ರಾಜ್ಯದಲ್ಲಿ ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ? ಬಿಎಸ್‌ವೈಗೆ ತಿಳಿದಿಲ್ಲ ಹೈಕಮಾಂಡ್ ಗುಟ್ಟು!
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಿಎಂ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯದ್ದೇ ಒಂದು ಕಸರತ್ತಾಗಿ ಉಳಿದಿದೆ. ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದೆ. ಉಪಚುನಾವಣೆಗಳು ಮುಗಿದಿವೆ. ಆದರೆ, ಸಂಪುಟ ವಿಸ್ತರಣೆಯ ವಿಚಾರವಂತೂ ಎಡೆಬಿಡದೆ ಬಿಎಸ್‌ವೈ ಬೆನ್ನತ್ತಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಸಂಪುಟ ವಿಸ್ತರಣೆಗಾಗಿ ದೆಹಲಿ ಹೈಕಮಾಂಡ್ ಕಚೇರಿಯ ಮೆಟ್ಟಿಲೇರಿದ್ದ ಬಿಎಸ್‌ವೈ, ಬರಿಗೈಯಲ್ಲೇ ಹಿಂದಿರುದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಿಎಂ ಯಡಿಯೂರಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. ಆದರೂ, ಅವರಿಗೆ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ದೊರೆತಿಲ್ಲ.
ಸಂಪುಟವನ್ನು ವಿಸ್ತರಣೆ ಮಾಡಬೇಕೋ ಅಥವಾ ಪುನರ್ ರಚನೆ ಮಾಡನೇಕೋ ಎಂಬುದು ಸಿಎಂ ಯಡಿಯೂರಪ್ಪನವರಿಗೆ ಇನ್ನೂ ತಿಳಿದಿಲ್ಲ.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಒಂದೆರಡು ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸಲಿದೆ. ಈ ವಿಚಾರವಾಗಿ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ.
ಬಿಜೆಪಿ ಸಂಘಟನೆಯ ಭಾಗವಾಗಿ ಜೆಪಿ ನಡ್ಡಾ ಅವರು ದೇಶಾದ್ಯಂತ 100 ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಕರ್ನಾಟಕಕ್ಕೂ ಭೇಟಿ ಕೊಡಲಿದ್ದಾರೆ. ಆ ವೇಳಗೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬೇಕು ಎಂದು ಬಿಎಸ್‌ವೈ ತರಾತುರಿಯಲ್ಲಿದ್ದಾರೆ. ಆದರೆ, ಸಿಎಂ ಅವರ ಒಂಟಿ ಕಾಲಿನ ಓಟಕ್ಕೆ ಹೈಕಮಾಂಡ್ ಕಿಮ್ಮತ್ತು ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಸದ್ಯ ರಾಜ್ಯ ಬಿಜೆಪಿಯಲ್ಲಿ ನಾಯಕತ್ವವೂ ಬದಲಾಗಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಈ ಕಾರಣದಿಂದಾಗಿಯೇ ಸಂಪುಟ ವಿಸ್ತರಣೆ ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ನಾಯಕತ್ವವು ವಿನಾಶಕಾರಿ ಎಂಬುದು ಮತ್ತೆ ಬಹಿರಂಗವಾಗಿದೆ!