ಬಿಜೆಪಿ-ಶಿವಸೇನಾ ಶತ್ರುಗಳಲ್ಲ, ಅಮೀರ್ ಮತ್ತು ಕಿರಣ್‌ರಂತೆ ಸದಾಕಾಲದ ಸ್ನೇಹಿತರು: ಸಂಜಯ್ ರಾವತ್
“ಬಿಜೆಪಿ ಮತ್ತು ಶಿವಸೇನಾ ನಾವು ಶತ್ರುಗಳಲ್ಲ, ನಾವು ಭಾರತ-ಪಾಕಿಸ್ತಾನದಂತೆ ವಿರೋಧಿಗಳಲ್ಲ. ಬದಲಿಗೆ ನಾವು ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ಜೋಡಿ ಇದ್ದಂತೆ, ಅವರಿಬ್ಬರ ಮಾರ್ಗಗಳು ವಿಭಿನ್ನವಾಗಿದ್ದರೂ ಅವರ ಸ್ನೇಹ ಸದಾಕಾಲ ಉಳಿಯುತ್ತದೆ. ಅಂತೆಯೇ ಬಿಜೆಪಿ-ಶಿವಸೇನಾ ಸ್ನೇಹ ಅಖಂಡವಾದದು” ಎಂದು ಶಿವಸೇನಾ ನಾಯಕ, ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ನಟ ಅಮಿರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಅವರು 15 ವರ್ಷಗಳ ತಮ್ಮ ಸಾಂಸಾರಿಕ ಜೀವನವನ್ನು ತೊರೆದು ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ.
ಅವರ ವಿಚ್ಛೇದನದ ಘಟನೆಯನ್ನು ಉಲ್ಲೇಖಿಸಿ ಬಿಜೆಪಿ-ಶಿವಸೇನೆ ಸ್ನೇಹದ ಬಗ್ಗೆ ಮಾತನಾಡಿರುವ ಸಂಜಯ್ ರಾವತ್, ಈ ಎರಡೂ ಪಕ್ಷಗಳ ಸ್ನೇಹ ಅಮಿರ್ ಮತ್ತು ಕಿರಣ್‌ರಂತೆ ಸದಾಕಾಲ ಉಳಿಯುವಂತದ್ದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?
ಇತ್ತೀಚೆಗೆ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಕೂಡ “ನಾವು ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು. ಅಧಿಕಾರದ ಕಾರಣಕ್ಕಾಗಿ ಅವರು ನಮ್ಮನ್ನು ತೊರೆದರು. ಅವರ ವಿರುದ್ಧ ಇದ್ದ ಜನರೇ ಅವರೊಂದಿಗೆ ಸೇರಿ ಸರ್ಕಾರ ರಚಿಸಿದ್ದಾರೆ” ಎಂದು ಸೇನಾ-ಬಿಜೆಪಿ ಸ್ನೇಹದ ಬಗ್ಗೆ ಹೇಳಿದ್ದಾರೆ.
“ರಾಜಕೀಯದಲ್ಲಿ ಯಾವುದೇ ಶಾಶ್ವತ ಮಿತ್ರತ್ವ, ಶತ್ರುತ್ವವಿಲ್ಲ. ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಫಡ್ನವಿಸ್ ಹೇಳಿದ್ದಾರೆ.
ಇದನ್ನೂ ಓದಿ: ಯೂನಿಯನ್ ಎಂದರೆ ಒಕ್ಕೂಟವಲ್ಲ; ಭಾರತವು ಒಕ್ಕೂಟ ಸರ್ಕಾರ ಅಲ್ಲ!