FACT CHECK | 2017ರಲ್ಲಿ ಯುವತಿ ಮೇಲೆ ನಡೆದ ದೌರ್ಜನ್ಯದ ವಿಡಿಯೋವನ್ನು ಮಣಿಪುರದಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ತಪ್ಪಾಗಿ ಹಂಚಿಕೆ

ವ್ಯಕ್ತಿಯೊಬ್ಬ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವಾಗ, ಮತ್ತೊಬ್ಬ ಯುವತಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡಿರುವ ಅನೇಕರು, ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂದೂ ಯುವಕ ಕುಕಿ ಸಮುದಾಯದ ಕ್ರೈಸ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬರೆದುಕೊಂಡಿದ್ದಾರೆ.

Stephanie (@lveyutoo111) ಎಂಬ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “#ManipurVoilenceinIndia ಹಿಂದೂ ಯುವಕ ಪೊದೆಗಳ ನಡುವೆ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿಯೋರ್ವಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಯುವತಿ ಕುಕಿ ಎಂಬ ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದವಳು. ಇವೆಲ್ಲವೂ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಆದರೆ, ಇಂತಹ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು  ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 27 ಸೆಪ್ಟಂಬರ್, 2017ರಂದು ಎನ್‌ಡಿವಿ ವಿಡಿಯೋ ಕುರಿತು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, “19ರ ಹರೆಯದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಪ್ರಿಯಕರ ಹಲ್ಲೆ ನಡೆಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಬಳಿಕ ಅದನ್ನು ಇಬ್ಬರು ಸ್ನೇಹಿತರ ಜೊತೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಅದು ಅವರ ಸ್ನೇಹಿತರ ನಡುವೆ ಹರಿದಾಡಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ” ಎಂದು ಹೇಳಲಾಗಿದೆ.

26 ಸೆಪ್ಟೆಂಬರ್, 2017ರಂದು ನ್ಯೂಸ್‌18 ಕೂಡ ವಿಡಿಯೋ ಕುರಿತು ವರದಿ ಪ್ರಕಟಿಸಿದ್ದು “ವರದಿಯಲ್ಲಿ ಯುವತಿಗೆ ಕಿರುಕುಳ ನೀಡಿ, ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಮೂವರು ಯುವಕರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶಂ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ” ಎಂದು ತಿಳಿಸಿದೆ.

“ಯುವತಿಯ ಪ್ರಿಯಕರ ಬಿ.ಸಾಯಿ (19) ತನ್ನ ಸ್ನೇಹಿತ ಕಾರ್ತಿಕ್ (22) ಜೊತೆ ಸೇರಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಾಯಿ ಯುವತಿಗೆ ಕಿರುಕುಳ ನೀಡುವಾಗ ಕಾರ್ತಿಕ್ ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಇನ್ನೋರ್ವ ಸ್ನೇಹಿತ ಪವನ್ (21) ದುಷ್ಕೃತ್ಯ ನಡೆಯುವಾಗ ಸ್ಥಳದಲ್ಲಿ ಇದ್ದ” ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 2017ರಲ್ಲಿ ನಡೆದ ಲೈಂಗಿಕ ಕಿರುಕುಳದ ವಿಡಿಯೋವೊಂದನ್ನು ಮಣಿಪುರದ ವಿಡಿಯೋ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿ ವಿಮಾನದಲ್ಲಿ ನಮಾಜ್‌ ಮಾಡಿದಕ್ಕೆ ಪ್ರತಿಯಾಗಿ ಹಿಂದೂ ಮಹಿಳೆ ಶಿವನ ಸ್ತೋತ್ರ ಹಾಡಿದ್ದಾರೆ ಎಂಬ ವೈರಲ್ ವಿಡಿಯೋದ ಅಸಲೀಯ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights