ಬೆಂಗಳೂರು: ಕೇವಲ 20 ರೂ.ಗಾಗಿ ಸ್ನೇಹಿತನ ಕೊಲೆ; ಮೂವರ ಬಂಧನ

ಕೇವಲ 20ರೂ. ಹಣಕ್ಕಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ 35 ವರ್ಷದ ಸಂಜಯ್ ಎಂಬಾತನನ್ನು ಆತನ ಸ್ನೇಹಿತರೇ ಆದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ತಮಿಳುನಾಡು ಮೂಲದ ದೀಪಕ್, ಹೇಮಂತ್ ಮತ್ತು ಮಹದೇಶ ಎಂಬುವವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾಗಿರುವ ಸಂಜಯ್ ಹಾಗೂ ಆರೋಪಿಗಳೆಲ್ಲಾ ಸ್ನೇಹಿತರೇ ಆಗಿದ್ದು, ಬೆಂಗಳೂರಿನಲ್ಲಿ ಚಿಂದಿ ಆಯ್ದು ಬದುಕುತ್ತಿದ್ದರು. 20 ರೂ.ಗಳ ವಿಚಾರಕ್ಕಾಗಿ ಸೆ.13ರಂದು ಇವರ ನಡುವೆ ಜಗಳ ನಡೆದಿದ್ದು, ಸಂಜಯ್ ಎಂಬಾತನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬೊಮ್ಮನಹಳ್ಳಿ ಮುಖ್ಯರಸ್ತೆಯ ಬಾರ್ ಪಕ್ಕದ ಸಂಜಯ್‍ನ ಶವ ದೊರೆತಿತ್ತು.

ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿ ಟಿವಿ ಪುಟೇಜ್‍ಗಳನ್ನು ಪಡೆದುಕೊಂಡು ಪರಿಶೀಲಿಸಿದ್ದಾರೆ. ಈ ವೇಳೆ, ಬಾರ್‌ವೊಂದರಿಂದ ಸಂಜಯ್‌ ಮತ್ತು ಮತ್ತೊಬ್ಬ ವ್ಯಕ್ತಿ ಹೊರಬರುವ ದೃಶ್ಯ ದೊರೆತಿದ್ದು, ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ದೀಪಕ್ ಬಳಿ ಸಂಜಯ್ 20 ರೂ. ಹಣವನ್ನು ಸಾಲವಾಗಿ ಪಡೆದಿದ್ದ. ಸೆ.13ರಂದು ರಾತ್ರಿ ನಾಲ್ವುರೂ ಒಂದೆಡೆ ಕೂತು ಊಟ ಮಾಡುತ್ತಿದ್ದಾಗ ದೀಪಕ್ ಹಣ ಕೇಳಿದ್ದಾನೆ. ಈ ವೇಳೆ ಜಗಳ ಶುರುವಾಗಿದ್ದು, ಪ್ರಮುಖ ಆರೋಪಿ ದೀಪಕ್ ಮತ್ತು ಇನ್ನಿಬ್ಬರು ಸ್ನೇಹಿತರು ಸಂಜಯ್‍ನನ್ನು ಕೊಲೆ ಮಾಡಿದ್ದಾರೆ ಎಂದು ಆತ ವಿಚಾರಣೆ ವೇಳೆ ಹೇಳಿದ್ದಾನೆ. ಆತನ ಹೇಳಿಕೆ ಆಧಾರದ ಮೇಲೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವವರಿಗೆ 5,000 ರೂ ಬಹುಮಾನ: ರಾಜಸ್ಥಾನ ಸರ್ಕಾರ ಘೋಷಣೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights