ಕಂಪನಿ ಲಾಕೌಟ್ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ: ಟೊಯೊಟಾ ಕಾರ್ಮಿಕರ ಎಚ್ಚರಿಕೆ

ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಲಾಕೌಟ್‌ ಘೋಷಿಸಿ, ಹಲವು ಕಾರ್ಮಿಕರನ್ನು ಅಮಾನುತ್ತು ಮಾಡಿರುವುದನ್ನು ವಿರೋಧಿಸಿ 24 ದಿನಗಳಿಂದ ಹೋರಾಟ ನಡೆಸುತ್ತಿರುವ ಕಾರ್ಮಿಕರು ಲಾಕೌಟ್‌ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, “ಲಾಕೌಟ್‌ ತೆರವುಗೊಳಿಸಿ ಎಂದು ಸರ್ಕಾರ ಸೂಚಿಸಿದರೂ ಕಂಪನಿ ದರ್ಪ ತೋರುತ್ತಿದೆ. ಕೆಲ ಕಾರ್ಮಿಕರು ಕಾರ್ಖಾನೆ ಪ್ರವೇಶಿಸಲು ಬಿಡುತ್ತಿಲ್ಲ. ಎರಡನೇ ಬಾರಿ ಲಾಕೌಟ್‌ ಘೋಷಿಸುವ ಮೂಲಕ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ. ಕಾರ್ಮಿಕರ ಮೇಲಿನ ಅಮಾನತ್ತು ಹಿಂತೆಗೆದುಕೊಳ್ಳಬೇಕು ಮತ್ತು ಲಾಕೌಟ್‌ ತೆರವುಗೊಳಿಸಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದಿದ್ದಾರೆ.

ನಾವು ಹೇಳಿಕೊಳ್ಳುವುದಕ್ಕಷ್ಟೇ ಕಾರ್ಪೋರೇಟ್ ಉದ್ಯೋಗಿಗಳು. ಆದರೆ ವಾಸ್ತವದಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದರೂ ಇವರ ಬಳಿ ಅಪ್ಪಣೆ ಕೇಳುವ ಕಾರ್ಪೋರೇಟ್ ಗುಲಾಮರಾಗಿದ್ದೇವೆ. ಈ ಕಂಪನಿ, ಭಾರತದ ಮತ್ತು ರಾಜ್ಯದ ಯಾವುದೇ ಕಾನೂನುಗಳನ್ನೂ ಗೌರವಿಸದೇ ತನ್ನಿಷ್ಟದಂತೆ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಸಭೆಗಳನ್ನು ನಡೆಸಿದ್ದೇವೆ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಲಾಕ್‌ಡೌನ್‌ಗಿಂತ ಮೊದಲು ಒಂದು ಕಾರು ತಯಾರಿಸಲು ಒಬ್ಬ ಕಾರ್ಮಿಕ 3 ನಿಮಿಷ ದುಡಿಯಬೇಕಾಗಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಲಾಕ್‌ಡೌನ್‌ ನಂತರದಲ್ಲಿ 2.5 ನಿಮಿಷದಲ್ಲಿ ಒಂದು ಕಾರು ತಯಾರಿಸಬೇಕಾಗಿದೆ. ಇದು ಒಂದು ರೀತಿಯಲ್ಲಿ ಉಸಿರು ಬಿಗಿಹಿಡಿದು ಕೆಲಸ ಮಾಡುವಂತೆ. ಇದರಲ್ಲಿ ಒಂದು ಕ್ಷಣ ಹೆಚ್ಚು-ಕಡಿಮೆಯಾದರೂ ಇಡೀ ಉತ್ಪಾದನೆಯನ್ನು ನಿಲ್ಲಿಸಿ ನಮ್ಮ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ವರ್ಷವೂ ಕೆಲವರನ್ನು ಕೆಲಸದಿಂದ ತೆಗೆಯುತ್ತದೆ, ಆದರೆ ಉತ್ಪಾದನೆ ಮಾತ್ರ ಅಷ್ಟೇ ಇರಬೇಕು ಎಂದು ಹೇಳುತ್ತಾರೆ. ಇದನ್ನು ಪ್ರಶ್ನಿಸಿದ 40 ಕ್ಕೂ ಹೆಚ್ಚು ಜನರನ್ನು ಅಮಾನತ್ತು ಮಾಡಲಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ “ಇಲ್ಲಿ ಅಮಾನವೀಯವಾಗಿ ಕಾರ್ಮಿಕರನ್ನು ಯಂತ್ರದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಾನೂನುಗಳನ್ನು ಗಾಳಿಗೆ ತೂರಿ ಲಾಕೌಟ್‌ ಹೇರಲಾಗಿದೆ. ಇದನ್ನು ಪ್ರಶ್ನಿಸಿದವರನ್ನು ಅಮಾನತ್ತು ಮಾಡಲಾಗಿದೆ. ಇಷ್ಟೆಲ್ಲ ಅನ್ಯಾಯ ನಡೆಯುತ್ತಿದ್ದರು ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿರುವ ಮೂಲಕ ಪರೋಕ್ಷವಾಗಿ ಕಾರ್ಖಾನೆ ಪರವಾಗಿ ನಿಂತಿದೆ. ಹಾಗಾಗಿ ನಮಗೆ ಹೋರಾಟ ಅನಿವಾರ್ಯ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights