ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸುತ್ತಿರುವ ಮುನಿರತ್ನ! ಫಲಿತಾಂಶಕ್ಕೂ ಮುನ್ನವೇ ಇಂಧನ ಖಾತೆಗೆ ಲಾಭಿ!

ಆರ್‌ಆರ್‌ನಗರ ಉಪಚುನಾವಣೆ ನ.03ರಂದು ಮುಗಿದಿದೆ. ಇನ್ನೂ ಕ್ಷೇತ್ರದ ಜನರು ಯಾರಿಗೆ ಮತನೀಡಿದ್ದಾರೆ. ಯಾರು ಗೆಲ್ಲಲಿದ್ದಾರೆ ಎಂಬುದು ನ.10ರಂದು ಗೊತ್ತಾಗಲಿದೆ. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರತ್ನ ಫಲಿತಾಂಶ ಬರುವುದಕ್ಕೂ ಮುಂಚೆಯೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಪ್ರಭಲ ಖಾತೆಯೇ ಬೇಕೆಂದು ಲಾಬಿಯನ್ನೂ ನಡೆಸುತ್ತಿದ್ದಾರೆ.

ಮೈತ್ರಿ ಸರ್ಕಾರವನ್ನು ಕಡೆವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ 17 ಶಾಸಕರಲ್ಲಿ ಮುನಿರತ್ನ ಕೂಡ ಒಬ್ಬರಾಗಿದ್ದಾರೆ. ಹಾಗಾಗಿ ಮುನಿರತ್ನಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಈಗಾಗಲೇ ನೀಡಿದ್ದಾರೆ. ಇರುವ ಒಟ್ಟು 34 ಖಾತೆಗಳಲ್ಲಿ ಆರು ಪ್ರಮುಖ ಖಾತೆ ಸಿಎಂ ಯಡಿಯೂರಪ್ಪ ಬಳಿಯಿದೆ, ಹಣಕಾಸು, ಇಂಧನ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಸಿಎಂ ಉಳಿಸಿಕೊಂಡಿದ್ದು, ಇವುಗಳಲ್ಲಿಯೇ ಯಾವುದಾದರೊಂದು ಖಾತೆಗೆ ಮುನಿರತ್ನ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಕಾಂಗ್ರೆಸ್ ತೊರೆದಾಗ ಹಲವರು ನಾನು ಇಂಧನ ಸಚಿವನಾಗಬೇಕೆಂದು ಹಾರೈಸಿದರು ಎಂದು ಮುನಿರತ್ನ ತಿಳಿಸಿದ್ದು, ಇಂಧನ ಖಾತೆ ಬೇಕೆಂದು ಸಿಎಂಗೆ ಪರೋಕ್ಷವಾಗಿ ಸೂಚಿಸಿದ್ದಾರೆ.

ಆದರೆ ಮುನಿರತ್ನ ಜೊತೆ ಕಾಂಗ್ರೆಸ್ ತೊರೆದ ರಮೇಶ್ ಜಾರಕಿಹೊಳಿ ಕೂಡ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದರು, ಆದರೆ ಬಳಿಕ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಲಾಯಿತು.

ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಮತ್ತು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ.  ಆದರೆ ಯಾವ ಖಾತೆ ನೀಡಲಿದ್ದಾರೆ ಎಂಬುದು ಸಿಎಂ ಗೆ ಬಿಟ್ಟ ವಿಷಯವಾಗಿದೆ, ಇಂಥದ್ದೆ ಖಾತೆ ಬೇಕೆಂದು ಮುನಿರತ್ನ ಬೇಡಿಕೆ ಇಟ್ಟಿಲ್ಲ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಆದರೆ ಮುನಿರತ್ನ ಇಂಧನ ಖಾತೆಗಾಗಿ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಮತ್ತೊಂದೆಡೆ ಬಿಜೆಪಿ ನಿಷ್ಟಾವಂತ ಶಾಸಕರು ಇದೇ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಷ್ಠರನ್ನು ಕಡೆಗಣಿಸುವುದು ಸಿಎಂಗೆ ಇಷ್ಟವಿಲ್ಲ, ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೊಂದು ಕಠಿಣ ಸವಾಲಾಗಿದ್ದು, ದೆಹಲಿ ನಾಯಕರ ಜೊತೆ ಚರ್ಚಿಸಲು ಬಿಎಸ್‌ವೈ ಕಾಯುತ್ತಿದ್ದಾರೆ.

ಚುನಾವಣಾ ಫಲಿತಾಂಶ ಬರುವುದಕ್ಕೂ ಮುನ್ನವೇ, ಇಂಧನ ಖಾತೆಗೆ ಲಾಬಿ ನಡೆಸುತ್ತಿರುವ ಮುನಿರತ್ನರ ಸ್ಪೀಡ್‌ ಕೂಸು ಹುಟ್ಟುವುದಕ್ಕಿಂತ ಮುಂಚೆಯೇ ಕುಲಾವಿ ಹೊಲಿಸುತ್ತಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಟೀಕೆ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: “ನಾನು ನಿವೃತ್ತಿ ಹೊಂದಿದ್ದೇನೆ” ಎಂದ ಪಿವಿ ಸಿಂಧು: ಅಭಿಮಾನಿಗಳಿಗೆ ಕೊನೆಯಲ್ಲಿ ಟ್ವಿಸ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights