ಲೂಟಿಯ ಮಾಲನ್ನು ಹುಡುಕಲು ಹೊರಟ ಶ್ರೀಮನ್ನಾರಾಯಣನನ್ನ ಮೆಚ್ಚಿದ ಮಂದಿ..

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿರುವ ಬಹು ನಿರೀಕ್ಷಿತ “ಅವನೇ ಶ್ರೀಮನ್ನಾರಾಯಣ” ಸಿನಿಮಾ ಶುಕ್ರವಾರ ಡಿಸೆಂಬರ್ 27ರಂದು ತೆರೆ ಕಂಡಿದೆ. ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್, ಸಿನಿಮಾದ ಬಳಿಕ ಅವನೇ ಶ್ರೀಮನ್ನಾರಾಯಣ ಸಿನಿಮಾ, ನೆರೆ ರಾಜ್ಯಗಳಲ್ಲಿ ದೂಳೆಬ್ಬಿಸಲು ಸಿದ್ದವಾಗಿದೆ. ಈ ಸಿನಿಮಾ ಕನ್ನಡ, ತೆಲಗು, ತಮಿಳು, ಹಿಂದಿ, ಹಾಗೂ ಮಲಯಾಳಂ ಭಾಷೆಯಲ್ಲೂ ಮೂಡಿ ಬಂದಿದ್ದು ನಟ ರಕ್ಷಿತ್ ಶೆಟ್ಟಿ ಸಿನಿಮಾ ಕೆರಿಯರ್ ಮತ್ತಷ್ಟು ಬಿಲ್ಢ್ ಆಗುವಂತಿದೆ.

ರಾವಣನ ಸಂಹಾರದಿಂದ ಶುರುವಾಗುವ ಕಥೆಯಲ್ಲಿ, ಭಕ್ತ ಪ್ರಹ್ಲಾದ್ ಸಿನಿ ಸನ್ನಿವೇಶವೊಂದರಿಂದ ತೆರೆ ಮೇಲೆ ಶ್ರೀಮನ್ನಾರಾಯಣನ ದರ್ಶನವಾಗುತ್ತದೆ. ಶ್ರೀಮನ್ನಾರಾಯಣ(ರಕ್ಷಿತ್ ಶೆಟ್ಟಿ) ತೆರೆ ಮೇಲೆ ಕಂಡಾಕ್ಷಣ ಪ್ರೇಕ್ಷಕರಿಂದ ವಿಷಲ್, ಚಪ್ಪಾಳೆ, ಕೂಗಾಟದ ಮೂಲಕ ಆದ್ದೂರಿ ಸ್ವಾಗತ ಸಿಗುತ್ತದೆ. “ನಾಳೆ ದಿನ ಯಾರಾದರೂ ಇತಿಹಾಸ ಬರೆದರೆ ಅದರಲ್ಲಿ ಎರಡು ಭಾಗ ಇರುತ್ತದೆ. ಒಂದು ನೀವು ಅವರನ್ನು ಭೇಟಿ ಆಗುವ ಮೊದಲು. ಮತ್ತೊಂದು ನೀವು ಅವನನ್ನು ಭೇಟಿ ಆದ ನಂತರ’ ಅವನೇ ಶ್ರೀಮನ್ನಾರಾಯಣ” ಎನ್ನುವ ಡೈಲಾಗ ಹೇಳಿಸುವ ಮೂಲಕ ನಿರ್ದೇಶಕ ಸಚೀನ್ ರವಿ ಪ್ರೇಕ್ಷಕರ ಮನದಲ್ಲಿ ಶ್ರೀಮನ್ನಾರಾಯಣನ ಪಾತ್ರ ರಿಜೀಸ್ಟರ್ ಆಗುವಂತೆ ನೋಡಿಕೊಂಡಿದ್ದಾರೆ.

ಈ ಸಿನಿಮಾ ಅಮರಾವತಿ ಎಂಬ ಕಾಲ್ಪನಿಕ ಊರಿನ ಲೂಟಿಯೊಂದರ ಸುತ್ತ ಸುತ್ತುವ ಕಳ್ಳ-ಪೊಲೀಸ್ ಕಥೆಯಾಗಿದೆ. ಅಲ್ಲದೆ ಸಿನಿಮಾ ನೋಡು ನೋಡುತ್ತಾ ಪ್ರೇಕ್ಷಕನ ಕಣ್ ಮುಂದೆ ಥಟ್ಟನೆ ಹಾಲಿವುಡ್ ನ “ಪೈರೇಟ್ಸ್ ಆಫ್ ದಿ ಕೆರಿಬಿಯ”ಸಿನಿಮಾ ಹಾದು ಹೋಗುತ್ತದೆ. ಒಂದೆಡೆ ಲೂಟಿ ಹುಡುಕುವ ಮತ್ತು ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುವ ತಂಡಗಳು, ಮತ್ತೊಂದೆಡೆ ಲೂಟಿಯ ಗ್ಯಾಂಗ್ ಹಿಂದೆ ಬಿದ್ದಿರುವ ಪೊಲೀಸ್ ಇನ್ಸ್ ಪೆಕ್ಟರ್ ನಡುವೆ ಚಿತ್ರಕಥೆ ಮುಂದುವರಿಯುತ್ತದೆ. ಅಂತಿಮವಾಗಿ ಲೂಟಿ ಯಾವುದು, ಅದು ಯಾರಿಗೆ ದಕ್ಕುತ್ತದೆ, ಅದನ್ನು ಹುಡುಕಲು ನಡೆಸುವ ಪ್ರಯತ್ನ ಏನು ಎಂಬುದು ಸಿನಿ ರಸಿಕರ ಮನಸ್ಸಿಗೆ ರಸದೌತಣ ನೀಡುತ್ತದೆ. ಸಿನಿಮಾ ನೋಡಲು ಬಂದ ಸಿನಿ ರಸಿಕರನ್ನ ಹಾಸ್ಯ, ಸಾಹಸ ದೃಶ್ಯಗಳು ಕೊನೆಯ ತನಕ ಹಿಡಿದಿಡುತ್ತದೆ. ಅಷ್ಟರ ಮಟ್ಟಿಗೆ ಚಿತ್ರತಂಡದ ಶ್ರಮ ಸಾರ್ಥಕವಾಗಿದೆ.

ಲೂಟಿಯ ಕೊರಗಿನಲ್ಲಿ ಅಮರಾವತಿ ಹಾಗೂ ಅಭೀರರ ಮುಖ್ಯಸ್ಥ ಹಾಸಿಗೆ ಹಿಡಿಯುತ್ತಾನೆ. ಒಡೆಯ ಹಾಸಿಗೆ ಹಿಡಿದ ತಕ್ಷಣ, ಮಕ್ಕಳು ತಂದೆ ನಂತರ ಅಮರಾವತಿ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಲೂ ಪ್ರಯತ್ನಿಸುತ್ತಾರೆ. ಲೂಟಿಯ ಮಾಲನ್ನು ಹುಡುಕಿದವರೆ ಅಮರಾವತಿ ಸಾಮ್ರಾಜ್ಯದ ಉತ್ತಾರಾಧಿಕಾರಿಯಾಗುತ್ತಾರೆಂದು ಹೇಳಿ ಅಭೀರರ ಒಡೆಯ ಸಾಯುತ್ತಾನೆ. ಆಗ ಒಡೆಯನ ಇಬ್ಬರು ಮಕ್ಕಳಾದ ಜಯರಾಮ್ (ಬಾಲಾಜಿ ಮನೋಹರ್) ಹಾಗೂ ತುಕಾರಾಮ್ (ಪ್ರಮೋದ್ ಶೆಟ್ಟಿ) ಕಾಣೆಯಾದ ಲೂಟಿಯನ್ನು ಹುಡುಕಲು ಶುರು ಮಾಡುತ್ತಾರೆ.

ಲೂಟಿ ಹುಡುಕಲು ಶುರು ಮಾಡಿದ ಜಯರಾಮ್ ಹಾಗೂ ತುಕಾರಾಮ್ ಎಂಬ ಡಕಾಯಿತರಿಗೆ ಸಿಗುವವನೇ ಗಂಬೀರತೆಯಿಲ್ಲದ ಪೊಲೀಸ್ ಶ್ರೀಮನ್ನಾರಾಯಣ. ಹೆಸರಿಗೆ ತಕ್ಕಂತೆ ಪಕ್ಕ ನಾರಾಯಣ ಪಾತ್ರವನ್ನು ನಿಭಾಯಿಸಿದ್ದಾರೆ ರಕ್ಷಿತ್ ಶೆಟ್ಟಿ .ದೇವಲೋಕದ ನಾರಾಯಣ ಹೇಗೆ ದೇವಾನು ದೇವತೆಗಳ ಸುದ್ದಿಯನ್ನು ಹಿಡಿದು ತ್ರೀಲೋಕ ಸುತ್ತಾನೋ, ಅದೇ ರೀತಿ ಸಿನಿಮಾದ ಶ್ರೀಮನ್ನಾರಾಯಣ ಜಯರಾಮನ ಕೋಟೆಗೆ ಮತ್ತು ತುಕಾರಾಮ್ ನ ಕೋಟೆಗೆ ಸುದ್ದಿ ಹಿಡಿದು ಸುತ್ತುತ್ತಾನೆ. ಅಲ್ಲದೆ ನಾರದ ಹೇಗೆ ಸನ್ನಿವೇಶಕ್ಕೆ ತಕ್ಕಂತೆ ತನ್ನ ಜಾಣ್ಮೆ ಮೆರೆಯುತ್ತಾನೋ ಹಾಗೇಯೆ ಶ್ರೀಮನ್ನಾರಾಯಣನು ಇಕ್ಕಟಿನ ಸನ್ನಿವೇಶದಲ್ಲಿ ಜಾಣ್ಮೆ ಮೆರೆಯುತ್ತಾನೆ. ಈ ನಡುವೆ ಶ್ರೀಮನ್ನಾರಾಯಣನಿಗೆ ಸಿಗುವ ಲಕ್ಷ್ಮಿ (ಶಾನ್ವಿ ಶ್ರೀವಾಸ್ತವ್) ಇಡಿ ಕಥಗೆ ಟ್ವಿಸ್ಟ್ ಕೊಡುತ್ತಾಳೆ. ಆ ಟ್ವಿಸ್ಟ್ ಏನು? ಅಲ್ಲದೆ ಲಕ್ಷ್ಮಿ ಮತ್ತು ನಾರಾಯಣನ ಮದುವೆ ಪ್ರಸಂಗ ಏಕೆ ನಡೆಯತ್ತದೆ ಎಂದು ಸಿನಿ ರಸಿಕರು ಥಿಯೇಟರ್ ಗೆ ಹೋಗಿ ನೋಡಿದ್ರೇನೆ ಚಂದ.

ಕಳೆದು ಮೂರು ವರ್ಷದಿಂದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ತಂಡ ಶ್ರೀಮನ್ನಾರಾಯಣನನ್ನು ತೆರೆ ಮೇಲೆ ತರಲು ಶ್ರಮಪಟ್ಟಿದೆ. ಮೇಕಿಂಗ್, ಹಿನ್ನೆಲೆ ಸಂಗೀತ, ಡೈಲಾಗ್ ವಿಚಾರದಲ್ಲಿ ಸಿನಿಮಾ ರ್ಯಾಂಕ್ ಪಡೆಯುತ್ತದೆ. ರಕ್ಷಿತ್ ನಟನೆಯ ಎಲ್ಲಾ ಸಿನಿಮಾದಲ್ಲಿ ಹಾಡು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸ್ ಆಪ್ ಹಾಡು ದೇಶ ವಿದೇಶದಲ್ಲೂ ಸದ್ದು ಮಾಡಿದೆ. ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಪಿ ಪ್ರೇಕ್ಷಕನ ಮನ ತಟ್ಟಿದೆ.

ಕಥೆಯ ಅಂತಿಮ ಘಟ್ಟದವರೆಗೂ ಪೊಲೀಸ್ ಶ್ರೀಮನ್ನಾರಾಯಣ ಎಲ್ಲಿಯೂ ಸೀರಿಯಸ್ ಆಗದೆ, ನಗಿಸುತ್ತಲೇ ಮನರಂಜನೆ ನೀಡುತ್ತಾ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾನೆ. ಒಟ್ಟಿನಲ್ಲಿ ಚಿತ್ರಮಂದಿರಗಳಿಗೆ ಹೋದ ಸಿನಿ ರಸಿಕರಿಗೆ ನಷ್ಟ ಎನ್ನುವುದು ಸುಳ್ಳಿನ ಮಾತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights