ತಲೆ ಬೋಳಿಸಿಕೊಂಡು ಬಿಜೆಪಿ ತೊರೆದ ತ್ರಿಪುರಾ ಶಾಸಕ: ಟಿಎಂಸಿ ಸೇರುವ ಸಾಧ್ಯತೆ!

ತ್ರಿಪುರಾ ರಾಜ್ಯದಲ್ಲಿರುವ ಸುರ್ಮಾ ಕ್ಷೇತ್ರದ ಬಿಜೆಪಿ ಶಾಸಕ ಆಶೀಶ್‌ ದಾಸ್ ಅವರು ತಲೆ ಬೋಳಿಸಿಕೊಂಡು ಬಿಜೆಪಿ ತೊರೆದಿದ್ದಾರೆ.

“ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತವಾಗಿ” ತಲೆ ಬೋಳಿಸಿಕೊಂಡಿದ್ದೇನೆ. ರಾಜ್ಯದಲ್ಲಿ ರಾಜಕೀಯ ಅರಾಜಕತೆ ಮತ್ತು ಅಶಾಂತಿಯನ್ನು ಬಿಜೆಪಿ ಹರಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯ ದುರಾಡಳಿತದಿಂದಾಗಿ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಲ್ಲಿ ತೀವ್ರ ಅತೃಪ್ತಿ ಇದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ದಾಸ್‌ ಅವರು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ದೇಬ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು.

“ಬಿಜೆಪಿ ಸರ್ಕಾರದ ದುರಾಡಳಿತಗಳಿಗೆ ಪ್ರಾಯಶ್ಚಿತವಾಗಿ ನಾನು ಇಂದು ತಲೆ ಬೋಳಿಸಿಕೊಂಡಿದ್ದೇನೆ. ನಾನು ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ತ್ರಿಪುರಾದಲ್ಲಿ ಉಂಟಾಗಿರುವ ಅರಾಜಕತೆ ಮತ್ತು ದುರಾಡಳಿತದಿಂದಾಗಿ ಕಳೆದ ಎರಡು ವರ್ಷದಿಂದ ಪಕ್ಷದಿಂದ ದೂರ ಉಳಿದಿದ್ದೆ. ಎಲ್ಲ ತಪ್ಪುಹೆಜ್ಜೆಗಳನ್ನು ನಾನು ಟೀಕಿಸುತ್ತೇನೆ ಹಾಗೂ ಪಕ್ಷ ಮತ್ತು ರಾಜಕೀಯ ಮೀರಿ ಜನಪರವಾಗಿ ಕೆಲಸ ಮಾಡುತ್ತೇನೆ. ಮುಂದಿನ ಹೆಜ್ಜೆ ಏನು ಎಂದು ಶೀಘ್ರವೇ ನಿರ್ಧರಿಸುತ್ತೇನೆ” ಎಂದು ದಾಸ್ ಹೇಳಿದ್ದಾರೆ.

ಅಲ್ಲದೆ, ಮೋದಿ ವಿರುದ್ದವೂ ವಾಗ್ದಾಳಿ ನಡೆಸಿರುವ ದಾಸ್‌, “ಬಹತೇಕ ಎಲ್ಲ ಸರ್ಕಾರಿ ಆಸ್ತಿಗಳನ್ನು ಖಾಸಗಿಗೆ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ದಾಸ್‌ ಅವರು ಈ ಮುಂಚೆಯೇ ಮಮತಾ ಬ್ಯಾನರ್ಜಿಯವರು ಪ್ರಧಾನಿ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಹೀಗಾಗಿ, ಅವರು ಟಿಎಂಸಿಗೆ ಸೇರಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ದಾಸ್ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ತ್ರಿಪುರಾ ಬಿಜೆಪಿ ಘಟಕ ಹೇಳಿದೆ.

ಇದನ್ನೂ ಓದಿ: ಕಾಂಗ್ರೆಸ್ ಡಿಎನ್‌ಎಯಲ್ಲಿ ‘ಲೂಟಿ’ ಇದೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights