯವಿಲ್ಲ, ಇದು ವಾಟ್ಸಾಪ್‌ನಲ್ಲಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ದೇಶದೆಲ್ಲೆಡೆ ಬಾರೀ ಚರ್ಚೆಯಾಗುತ್ತಿರುವ ಚುನಾವಣಾ ಬಾಂಡ್  ಕುರಿತಾದ ಮಾಹಿತಿಯನ್ನು ಎಸ್‌ಬಿಐ ಬಹಿರಂಗಗೊಳಿಸಬೇಕು ಮತ್ತು ಅದನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪಕ್ಷವಾರು ಎಷ್ಟು ದೇಣಿಗೆ ಬಂದಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಬೇಕು ಎಂದು ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಎಸ್‌ಬಿಐಗೆ ಚಾಟಿ ಬೀಸಿದ್ದ ಸಂದರ್ಭವನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ ಎಂದು ಹೇಳಿದ್ದಾರೆಂದು  ಹಂಚಿಕೊಳ್ಳಲಾಗಿದೆ. ಆದರೆ ವಾಸ್ತವವಾಗಿ ಇಂತಹ ಹೇಳಿಕೆಯನ್ನು ಡಿ.ವೈ ಚಂದ್ರಚೂಡ್ ನೀಡಿಲ್ಲ

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ ಎನ್ನಲಾದ ಹೇಳಿಕೆ ಮತ್ತು ಪೋಸ್ಟ್‌ ನಕಲಿ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣಾ ಬಾಂಡ್ ಕಲಾಪದ ಮಧ್ಯದಲ್ಲಿಯೇ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸುಪ್ರಿಂ ಕೋರ್ಟ್‌ನಿಂದ ಹೊರನಡೆದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights