ಬಯಲಾಯ್ತು ರಿಪಬ್ಲಿಕ್ ಟಿವಿ ಅಸಲಿಯತ್ತು: ಚಾನೆಲ್ ನಮಗೆ ಹಣ ನೀಡಿದೆ ಎಂದ ವೀಕ್ಷಕರು
ರಿಪಬ್ಲಿಕ್ ಟಿವಿ ಮತ್ತು ಮುಂಬೈನ ಒಂದು ಸ್ಥಳೀಯ ಚಾನೆಲ್‌ಗಳು ತಮ್ಮ ಚಾನೆಲ್‌ಗಳನ್ನು ಕೆಲವು ಗಂಟೆಗಳ ಕಾಲ ಆನ್‌ನಲ್ಲಿ ಇಡುವುದಕ್ಕಾಗಿ ನಮಗೆ ನೇರವಾಗಿ ಹಣ ನೀಡಿವೆ ಎಂದು ನಾಲ್ವರು ವೀಕ್ಷಕರು ಮ್ಯಾನಿಸ್ಟ್ರೇಟ್ ಮುಂದೆ ಹೇಳಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.
ನಕಲಿ ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ ಮತ್ತು ಮುಂಬೈನ ಸ್ಥಳೀಯ ಚಾನೆಲ್‌ಳಾದ ಬಾಕ್ಸ್ ಸಿನೆಮಾ ಮತ್ತು ಫಕ್ತ್ ಮರಾಠಿ ಭಾಗಿಯಾವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಂದು ಮ್ಯಾನಿಸ್ಟ್ರೇಟ್ ವಿಚಾರಣೆ ನಡೆಸಿದ್ದು, ತಾವು ಹಣ ಪಡೆದಿರುವುದಾಗಿ ನಾಲ್ವರು ಹೇಳಿದ್ದಾರೆ. ಪ್ರಕರಣದಲ್ಲಿ ಇವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ ಎಂದು ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಹೇಳಿದ್ದಾರೆ.
ಮೂವರು ತಮಗೆ ರಿಪಬ್ಲಿಕ್ ಟಿವಿಯಿಂದ ಹಣ ಬಂದಿರುವುದಾಗಿ, ಇನ್ನೊಬ್ಬರು ‘ಬಾಕ್ಸ್ ಸಿನಿಮಾ’ದಿಂದ ಹಣ ಬಂದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಟಿಆರ್‌ಪಿ ಹಗರಣ: ಗೋಸ್ವಾಮಿಗೆ ಒಂದೆಡೆ ಪೊಲೀಸ್, ಮೊತ್ತೊಂದೆಡೆ ಇಂಡಿಯಾ ಟುಡೆ ಚಾರ್ಜ್!
ಮೂವರು ಸಾಕ್ಷಿಗಳು ರಿಪಬ್ಲಿಕ್ ಟಿವಿಯ ಅಧಿಕಾರಿಗಳ ಹೆಸರು ಹೇಳಿರುವುದನ್ನು ಮುಂಬಯಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಖಚಿತಪಡಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ತನಿಖೆ ಸಂದರ್ಭದಲ್ಲಿ ಸಾಕ್ಷಿಗಳು ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಈ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ ಎಂದು ಪೊಲೀಸರು ವಿವರಿದ್ದಾರೆ. ಸಾಕ್ಷಿಗಳು ಸ್ವಯಂ ಪ್ರೇರಿತರಾಗಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಚಿತವಾದರೆ ಮಾತ್ರ ನ್ಯಾಯಾಧೀಶರು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಾರೆ. ಹೀಗಾಗಿ ಈ ತಪ್ಪೊಪ್ಪಿಗೆಗಳನ್ನು ಪೊಲೀಸರು ಸಾಕ್ಷಿಗಳಿಂದ ಹೊರತೆಗೆದಿದ್ದಾರೆ ಎಂದು ಈಗ ಆರೋಪಿಸಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿಯವರೆಗೆ ಬಂಧಿಸಲಾಗಿರುವ ಐವರಲ್ಲಿ ಮೂವರು ತಾವು ಈ ಹಗರಣದ ಪಾಲುದಾರರು ಎಂದು ಒಪ್ಪಿಕೊಂಡಿದ್ದು, ಮನೆಗಳಿಗೆ ಹಣ ನೀಡುತ್ತಿದ್ದುದಾಗಿ ಹೇಳಿದ್ದಾರೆ. ಇವರಲ್ಲಿ ಹನ್ಸಾ ರಿಸರ್ಚ್‌ನ ಮಾಜಿ ಉದ್ಯೋಗಿಯೂ ಸೇರಿದ್ದಾರೆ.
ಟಿಆರ್‌ಪಿಗಾಗಿ ದತ್ತಾಂಶಗಳನ್ನು ಸಂಗ್ರಹಿಸಲು ಮನೆ ಮನೆಗಳಿಗೆ ಪೀಪಲ್‌ಮೀಟರ್‌ಗಳನ್ನು ಇನ್‌ಸ್ಟಾಲ್ ಮಾಡುವ ಗುತ್ತಿಗೆಯನ್ನು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾಗೆ ನೀಡಿತ್ತು. ನಿರ್ದಿಷ್ಟ ವಾಹಿನಿಯನ್ನು ಮಾತ್ರ ಆನ್ ಮಾಡಿ ಇಡುವಂತೆ ಮನೆಗಳಿಗೆ ಹಣ ನೀಡುವ ಮೂಲಕ ಇದರಲ್ಲಿ ವಂಚನೆ ನಡೆದಿದ್ದು, ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರುವುದು ಪ್ರಕರಣಕ್ಕೆ ಬಲ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.
12 ವಾರಗಳ ಅವಧಿಗೆ ಟಿಆರ್‌ಪಿ ರೇಟಿಂಗ್ ನೀಡುವುದನ್ನು ಬಾರ್ಕ್ ಸ್ಥಗಿತಗೊಳಿಸಿದೆ.
ಇದನ್ನೂ ಓದಿ: ಟಿಆರ್‌ಪಿ ಹಗರಣ: ಸುದ್ದಿ ಚಾನೆಲ್‌ಗಳ ರೇಟಿಂಗ್ ತಾತ್ಕಾಲಿಕ ಸ್ಥಗಿತಗೊಳಿಸಿದ ಬಾರ್ಕ್