FACT CHECK | ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ರಥದ ಮೆರವಣಿಗೆಗೆ ದಾರಿ ಕೊಡದ ಮುಸ್ಲಿಮರ ವಾಹನಗಳನ್ನು ಹಿಂದೂಗಳು ಎತ್ತಿ ಬಿಸಾಕಿದರೇ?
ದೇವರ ರಥವು ಮೆರವಣಿಗೆಯಲ್ಲಿ ಬರುವುದನ್ನು ಸಹಿಸದೆ ಬೇಕಂತಲೇ ದಾರಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದ ಮುಸ್ಲಿಮರ ವಾಹನಗಳನ್ನು ತೆರವುಗೊಳಿಸುವಂತೆ ಎಷ್ಟೇ ವಿನಂತಿಸಿದರೂ ಕಾರು ಬೈಕ್‌ಗಳನ್ನು ತೆರವುಗೊಳಿಸಲು ನಿರಾಕರಿಸಿದಾಗ, ತಾಳ್ಮೆ ಕಳೆದುಕೊಂಡ ಹಿಂದೂ ಯುವಕರ ಗುಂಪು ವಾಹನಗಳನ್ನು ಎತ್ತಿ ಬಿಸಾಡಿದ್ದಾರೆ. POWER OF UNITY ಈ ಘಟನೆ ಕರ್ನಾಟದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
This is how Hindu devotees in Karnataka reacted when even after multiple requests a Muslim refused to move his car aside for a chariot. Power of unity. pic.twitter.com/8ATVwioXUr
— Baba Banaras™ (@RealBababanaras) April 6, 2024
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡು ಕರ್ನಾಟಕದ ಹಿಂದೂಗಳ ಶಕ್ತಿ ನೋಡಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
https://twitter.com/ajaychauhan41/status/1776470113509929468
ವೈರಲ್ ಆಗಿರುವ ವಿಡಿಯೋದಲ್ಲಿ ಜಾತ್ರಾ ಮಹೋತ್ಸವದಲ್ಲಿ ದೇವರ ರಥಕ್ಕೆ ದಾರಿ ಮಾಡಿಕೊಡಲು ಕಾರು, ಬೈಕು ಸೇರಿದಂತೆ ಇತರೆ ವಾಹನಗಳನ್ನು ರಸ್ತೆಯ ಬದಿಗೆ ದೂಡುತ್ತಿರುವುದನ್ನು ಕಾಣಬಹುದು. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ಈ ಘಟನೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಡೆದಿದೆ? ಈ ಘಟನೆಗೆ ಹಿಂದೂ ಮುಸ್ಲಿಂ ಎಂಬ ಕೋಮು ಆಯಾಮ ಇದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಗಳು ಮತ್ತು ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದಂತೆ 4 ಏಪ್ರಿಲ್ 2024ರಂದು ಹಲವು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಲಿಂಕ್‌ಗಳು ಲಭ್ಯವಾಗಿದ್ದು, ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಜಾತ್ರಾ ಮಹೋತ್ಸವದ್ದು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಹಿಂದೂ-ಮುಸ್ಲಿಂ ಆಯಾಮವಿಲ್ಲ
ಬಪ್ಪನಾಡು ಜಾತ್ರಾ ಮಹೋತ್ಸವದ ವೇಳೆ ರಥೋತ್ಸವದ ದಿನ ರಥ ಹೋಗುವ ದಾರಿಯಲ್ಲಿ ಕೆಲವು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಈ ವೇಳೆ ರಥ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು ನಿಲ್ಲಿಸಿದ್ದ ಕಾರು, ರಿಕ್ಷಾ, ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ಈ ವೇಳೆ ಅನೇಕ ವಾಹನಗಳಿಗೆ ಹಾನಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಒನ್ ಇಂಡಿಯಾ ವರದಿ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನು ಭಕ್ತರು ಜಖಂ ಗೊಳಿಸಿದ ಘಟನೆ ನಡೆದಿದ್ದು, ವಾಹನಗಳನ್ನು ಬದಿಗೆ ದೂಡಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ರಥ ಹೋಗುವ ದಾರಿಯಲ್ಲಿ ಕೆಲವರು ವಾಹನಗಳನ್ನ ಪಾರ್ಕ್ ಮಾಡಿದ್ದರು. ಇದರಿಂದಾಗಿ ದೇವರ ರಥ ಚಲಿಸಲು ಸಮಸ್ಯೆ ಉಂಟಾಗಿತ್ತು, ಈ ಹಿನ್ನಲೆ ರಥಕ್ಕೆ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು, ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ವಾಹನಗಳನ್ನು ಬದಿಗೆ ದೂಡಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ ಎಂದು ದಿ ಮಂಗಳೂರು ಮಿರರ್ ಸುದ್ದಿಯನ್ನು ಪ್ರಕಟಿಸಿದೆ.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಬ್ರಹ್ಮರಥೋತ್ಸವದ ವೇಳೆ ರಥ ಹಾದು ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿರುವ ಘಟನೆ ಮಾ.31ರಂದು ರಾತ್ರಿ ನಡೆದಿದ್ದು, ಇದೀಗ ಇದರ ವೀಡಿಯೊಗಳು ವೈರಲ್ ಆಗಿವೆ.
ರಥ ಹೋಗುವ ದಾರಿಯಲ್ಲಿ ಕಾರು, ಆಟೊ ರಿಕ್ಷಾ ಹಾಗೂ ಹಲವು ದ್ವಿಚಕ್ರ ವಾಹನಗಳನ್ನ ಪಾರ್ಕಿಂಗ್ ಮಾಡಲಾಗಿತ್ತು. ರಥಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ಜಮಾಯಿಸಿದ್ದ ಗುಂಪೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು, ರಿಕ್ಷಾ, ದ್ವಿಚಕ್ರ ವಾಹನಗಳನ್ನು ಅನಾಮತ್ತಾಗಿ ಎತ್ತಿ ರಸ್ತೆಯ ಮೇಲ್ಭಾಗಕ್ಕೆ ಎಸೆಯುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವಾರ್ತಾ ಭಾರತಿ ವರದಿ ಮಾಡಿದೆ.
ಇನ್ನು ವೈರಲ್ ವಿಡಿಯೋದಲ್ಲಿ ಕಂಡುಬರುವ ಕಾರಿನ ಮಾಲಿಕ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಎಂದು ಪರಿಶೀಲಿಸಲು ವಾಹನ ಸಂಖ್ಯೆ KA05MV 1554 ಯನ್ನು ಪರಿಶೀಲಿಸಿದಾಗ, ಕಾರಿನ ಮಾಲಿಕನ ಹೆಸರು ವೆಂಕಟೇಶ್. ಡಿ ಎಂಬ ಮಾಹಿತಿ ಲಭ್ಯವಾಗಿದೆ.

RTO ವಾಹನ ಮಾಹಿತಿ ವೆಬ್‌ಸೈಟ್‌ನಲ್ಲಿ ವೀಡಿಯೊದಲ್ಲಿ ಕಂಡುಬರುವ ವಾಹನದ ವಾಹನದ ಸಂಖ್ಯೆಯನ್ನು ಪರಿಶೀಲಿಸಿದಾಗ, ಈ ವಾಹನದ ನೋಂದಣಿಯನ್ನು 30 ಮಾರ್ಚ್ 2017 ರಂದು ಮಾಡಲಾಗಿದ್ದು, ಅದರ ಮಾಲೀಕ ವೆಂಕಟೇಶ್ ಎಂಬುದಾಗಿ ತಿಳಿದು ಬಂದಿದೆ. ಹಾಗಾಗಿ ವೈರಲ ವಿಡಿಯೋದಲ್ಲಿ ಹೇಳಿರುವಂತೆ ವಾಹನ ಮುಸ್ಲಿಮರಿಗೆ ಸೇರಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 31 ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಬ್ರಹ್ಮರಥೋತ್ಸವದ ವೇಳೆ ರಥ ಹಾದು ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿರುವ ಘಟನೆ ನಡೆದಿದ್ದು, ಇದನ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿ ರಥ ಮೆರವಣಿಗೆಯಲ್ಲಿ ಬರುವಾಗ ಮುಸ್ಲಿಮರ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ತೊಂದರೆ ನೀಡಿದಾಗ ಹಿಂದೂಗಳ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೋಮು ಪ್ರಚೋದನೆಯ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚುನಾವಣಾ ಭಾಷಣದ ವೇಳೆ ಸುಳ್ಳು ಹೇಳಿದ BJP ಅಭ್ಯರ್ಥಿ ಕಂಗನಾ

