ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ: ಟಿಎಂಸಿ ಕೈವಾಡಿವಿದೆ ಎಂದು ಆರೋಪ!

ಎರಡು ಸಮುದಾಯಗಳ ನಡುವೆ ನಡೆದ ಮಾರಾಮಾರಿಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ ಜಿಲ್ಲೆಯಲ್ಲಿ ನಡೆದಿದೆ. ಟನೆಯ ಹಿಂದೆ ಆಡಳಿತರೂಢ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಆರೋಪವನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ.

ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ಜಿಲ್ಲೆಯ ತುಫಂಗಂಜ್ ಪ್ರದೇಶದಲ್ಲಿ ಕಾಳಿ ದೇವಿಯ ವಿಗ್ರಹಗಳ ವಿಸರ್ಜನೆ ವೇಳೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಬೂತ್ ಕಾರ್ಯದರ್ಶಿ ಕಲಾಚಂದ್ ಕರ್ಮಕರ್ (55) ಘರ್ಷಣೆ ಮಧ್ಯೆ ಎರಡು ಗುಂಪುಗಳ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಈ ಸಮಯದಲ್ಲಿ ಅವರಿಗೂ ಸಹ ಹೊಡೆತ ಬಿದ್ದಿದೆ. ಅವರು ನೆಲದ ಮೇಲೆ ಕುಸಿದುಬಿದ್ದಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅವರ ‘ಕೊಲೆ ರಾಜಕೀಯ’ ಮುಂದುವರೆದಿದೆ! ಕೂಚ್‌ಬೆಹಾರ್‌ನಲ್ಲಿ ಬಿಜೆಪಿ ಬೂತ್ ಕಾರ್ಯದರ್ಶಿ ಕಲಾಚಂದ್ ಕರ್ಮಕರ್ ಅವರನ್ನು ಟಿಎಂಸಿ ಗೂಂಡಾಗಳು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ. ನಿಮ್ಮ ರಕ್ತಸಿಕ್ತ ಮತ್ತು ಭಯೋತ್ಪಾದನೆಯ ರಾಜಕೀಯವನ್ನು ಬಂಗಾಳದ ಜನರು ಬೆಂಬಲಿಸುತ್ತಾರೆ ಎಂಬುದನ್ನು ನಿರೀಕ್ಷಿಸಬೇಡಿ. ಸಾಕು. ನಿಮ್ಮ ದಿನಗಳನ್ನು ಎಣಿಸಲು ಪ್ರಾರಂಭಿಸಿ!” ಎಂದು ಬಂಗಾಳ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆ ಪೋಸ್ಟ್ ಮಾಡಿದೆ.

“ಕೂಚ್‌ಬೆಹರ್ ಜಿಲ್ಲೆಯಲ್ಲಿ ಟಿಎಂಸಿ ತನ್ನ ಸ್ಥಾನ ಕಳೆದುಕೊಂಡಿರುವುದರಿಂದ, ಇದು ವ್ಯವಸ್ಥಿತವಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ” ಎಂದು ಸ್ಥಳೀಯ ಬಿಜೆಪಿ ಮುಖಂಡ ಸೌರವ್ ದಾಸ್ ಹೇಳಿದ್ದಾರೆ.

ಆದರೆ ಟಿಎಂಸಿಯ ಹಿರಿಯ ಮುಖಂಡ ಮತ್ತು ಉತ್ತರ ಬಂಗಾಳ ಅಭಿವೃದ್ಧಿ ಸಚಿವ ರವೀಂದ್ರನಾಥ ಘೋಷ್ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದರು. “ಸ್ಥಳೀಯ ವಿವಾದದಿಂದಾಗಿ ಈ ಹತ್ಯೆ ನಡೆದಿದೆ. ಪೊಲೀಸರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವಿಷಯವನ್ನು ರಾಜಕೀಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಹುಲ್ ‌ಗಾಂಧಿ ನಾಯಕತ್ವವು ವಿನಾಶಕಾರಿ ಎಂಬುದು ಮತ್ತೆ ಬಹಿರಂಗವಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights