ಸಿರಾ ಉಪಚುನಾವಣೆ ಜೆಡಿಎಸ್‌/ಕಾಂಗ್ರೆಸ್‌ಗೆ ಪ್ರತಿಷ್ಠೆ! ಬಿಜೆಪಿಗೆ ಹೊಸ ಹುರುಪು!

ತುಮಕೂರು ಜಿಲ್ಲೆಯ ಸಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಬಿ ಸತ್ಯನಾರಾಯಣ ಅವರ ಅಕಾಲಿಕ ನಿಧನ ನಂತರ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳ ಚುನಾವಣಾ ಕಸರತ್ತು ಗರಿಗೆದರಿದೆ.

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕುತ್ತಿರುವ ಪಕ್ಷಗಳು ಸಿದ್ದತೆ ಜೋರಾಗಿದೆ. ಮೂರೂ ಪಕ್ಷಗಳ ಮುಖಂಡರು ಸಿರಾದ ಸ್ಥಳೀಯ ನಾಯಕರನ್ನು ಕರೆಸಿಕೊಂಡು ಚುನಾವಣಾ ತಯಾರಿಯ ಬಗ್ಗೆ ಮಾತನಾಡುತ್ತಿದ್ದಾರೆ.

ಜೆಡಿಎಸ್‌ ಶಾಸಕರ ಮರಣದಿಂದಾಗಿ ಜೆಡಿಎಸ್‌ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದ್ದು, ಅದಕ್ಕಾಗಿ ನಿಖಿಲ್‌ ಕುಮಾರಸ್ವಾಮಿಯವರನ್ನು ಜೆಡಿಎಸ್‌ ಕಣಕ್ಕಿಳಿಸಲಿದೆ ಎಂದು ವದಂತಿಗಳು ಹಬ್ಬಿದ್ದವು. ನಾನು ಖಾಲಿ ಜಾಗಕ್ಕೆ ಜೋತುಬೀಳುವವನಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದು, ತಾವು ಸ್ಪರ್ಧಿಸುವುದಿಲ್ಲ ಎಂದು ಖಾತರಿ ಪಡಿಸಿದ್ದಾರೆ.

ಅಲ್ಲದೆ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ, ಮೃತ ಸತ್ಯನಾರಾಯಣ ಅವರ ಪುತ್ರ ಬಿ.ಎಸ್.ಸತ್ಯ ಪ್ರಕಾಶ್ ಅವರನ್ನು ಅಭ್ಯರ್ಥಿಯನ್ನಾಗಿಸಲು ಜೆಡಿಎಸ್ ಮುಂದಾಗಿದೆ.  ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ಇನ್ನು, ಬಿಜೆಪಿಯಲ್ಲಿ ಕಳೆದ ಚುನಾವಣೆಯಲ್ಲಿ 17 ಸಾವಿರಕ್ಕೂ ಕಡಿಮೆ ಮತ ಪಡೆದಿದ್ದ ಎಸ್‌.ಆರ್‌.ಗೌಡ ಅವರನ್ನೇ ಈ ಬಾರಿಯೂ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಆಡಳಿತಾರೂಢ ಬಿಜೆಪಿ ಪಕ್ಷದ ಪರವಾಗಿ ಉಪ ಚುನಾವಣೆಯ ಫಲಿತಾಂಶ ಬರಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಲ್ಯವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಬಿಜೆಪಿಗೆ ಸಿರಾ ಉಪಚುನಾವಣೆ ಮತ್ತೊಂದು ವೇದಿಕೆಯಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಕಟ್ಟಲು ಹೊಸ ಉರುವು ಬಿಜೆಪಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಮಂಡ್ಯ, ಹಾಸನ, ತುಮಕೂರು ಭಾಗದಲ್ಲಿ ಭದ್ರಕೋಟೆಯಂತೆ ನೆಲಿಸಿರುವ ಜೆಡಿಎಸ್‌, ಕಾಂಗ್ರೆಸ್‌ಗೂ ಕೂಡ ಈ ಕ್ಷೇತ್ರ ಮಹತ್ವದ್ದಾಗಿದ್ದು, ಉಪಚುನಾವಣೆ ಗೆಲ್ಲಲು, ಎರಡೂ ಪಕ್ಷಗಳೂ ಜಿದ್ದಾಜಿದ್ದಿಗೆ ಬೀಳುವ ಸಾಧ್ಯತೆ ಇದೆ.


Read Also:  ಸಿರಾ ಉಪಚುನಾವಣೆಗೆ ನಿಖಿಲ್ ಸ್ಪರ್ಧೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights