ವರುಣನ ರೌದ್ರನರ್ತನಕ್ಕೆ ಈರುಳ್ಳಿ ಬೆಳೆ ನಾಶ : ರೈತರಿಗೆ ಕಣ್ಣೀರು ತರಿಸಿದ ಮಳೆರಾಯ
ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಕಳೆದೆರಡು ದಿನದಿಂದ ವರುಣಾನ ಆರ್ಭಟ ಜೋರಾಗಿದ್ದು, ಮಳೆಯ ರೌದ್ರನರ್ತನಕ್ಕೆ ಬಯಲುಸೀಮೆ ಭಾಗದ ಜನ ನಲುಕಿ ಹೋಗಿದ್ದಾರೆ. ಒಂದೆಡೆ ಬರದ ಛಾಯೆಗೆ ತುತ್ತಾಗಿದ್ದ ಜನರಿಗೆ ಮಳೆ ಖುಷಿ ತಂದ್ರೆ, ಮತ್ತೊಂದೆಡೆ ರಣಭೀಕರ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಮಳೆ ಕಣ್ಣೀರು ತರಿಸಿದೆ. ಇನ್ನು ಭಾರೀ ಮಳೆಯಿಂದ ಕೆರೆಕಟ್ಟೆ, ಹಳ್ಳಕೊಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ…
ನೀರಲ್ಲಿ ಕೊಚ್ಚಿ ಹೋಗಿರೋ ಈರುಳ್ಳಿ ಬೆಳೆ, ಮಳೆಯ ರಭಸಕ್ಕೆ ಮನೆಗೆ ನುಗ್ಗಿದ ಕೆರೆಯ ನೀರು, ಮಳೆಯ ರೌದ್ರನರ್ತನದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ವೇದಾವತಿ ನದಿ, ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕೆರೆಕಟ್ಟೆ, ಹಳ್ಳಕೊಳ್ಳಗಳು. ಹೌದು ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಹಾಗೂ ಕಡೂರು ತಾಲೂಕಿನಲ್ಲಿ. ಹೌದು ನಿನ್ನೆಯಿಂದ ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲೂಕಿನಲ್ಲಿ ಭಾರೀ ಮಳೆಯಾಗ್ತಿದ್ದು ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ರಾತ್ರಿ ಸುರಿದ ಭಾರೀ ಮಳೆಗೆ ತರೀಕೆರೆ ತಾಲೂಕಿನ ಶಿವನಿ ಕೆರೆ ತುಂಬಿ ಕೋಡಿಬಿದ್ದು ಅವಾಂತರ ಸೃಷ್ಟಿಸಿದೆ. ಕೆರೆಯ ಕೋಡಿ ನೀರು ಶಿವನಿ- ಚಿತ್ರದುರ್ಗ ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿದ್ದು ರಾತ್ರಿಯಿಂದ ಸಂಚಾರ ಸ್ಥಗಿತಕೊಂಡಿದೆ. ಇನ್ನು ಮುಗುಳಿ – ತಮ್ಮಟದಹಳ್ಳಿಯ ರಸ್ತೆ ಸಂಚಾರವು ಬಂದ್ ಆಗಿದೆ. ಇನ್ನು ಐತಿಹಾಸಿಕ ಕೆರೆಯಾದ ಬುಕ್ಕಾಂಬುದಿಯ ಬುಕ್ಕರಾಯನ ಕೆರೆಯೂ ಸಹ ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕೆರೆಯಲ್ಲಿ ಬೃಹತ್ ಸುಳಿ ನಿರ್ಮಾಣವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಭಾರೀ ಮಳೆಗೆ ಅಜ್ಜಂಪುರ, ಶಿವನಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಕೊಯ್ದು ಮಾರಟಕ್ಕೆ ಸಿದ್ದವಾಗಿದ್ದ ಸಾವಿರಾರು ಚೀಲ ಈರುಳ್ಳಿ ಕೂಡ ಜಲಾವೃತವಾಗಿದ್ದು, ಕೆಲೆವೆಡೆ ನೀರಿನಲ್ಲಿ ಈರುಳ್ಳಿ ಕೊಚ್ಚಿಹೋಗಿ ರಸ್ತೆಗೆ ಬಂದಿವೆ. ಇದ್ರಿಂದ ರೈತರು ಬೆಳೆದ ಬೆಳೆ ಕೈ ಗೆ ಸಿಗದಂತಾಗಿ ಈರುಳ್ಳಿ ಬೆಳೆಗಾರರಿಗೆ ಮಳೆರಾಯ ಕಣ್ಣೀರು ತರಸಿದ್ದಾನೆ.
ತರೀಕೆರೆ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಹತ್ತು ವರ್ಷದ ಬಳಿಕ ದುಗ್ಲಾಪುರ ಸಮೀಪದ ಜಂಬದಹಳ್ಳ ಡ್ಯಾಂ ಭರ್ತಿಯಾಗಿದೆ. ಇನ್ನು ತರೀಕೆರೆಯ ದೊಡ್ಡ ಕೆರೆ ಕೂಡ ತುಂಬಿ ಕೋಡಿಬಿದ್ದಿದ್ದು ಕೆರೆಯ ನೀರು ಮನೆಗಳಿಗೆ ನುಗ್ಗಿದೆ. ಎ.ರಂಗಾಪುರ ಗ್ರಾಮದ ಹತ್ತು ಮನೆಗಳಿಗೆ ಕೆರೆಯ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ, ಮನೆಯಲ್ಲಿದ್ದವರನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೆರೆಗಳು ಭರ್ತಿಯಾಗಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ತಾಲೂಕಿನಲ್ಲಿ ಹತ್ತಾರು ಕಡೆ ಅಡಿಕೆ, ಬಾಳೆ, ತೆಂಗಿನ ತೋಟಕ್ಕೆ ನೀರು ನುಗ್ಗಿ ತೋಟಗಳು ಜಲಾವೃತಗೊಂಡಿವೆ. ಇನ್ನು ಕಟ್ಟೆಹೊಳೆ ಹಳ್ಳ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು ಅವಾಂತರ ಸೃಷ್ಟಿಮಾಡಿದೆ. ಬಯಲು ಸೀಮೆ, ಬರಪೀಡಿತ ತಾಲೂಕು ಕಡೂರಿನಲ್ಲಿಯೂ ವರ್ಷಧಾರೆ ಅವಾಂತರ ಸೃಷ್ಟಿಸಿದೆ. ಹಲವು ವರ್ಷಗಳಿಂದ ತನ್ನ ಕುರುಹುಗಳನ್ನೇ ಕಳೆದುಕೊಂಡಿದ್ದ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ. ಕರಿಕಲ್ಲು ಹೊಳೆ ತುಂಬಿ ಹರಿಯುತ್ತಿದ್ದು ಅವಾಂತರ ಸೃಷ್ಟಿಮಾಡಿದೆ. ತಾಲೂಕಿನ ಶಂಕರಾಪುರ ಗ್ರಾಮದಲ್ಲಿ ನೂರಾರು ಎಕರೆ ರಾಗಿ ಜಲಾವೃತಗೊಂಡಿದ್ದು ರೈತರು ಕಂಗಾಲಾಗಿದ್ದಾರೆ. ನರಸೀಪುರ ಗ್ರಾಮದಲ್ಲಿ ಮನೆ, ಕೊಟ್ಟಿಗೆಗಳು ಕುಸಿತಗೊಂಡಿದ್ದು ಕೊಟ್ಟಿಗೆಯಲ್ಲಿದ್ದ ದನಕರುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಒಟ್ಟಾರೆ, ಕಳೆದ ಎರಡು ತಿಂಗಳ ಹಿಂದೆ ಮಲೆನಾಡಲ್ಲಿ ಅಬ್ಬರಿಸಿದ್ದ ಮಳೆ ಈಗ ಬಯಲು ಸೀಮೆಭಾಗಕ್ಕೆ ಕಾಲಿಟ್ಟಿದ್ದು ಒಂದೇ ದಿನದಲ್ಲಿ ಬಯಲುಸೀಮೆ ಭಾಗದ ಜನರನ್ನ ಬೆಚ್ಚಿಬೀಳಿಸಿದೆ. ಮಳೆಯ ರೌದ್ರನರ್ತನಕ್ಕೆ ರಸ್ತೆ ಸಂಪರ್ಕ ಕಳೆದುಕೊಂಡು ವಾಹನ ಸವಾರರು ಪರದಾಡುತ್ತಿದ್ರೆ, ಬೆಳೆ ಕಳೆದುಕೊಂಡವರು ಮಳೆ ನಿಲ್ಲಲ್ಲಿ ಅಂತಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ..