ನನ್ನ ಹೋರಾಟ ನಿತೀಶ್ ವಿರುದ್ಧವಷ್ಟೇ; ಕೊನೆ ಉಸಿರಿರುವವರೆಗೂ ಮೋದಿ ಜೊತೆಗಿರುತ್ತೇನೆ: ಚಿರಾಗ್ ಪಾಸ್ವಾನ್
ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ತೊರೆದು ಸ್ವಂತತ್ರ್ಯವಾಗಿ ಸ್ಪರ್ಧಿಸುತ್ತೇವೆ ಎಂದು ಎಲ್ಜೆಪಿ ಪಕ್ಷದ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ. ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಪಾಸ್ವಾನ್, ನನ್ನ ಹೋರಾಟ ಏನಿದ್ದರೂ ನಿತೀಶ್ ಕುಮಾರ್ ವಿರುದ್ಧ ಮಾತ್ರ. ಆದರೆ, ನನ್ನ ಕೊನೆಯ ಉಸಿರಿರುವವರೆಗೂ ಪ್ರಧಾನಿ ಮೋದಿ ಜೊತೆಗಿರುತ್ತೇನೆ ಎಂದು ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ನಿನ್ನೆ (ಶನಿವಾರ) ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ರಾಮ್ ವಿಲಾಸ್ ಪಾಸ್ವಾನ್ ತಮ್ಮ ಜೀವನದ ಕೊನೆಯ ಉಸಿರಿರುವವರೆಗೂ ನನ್ನ ಜೊತೆ ಇದ್ದರು ಎಂದು ನಮ್ಮ ತಂದೆಯನ್ನು ಸ್ಮರಿಸಿದರು. ನಾನೂ ಕೂಡ ನಮ್ಮ ತಂದೆಯಂತೆಯೇ ಕೊನೆ ಉಸಿರಿರುವವರೆಗೂ ಮೋದಿಯವರ ಜೊತೆಗಿರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತ್ಯಾಚಾರಿಗಳಿಗೆ ಮರಣದಂಡನೆ ನೀಡಬೇಕು: ಐಪಿಸಿ ತಿದ್ದುಪಡಿಗೆ ಹೈಕೋರ್ಟ್ ಶಿಫಾರಸ್ಸು!
ಪ್ರಧಾನಿ ನಮ್ಮ ತಂದೆಯನ್ನು ನೆನೆದಿರುವುದು ನನಗೆ ಗೌರವದ ವಿಷಯ. ನಾನು ತುಂಬ ಭಾವುಕನಾಗಿದ್ದೇನೆ. ಅಲ್ಲದೇ ಮೋದಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುವ ಭರವಸೆಯನ್ನೂ ನೀಡುತ್ತೇನೆ. ನನ್ನ ಹೋರಾಟ ಏನಿದ್ದರೂ ನಿತೀಶ್ ಕುಮಾರ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧವಲ್ಲ. ಆದರೆ ಜೆಡಿಯು ಮಿತ್ರ ಪಕ್ಷವಾಗಿರುವುದರಿಂದ ನನ್ನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಆದರೆ ನಾನು ಮಾತ್ರ ಬಿಜೆಪಿ ವಿರುದ್ಧ ಮಾತನಾಡುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದರು.
ಅಂತೆಯೇ, ನಾನು ಸಿಎಂ ಆದರೆ ನಿತೀಶ್ ಕುಮಾರ್ ರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ನಾನು ಅಧಿಕಾರಕ್ಕೆ ಬಂದರೆ ಸಾತ್ ನಿಶ್ಚೇ (ಏಳು ಪರಿಹಾರಗಳು) ಯೋಜನೆಯಲ್ಲಿ ನಾನು ಹಗರಣಗಳನ್ನು ತನಿಖೆ ಮಾಡುತ್ತೇನೆ ಮತ್ತು ತಪ್ಪಿತಸ್ಥರೆಲ್ಲರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಆ ಪಟ್ಟಿಯಲ್ಲಿ ನಿತೀಶ್ ಕುಮಾರ್ ಇದ್ದರೆ ಅವರನ್ನೂ ಸಹ ಎಂದು ಚಿರಾಗ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಆರ್ಜೆಡಿ ಪ್ರಣಾಳಿಕೆ ಬಿಡುಗಡೆ-10 ಲಕ್ಷ ಉದ್ಯೋಗ, ಉಚಿತ ಲ್ಯಾಪ್ಟಾಪ್, ಕೃಷಿ ಸಾಲ ಮನ್ನಾ!