FACT CHECK | ಪಶ್ಚಿಮ ಬಂಗಾಳದಲ್ಲಿ ಶಾಲಾ ಬಾಲಕಿಗೆ ಚಾಕುವಿನಿಂದ ಇರಿದ ವ್ಯಕ್ತಿ ಮುಸ್ಲಿಮನಲ್ಲ! ಮತ್ತ್ಯಾರು ?
ಹಾಡಹಗಲೇ ಮುಸ್ಲಿಂ ಯುವಕನೋರ್ವ ಹಿಂದೂ ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ನಾಝಿಯಾ ಇಲಾಹಿ ಖಾನ್ (@naziaelahikhan) ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡು “ಮುಸ್ಲಿಂ ಯುವಕ ಹಿಂದೂ ಯುವತಿಗೆ ಹಾಡಹಗಲೇ ಹೇಗೆ ಇರಿದಿದ್ದಾನೆ ಒಮ್ಮೆ ನೋಡಿ. ಮಮತಾ ರಾಜ್‌ನಲ್ಲಿ ಹಿಂದೂಗಳು ಸುರಕ್ಷಿತರಲ್ಲ. ಪಶ್ಚಿಮ ಬಂಗಾಳದ ಈ ಆಘಾತಕಾರಿ ಪರಿಸ್ಥಿತಿ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಹರಡಲಿದೆ.
ಟಿಎಂಸಿ ಮತ ಪಡೆಯುವ ಸಲುವಾಗಿ ಬಾಂಗ್ಲಾದೇಶ, ಮ್ಯಾನ್ಮಾರ್‌ನಿಂದ ಬರುವ ಮುಸ್ಲಿಮರಿಂದ ಹಣ ಪಡೆದು ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಡುತ್ತಿದೆ. ಇದು ಯಾವ ಸಂದರ್ಭದಲ್ಲಾದರೂ ನನಗೂ ಸಂಭವಿಸಬಹುದು. ಮಮತಾ ಬ್ಯಾನರ್ಜಿಯವರೇ, ಕೋಲ್ಕತ್ತಾ ಪೊಲೀಸರೇ ದಯವಿಟ್ಟು ಸರಿಯಾದ ಕ್ರಮ ಕೈಗೊಳ್ಳಿ. ಪಶ್ಚಿಮ ಬಂಗಾಳ ಇಸ್ಲಾಮಿಕ್ ರಾಜ್ಯವಲ್ಲ. ಕೋಲ್ಕತ್ತಾ ಪೊಲೀಸರೇ ದಯವಿಟ್ಟು ಅರ್ಥ ಮಾಡಿಕೊಳ್ಳಿ” ಎಂದು ಬರೆದುಕೊಂಡಿದ್ದರು.
ಇನ್ನೂ ಕೆಲ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಲ್ಲೂ ವಿಡಿಯೋ ಹಂಚಿಕೊಂಡು ಇದೇ ರೀತಿಯ ಪ್ರತಿಪಾದನೆ ಮಾಡಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 5 ಸೆಪ್ಟೆಂಬರ್ , 2024ರಂದು ಟೈಮ್ಸ್ ಆಫ್ ಇಂಡಿಯಾ ವಿಡಿಯೋ ಕುರಿತು ಪ್ರಕಟಿಸಿರುವ ವರದಿ ಲಭ್ಯವಾಗಿದೆ

ವರದಿಯ ಪ್ರಕಾರ “ಪಶ್ಚಿಮ ಬಂಗಾಳದ ಬೆಲ್ಘರಿಯಾದ ಪ್ರಫುಲ್ಲಾ ನಗರದ ಅಭಿಜಿತ್ ದತ್ತಾ ಎಂಬ ಯುವಕ 14 ವರ್ಷದ ಶಾಲಾ ಬಾಲಕಿಗೆ ರಸ್ತೆ ಮಧ್ಯೆ ಸುಮಾರು ಮೂರು ಬಾರಿ ಹರಿತವಾದ ಆಯುಧದಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ.
ಅಭಿಜಿತ್ ದತ್ತಾ ಬಾಲಕಿಗೆ ಪ್ರೇಮ ನಿವೇದನೆ ಮಾಡಿದ್ದ. ಆಕೆ ತಿರಸ್ಕರಿಸಿದ್ದಳು. ಸೆಪ್ಟೆಂಬರ್ 4,2024ರಂದು ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಅಭಿಜಿತ್ ಮತ್ತೊಮ್ಮೆ ಪ್ರೇಮ ನಿವೇದನೆ ಮಾಡಿದ್ದಾನೆ. ಆಗಲೂ ಬಾಲಕಿ ತಿರಸ್ಕರಿಸಿದ್ದಾಳೆ. ಆಗ ಆತ ಬಾಲಕಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವೇಳೆ ಬಾಲಕಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕುಪಿತಗೊಂಡ ಅಭಿಜಿತ್ ದತ್ತಾ ಬಾಲಕಿಗೆ ಇರಿದಿದ್ದಾನೆ ಎಂದು ವರದಿ ವಿವರಿಸಿದೆ.
ಬಾಲಕಿಗೆ ಇರಿಯುತ್ತಿದ್ದಂತೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಆತ ಪ್ರಜ್ಞಾಹೀನನಾಗಿ ಬಿದ್ದಿದ್ದ. ಸ್ಥಳಕ್ಕೆ ಆಗಮಿಸಿದ ಬೆಲ್ಘರಿಯಾ ಠಾಣೆಯ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಮನೆಯವರ ದೂರಿನ ಅನ್ವಯ ಆತನ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಲ್ಘರಿಯಾ ಪೊಲೀಸ್ ಅಧಿಕಾರಿ ಸುಭ್ರಜಿತ್ ಮಜುಂದರ್ ಅವರಲ್ಲಿ ಈ ಕುರಿತು ಮಾತನಾಡಿದಾಗ “ಘಟನೆಯ ಹಿಂದೆ ಯಾವುದೇ ಕೋಮು ಆಯಾಮಗಳಿಲ್ಲ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯದವರು ಎಂಬುದಾಗಿ ಹೇಳಿದ್ದಾರೆ ಎಂದು ಕನ್ನಡ ಫ್ಯಾಕ್ಟ್ ಚೆಕ್.ಕಾಂ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದ ಬೆಲ್ಘರಿಯಾದ ಪ್ರಫುಲ್ಲಾ ನಗರದ ಅಭಿಜಿತ್ ದತ್ತಾ ಎಂಬ ಯುವಕ 14 ವರ್ಷದ ಶಾಲಾ ಬಾಲಕಿಗೆ ಚಾಕುವಿನಿಂದ ಇರಿದ ಘಟನೆಯನ್ನು ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಬಾಲಕಿಗೆ ಚೂರಿ ಇರಿತ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯದವರಾಗಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2017ರಲ್ಲಿ ಯುವತಿ ಮೇಲೆ ನಡೆದ ದೌರ್ಜನ್ಯದ ವಿಡಿಯೋವನ್ನು ಮಣಿಪುರದಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ತಪ್ಪಾಗಿ ಹಂಚಿಕೆ

