ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಮಾಜಿ ರಾಷ್ಟ್ರಪತಿಗೆ ಅಗೌರವ ತೋರಿಲ್ಲ, ಆದರೆ ಫೋಟೋಗ್ರಾಫರ್‌ ಕಡೆ ಹೆಚ್ಚು ಗಮನ ಹರಿಸಿದ್ದಾರೆ

ನಿರ್ಗಮಿತ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ವೇಳೆ ಎಲ್ಲರಿಗೂ ವಂದನೆ ಸಮರ್ಪಿಸುವ ಸಂದರ್ಭದಲ್ಲಿ ಮೋದಿಯವರಿಗೆ ಕೈಮುಗಿದು ಸ್ವಾಗತಿಸುವಾಗ ಪ್ರಧಾನಿ ಮೋದಿ ಕೋವಿಂದ್‌ಅವರನ್ನು ಕಡೆಗಣಿಸುತ್ತಿರುವುದನ್ನು ತೋರಿಸುವ ವೀಡಿಯೊ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೋದಿ ಅವರು ಮಾಜಿ ರಾಷ್ಟ್ರಪತಿಗಳಿಗೆ ಅಗೌರವ ತೋರುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ, ಈ ದೃಶ್ಯಗಳು ಮೋದಿಯವರ ಫೋಟೋಗಳ ಮೇಲಿನ ವ್ಯಾಮೋಹವನ್ನು ತೋರಿಸುತ್ತವೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಮೋದಿ ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಕಡೆಗಣಿಸಿದ್ದಾರಾ? ಎಂದು ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

23 ಜುಲೈ 2022 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಲಾದ ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಕಾರ್ಯಕ್ರಮದ ವೈರಲ್ ದೃಶ್ಯಗಳು. ಆದರೆ, ಪ್ರಧಾನಿ ಮೋದಿ ಅವರು ರಮಾನಾಥ್ ಕೋವಿಂದ್ ಅವರನ್ನು ಕಡೆಗಣಿಸಿದ್ದಾರೆ ಎಂಬುದು ಸುಳ್ಳು. ಮೂಲ ವೀಡಿಯೋದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳ ನಮನಕ್ಕೆ ಪ್ರತಿಯಾಗಿ ನಮಿಸಿದ ಬಳಿಕ ಕ್ಯಾಮೆರಾದತ್ತ ನೋಡುತ್ತಿರುವುದು ದಾಖಲಾಗಿದೆ. ಆದರೆ ಕ್ರಾಪ್ ಮಾಡಿದ ಬಳಿಕ ವಿಡಿಯೊವನ್ನು ಹರಿಬಿಡಲಾಗಿದೆ. ಟ್ವೀಟ್ ಮಾಡಿರುವ ಸಂಜಯ್ ಸಿಂಗ್, “ನಿರ್ಗಮಿತ ರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ. ಇದಕ್ಕಿಂತ ದುರದೃಷ್ಟಕರ ಸಂಗತಿ ಬೇರೊಂದಿಲ್ಲ. ನಿಮ್ಮ ಅವಧಿ ಮುಗಿದ ಬಳಿಕ ನಿಮ್ಮ ಕಡೆ ಇವರು ತಿರುಗಿಯೂ ನೋಡುವುದಿಲ್ಲ” ಎಂದು ಆರೋಪಿಸಿದ್ದಾರೆ.

ಸಂಜಯ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಕ್ಕೆ ವಿರುದ್ಧವಾಗಿ ರಾಷ್ಟ್ರಪತಿ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ವಿಸ್ತೃತ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಪೂರ್ಣ-ಪ್ರಮಾಣದ ವೀಡಿಯೊದಲ್ಲಿ ರಮಾನಾಥ್ ಕೋವಿಂದ್ ಅವರು ವೇದಿಕೆಯ ಕೆಳಗೆ ನಡೆದು ಅತಿಥಿಗಳಿಗೆ ಕೈ ಜೋಡಿಸಿ ಸ್ವಾಗತಿಸುತ್ತಿದ್ದಾರೆ. ಈ ವೀಡಿಯೊದ 59 ನೇ ಸೆಕೆಂಡ್‌ನಲ್ಲಿ, ಕೋವಿಂದ್ ಅವರು ಪ್ರಧಾನಿ ಮೋದಿಯನ್ನು ನಮಸ್ಕರಿಸಿದ್ದು, ನಂತರ ಮೋದಿ ಸಹ ಪ್ರತಿಯಾಗಿ ನಮಸ್ಕರಿಸಿರುವುದು ಸ್ಪಷ್ಟವಾಗಿದೆ.

ಮೋದಿಗೆ ನಮಸ್ಕಾರ ಮಾಡಿದ ನಂತರ ರಮಾನಾಥ್ ಕೋವಿಂದ್ ಮುಂದೆ ಸಾಗಿ ಮೋದಿಯ ಹಿಂದೆ ನಿಂತಿರುವ ಮಹಿಳೆಯೊಂದಿಗೆ ಮಾತನಾಡಿದರು. ಈ ಕ್ಷಣದಲ್ಲಿ ಮೋದಿ ಛಾಯಾಗ್ರಾಹಕರತ್ತ ನೋಡುತ್ತಿರುವಂತೆ ಕಾಣಿಸುತ್ತಿದೆ. ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರಿದ ಭಾಗವನ್ನು ಕ್ರಾಪ್ ಮಾಡಿ ವೈರಲ್ ವೀಡಿಯೊವನ್ನು ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಒಂದರಲ್ಲಿ ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಎಡಿಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯೂ ಈ ಹಿಂದೆ ಇದೇ ರೀತಿ ಹಲವು ವಿಡಿಯೊಗಳನ್ನು ತಿರುಚಿ ಹಂಚಿಕೊಂಡ ಉದಾಹರಣೆಗಳಿವೆ. ಆದರೆ ಪ್ರತಿಪಕ್ಷಗಳೂ ಕೆಲವೊಮ್ಮೆ ಈ ಆರೋಪಕ್ಕೆ ಗುರಿಯಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಕೋವಿಂದ್ ಅವರನ್ನು ಕಡೆಗಣಿಸುವ ಮೂಲಕ ಅಗೌರವ ತೋರಿಸಿಲ್ಲ. ವಾಸ್ತವವಾಗಿ, ಮೋದಿ ಮತ್ತು ಕೋವಿಂದ್ ಪರಸ್ಪರ ಶುಭಾಶಯ ಕೋರಿದರು. ಇಬ್ಬರೂ ಪರಸ್ಪರ ಶುಭಾಶಯಗಳನ್ನು ತೋರಿಸುವ ಈ ಭಾಗವನ್ನು ಕ್ಲಿಪ್ ಮಾಡಲಾಗಿದೆ ಮತ್ತು ಮೋದಿ ಹೆಚ್ಚು ಸಮಯ ಫೋಟೋಗ್ರಾಫರ್‌ಗಳನ್ನು ನೋಡುವ ಭಾಗವನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights