ಲಾಕ್ ಡೌನ್: 2500ರೂಗೆ ಫೋನ್ ಮಾರಿ ದಿನಸಿ ಕೊಂಡು ಕೊನೆಗೆ ಆತ್ಮಹತ್ಯೆಗೆ ಶರಣಾದ ಕಾರ್ಮಿಕ

ಗುರಗಾಂವ್ ನಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಬಿಹಾರದ ವಲಸೆ ಕಾರ್ಮಿಕ 35 ವರ್ಷದ ಚಬು ಮಂಡಲ್, 2500 ರೂಗಳಿಗೆ ತನ್ನ ಫೋನ್ ಮಾರಿ, ಕುಟುಂಬಕ್ಕಾಗಿ ಒಂದು ಪುಟ್ಟ ಫ್ಯಾನು, ಒಂದಷ್ಟು ದಿನಸಿ ಕೊಂಡುತಂದು ಕೊನೆಗೆ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ನಾಲ್ಕು ಜನ ಮಕ್ಕಳು, ತನ್ನ ಪತ್ನಿ  ಮತ್ತು ಅವರ ಪೋಷಕರನ್ನು ಈ ಕಾರ್ಮಿಕ ತೊರೆದಿದ್ದಾರೆ.

ಬುಧವಾರದಿಂದ ಇಡೀ ಕುಟುಂಬಕ್ಕೆ ಅಡುಗೆ ಮಾಡಿ ಊಟ ಮಾಡಲು ಏನೂ ಇಲ್ಲದಿದ್ದಾಗ, ಗುರುವಾರ ತಮ್ಮ ಗಂಡ ದಿನಸಿ ತಂದದ್ದನ್ನು ನೋಡಿ ಪೂನಂ ಅವರಿಗೆ ಸಂತೋಷವಾಗಿತ್ತು. ಈ ಹಿಂದೆಯೂ ಅಲ್ಲಿನ ಒಂದಷ್ಟು ನಿವಾಸಿಗಳು ಉಚಿತವಾಗಿ ನೀಡುತ್ತಿದ್ದ ಆಹಾರದಿಂದಲೇ ಇವರುಗಳು ನಿಭಾಯಿಸಿಕೊಳ್ಳುತ್ತಿದ್ದರು.

ಅಡುಗೆ ಮಾಡಲು ಪ್ರಾರಂಭ ಮಾಡುವುದಕ್ಕೂ ಮುಂಚಿತವಾಗಿ ಪೂನಂ ಬಚ್ಚಲು ಮನೆಗೆ ಹೋಗಿದ್ದಾರೆ. ಅವರ ತಾಯಿ ಮಕ್ಕಳನ್ನು ಕರೆದುಕೊಂಡು ಆಟವಾಡಲು ಮನೆಯ ಹತ್ತಿರವಿದ್ದ ಮರದ ಬಳಿಗೆ ತೆರಳಿದ್ದಾರೆ. ಮಂಡಲ್ ಮಾವ ಅಲ್ಲೇ ಹತ್ತಿರದಲ್ಲಿ ನಿದ್ದೆ ಹೋಗಿದ್ದಾರೆ. ಈ ಸಮಯದಲ್ಲಿ ಮಂಡಲ್ ನೇಣಿಗೆ ಶರಣಾಗಿರುವುದಾಗಿ ಪತ್ರಿಕೆ ವರದಿ ಮಾಡಿದೆ.

“ಲಾಕ್ ಡೌನ್ ಪ್ರಾರಂಭ ಆದಾಗಿಲಿಂದಲೂ ಅವರಿಗೆ ತೊಂದರೆಯಾಗಿತ್ತು; ನಾವು ಆಹಾರಕ್ಕಾಗಿ ಒದ್ದಾಡುತ್ತಿದ್ದೇವೆ. ಕೆಲಸವೂ ಇಲ್ಲ ಹಣವೂ ಇಲ್ಲ. ನಮ್ಮ ಕುಟುಂಬ ಊಟ ಮಾಡಲು ಉಚಿತ ಆಹಾರ ಸಿಗುವುದಕ್ಕೆ ಕಾಯುತ್ತಿರುತ್ತೇವೆ, ಅದು ಕೂಡ ಪ್ರತಿದಿನ ಸಿಗುವುದಿಲ್ಲ” ಎಂದು ಮಂಡಲ್ ಅವರ ಪತ್ನಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗುರಗಾಂವ್ ಪೋಲಿಸ್ ಅಧಿಕಾರಿಗಳು “ನಮಗೆ ನೆನ್ನೆ ಮಧ್ಯಾಹ್ನ ವಿಷಯ ತಿಳಿಯಿತು. ಅವರು ವಲಸೆ ಕಾರ್ಮಿಕ ಮತ್ತು ಮಾನಸಿಕವಾಗಿ ಸಮಸ್ಯೆಗೆ ಒಳಗಾಗಿದ್ದರು. ಅವರ ದೇಹವನ್ನು ನಮಗೆ ಒಪ್ಪಿಸಲಾಗಿದೆ ಆದರೆ ಅದರ ಬಗ್ಗೆ ಹೆಚ್ಚಿನ ಕ್ರಮಕ್ಕಾಗಿ ಕುಟುಂಬ ಕೇಳಿಕೊಂಡಿಲ್ಲ. ಎಫ್ ಐ ಆರ್ ದಾಖಲಿಸಿಲ್ಲ” ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಅಧಿಕಾರಿಗಳು ಕೂಡ ಇದನ್ನೇ ಪುನರುಚ್ಚರಿಸಿದ್ದು “ಅವರು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದರು. ಇದು ದುರದೃಷ್ಟಕರ ಸಂಗತಿ. ಸಾಂಕ್ರಾಮಿಕ ಬಂದಾಗಿನಿಂದ ಆ ವ್ಯಕ್ತಿಗೆ ಮಾಸಿಕವಾಗಿ ಬಹಳ ತೊಂದರೆಯಾಗಿತ್ತು. ಆಹಾರದ್ದು ತೊಂದರೆ ಅಲ್ಲ, ಕುಟುಂಬದ ಬಳಿ ಇನ್ನೂ ಸ್ವಲ್ಪ ಆಹಾರ ಉಳಿದಿತ್ತು ಮತ್ತು ಆಹಾರ ವಿತರಿಸುವ ಕೇಂದ್ರ ಹತ್ತಿರದಲ್ಲೇ ಇದೆ” ಎಂದಿದ್ದಾರೆ.

“ಸೆಕ್ಟರ್ 56 ರಲ್ಲಿ ಆಹಾರ ವಿತರಣ ಕೇಂದ್ರ ಇದೆ ಎಂದು ಹೇಳಲಾಗುತ್ತದೆ. ನಾನು ಅಂಗವಿಕಲ. ನನ್ನ ಪತ್ನಿಗೆ ವಯಸ್ಸಾಗಿದೆ. ಮಕ್ಕಳು ಇನ್ನೂ ಸಣ್ಣವು. ಅಷ್ಟು ದೂರ ಬರಿ ಹೊಟ್ಟೆಯಲ್ಲಿ ನಡೆದು ಹೋಗಲು ಕಷ್ಟ” ಎನ್ನುತ್ತಾರೆ ಮಂಡಲ್ ಅವರ ಮಾವ ಉಮೇಶ್.

ಸರಸ್ವತಿ ಕುಂಜ್ ನ ಮತ್ತೊಬ್ಬ ನಿವಾಸಿ, ಬಿಹಾರದಿಂದ ಬಂದಿರುವ ವಲಸೆ ಕಾರ್ಮಿಕ ಫಿರೋಜ್ ಹೇಳುವಂತೆ “ಕೆಲವು ಪೊಲೀಸರ ವರ್ತನೆಯಿಂದ ಭಯಗೊಂಡು” ಆಹಾರ ಹುಡುಕಲು ಹೋಗುವುದಕ್ಕೆ ಜನ ಭಯ ಬೀಳುತ್ತಿದ್ದಾರೆ ಎನ್ನುತ್ತಾರೆ.

ಬಿಹಾರದ ಮಾಧೆಪುರ ಜಿಲ್ಲೆಯ ಮಂಡಲ್ 15 ವರ್ಷಗಳ ಹಿಂದೆ ಮನೆ ಪೇಂಟರ್ ಆಗಿ ಗುರಗಾಂವ್ ಗೆ ವಲಸೆ ಹೋಗಿದ್ದರು. ಹತ್ತು ವರ್ಷಗಳ ಹಿಂದೆ ಮದುವೆಯಾಗಿ ಕುಟುಂಬವನ್ನು ಅಲ್ಲಿಗೆ ವರ್ಗಾಯಿಸಿಕೊಂಡಿದ್ದರು. ಸರಸ್ವತಿ ಕುಂಜ್ ನಲ್ಲಿ 1500 ರೂ ಬಾಡಿಗೆ ಕೊಟ್ಟು ವಾಸಿಸುತ್ತಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಮಾರ್ಚ್ 22 ರ ನನತರ ಲಾಕ್ ಡೌನ್ ಘೋಷಣೆಯಾದ ಮೇಲೆ ಇಡೀ ಕುಟುಂಬಕ್ಕೆ ದುಡ್ಡು ಇಲ್ಲದಂತಾಯಿತು. ಅದಲ್ಲದೆ  ಮನೆ ಮಾಲೀಕರು ಒಂದೆರಡು ಬಾರಿ ಬಾಡಿಗೆ ಕೇಳಿದ್ದು ಹೆಚ್ಚಿನ ಒತ್ತಡ ಹಾಕಿತು ಎಂದು ಪೂನಂ ಹೇಳಿದ್ದಾರೆ. ಗುರುವಾರ ಬೆಳಗ್ಗೆ ಅವರು ಹತ್ತು ಸಾವಿರ ಕೊಟ್ಟು ಖರೀದಿಸಿದ್ದ ಫೋನ್ ಮಾರಲು ನಿರ್ಧರಿಸಿದರು. ಶೀಟ್ ಮಾಳಿಗೆಯಲ್ಲಿ ಈ ಬಿರುಬೇಸಿಗೆಯಲ್ಲಿ ಇರಲು ಅಸಾಧ್ಯವಾಗಿದ್ದರಿಂದ ಒಂದು ಚಿಕ್ಕ ಫ್ಯಾನ್, ಅಕ್ಕಿ ಮತ್ತು ದಿನಸಿಗಳನ್ನು ಕೊಂಡು ತಂದಿದ್ದರು ಎಂದು ಹೇಳುದ್ದಾರೆ.

ಈಗ ಇಡೀ ಕುಟುಂಬ ದುಃಖದ ಮಡುವಿನಲ್ಲಿ ಇದೆ. ಮಂಡಲ್ ಅವರ ಅಂತ್ಯಸಂಸ್ಕಾರಕ್ಕಾಗಿ ಅವರ ಸಹನಿವಾಸಿಗಳು 5000ರೂ ಸಂಗ್ರಹಿಸಿ ಒದಗಿಸಿಕೊಟ್ಟಿದ್ದಾರೆ. ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸಿರುವ ಕುಟುಂಬಕ್ಕೆ ಮುಂದೆ ಆಹಾರ ಗಳಿಸಿಕೊಡುವವರು ಯಾರು ಎಂಬ ಚಿಂತೆ ದುಃಖದ ಜೊತೆಗೆ ಸೇರಿಕೊಂಡಿದೆ.

(ಕೃಪೆ): ಇಂಡಿಯನ್ ಎಕ್ಸ್ಪ್ರೆಸ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights