ಅತ್ಯಾಚಾರಿಗಳಿಗೆ ಮರಣದಂಡನೆ ನೀಡಬೇಕು: ಐಪಿಸಿ ತಿದ್ದುಪಡಿಗೆ ಹೈಕೋರ್ಟ್ ಶಿಫಾರಸ್ಸು!
ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ( 2012ರಲ್ಲಿ) ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಭಾರತೀಯ ದಂಡ ಸಂಹಿತೆ (ಐಪಿಸಿ) ನಿಬಂಧನೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಅತ್ಯಾಚಾರವು ಸಂತ್ರಸ್ತ ಯುವತಿ ವಿರುದ್ಧದ ಅಪರಾಧ ಪ್ರಕರಣ ಮಾತ್ರವಲ್ಲ. ಇಡೀ ಸಮಾಜದ ವಿರುದ್ಧವಾದ ಅಪರಾಧ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಈ ಅಪರಾಧದ ಭೀತಿಯನ್ನು ತಡೆಯಲು ಮರಣದಂಡನೆ ಶಿಕ್ಷೆ ವಿಧಿಸಬೆಕು ಎಂದು ಸಲಹೆ ನೀಡಿರುವ ಹೈಕೋರ್ಟ್, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 376 ಡಿ ಯ ನಿಬಂಧನೆಗಳಿಗೆ ಹೆಚ್ಚಿನ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್ ಅವರ ವಿಭಾಗೀಯ ಪೀಠವು ಶಿಫಾರಸು ಮಾಡಿದೆ.
ಇದನ್ನೂ ಓದಿ: ನವರಾತ್ರಿ: ಪೂಜೆ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!
2012ರ ಅ.13ರಂದು ರಾತ್ರಿ 9.30ರ ಸುಮಾರಿನಲ್ಲಿ ಕಾನೂನು ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಸುತ್ತುವರಿದ 07 ಜನ ಕಾಮುಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು. ಅಪರಾಧಿಗಳಾದ ರಾಮು, ಶಿವಣ್ಣ, ಮದ್ದೂರ, ಎಲೆಯಯ್ಯ, ಈರಯ್ಯ, ರಾಜ ಮತ್ತು ದೊಡ್ಡ ಈರಯ್ಯಗೆ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಅಪರಾಧಿಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠವು, ಆಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ.
ಯಾವುದೇ ಮಗಳ ಮೇಲಿನ ದಾಳಿ ನಮ್ಮ ಮೇಲಿನ ದಾಳಿ
ನಿರ್ಭಯಾ ಪ್ರಕರಣ ಮತ್ತು ಕಾನೂನು ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರದ ನಡುವೆ ಒಂದೇ ವ್ಯತ್ಯಾಸ, ನಿರ್ಭಯಾ ಪ್ರಕರಣದಲ್ಲಿ, ಆಕೆಯ ಮೇಲೆ ಕ್ರೂರ ಅಪರಾಧ ನಡೆದ ನಂತರ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ಥೆ ಅತ್ಯಾಚಾರದ ಬಳಿಕ ತನ್ನ ಕಾನೂನು ಕೋರ್ಸ್ ಅನ್ನು ನಿಲ್ಲಿಸಿ ತನ್ನ ತಾಯ್ನಾಡು ನೇಪಾಳಕ್ಕೆ ಮರಳಿದ್ದಾಳೆ. ನಾವು ನ್ಯಾಯಾಧೀಶರು, ಸಾಮಾಜಿಕ ಪೋಷಕರು. ಮಹಿಳೆಯರ ಸಮಾಜದ ಬಗೆಗಿನ ನಮ್ಮ ಕಾಳಜಿಯನ್ನು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತಗೊಳಿಸಬಹುದಾದರೆ, ಯಾರೊಬ್ಬರ ಮಗಳ ಮೇಲಿನ ಆಕ್ರಮಣವು ನಮ್ಮ ಮಗಳ ಮೇಲಿನ ಆಕ್ರಮಣವಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್ ಅವರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ನಾವು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಭಾರತದ ಕನಸನ್ನು ಸಾಧಿಸಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಭಾರತವು ಮಹಿಳೆಯರ ಸಬಲೀಕರಣವನ್ನು ಸಾಧಿಸಿದೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅತ್ಯಾಚಾರವು ಮಹಿಳೆಯರ ಮೇಲಿನ ಅಪರಾಧ ಮಾತ್ರವಲ್ಲ, ಇಡೀ ನಾಗರಿಕ ಸಮಾಜದ ವಿರುದ್ಧವಾಗಿದೆ. ಭೀಕರ ಘಟನೆಯಿಂದಾಗಿ, ರಾಷ್ಟ್ರದ ಕಾನೂನು ಸುವ್ಯವಸ್ಥೆ, ದೇಶದ ಖ್ಯಾತಿಯು ಅಪಾಯದಲ್ಲಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಸಿದ್ದತೆ ನಡೆಸಿತ್ತು: ಸತ್ಯಶೋಧನಾ ವರದಿ

