ವಿವಾದಾತ್ಮಕ ಮಸೂದೆ ಪ್ರಶ್ನಿಸಿ ಐಯುಎಂಎಲ್ ರಿಟ್ ಅರ್ಜಿ : ‘ಕರಾಳ ದಿನ’ ಎಂದ ಸೋನಿಯಾ ಗಾಂಧಿ

ಸಂಸತ್ತಿನಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಿಗೇ ಮೊದಲ ಕಾನೂನು ತೊಡಕನ್ನು ಎದುರಿಸುವಂತಾಗಿದೆ.
ಜೊತೆಗೆ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯು ಉಭಯ ಸದನದಲ್ಲಿಯೂ ಅಂಗೀಕಾರ ಪಡೆದುಕೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಇದೊಂದು ‘ಕರಾಳ ದಿನ’. ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರವು ಭಾರತದ ಬಹುತ್ವದ ಮೇಲೆ ಸಂಕುಚಿತ ಮನಸ್ಸಿನ ಹಾಗೂ ಧರ್ಮಾಂಧ ಶಕ್ತಿಗಳ ವಿಜಯವನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ. ಧರ್ಮ, ಪ್ರದೇಶ, ಜಾತಿ, ಮತ, ಭಾಷೆ ಅಥವಾ ಜನಾಂಗವನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿರುವ ಭಾರತವನ್ನು ಇದೀಗ ನಿರಾಕರಿಸುವಂತೆ ಮಾಡಲಾಗಿದೆ. ಎಲ್ಲಾ ಧರ್ಮಗಳಿಗೆ ಆಶ್ರಯ ನೀಡಿದ ಭಾರತವನ್ನು ಬಿಜೆಪಿ ಸರ್ಕಾರ ವಿಭಜಿಸಿದೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ವಿವಾದಾತ್ಮಕ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್)ನಿರ್ಧರಿಸಿದೆ.

ಪೌರತ್ವ ಮಸೂದೆ ಒಮ್ಮೆ ಸಂಸತ್ತಿನಲ್ಲಿ ಅಂಗೀಕಾರವಾದ ತಕ್ಷಣ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಐಯುಎಂಎಲ್ ಈ ಹಿಂದೆಯೇ ಹೇಳಿತ್ತು. ಧರ್ಮ ಆಧರಿತ ಪೌರತ್ವ ಮಸೂದೆ ಜಾರಿಗೆ ತರುವ ಮೂಲಕ ಈ ಶಾಸನವು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ನೀಡಲಿದೆ. ಪೌರತ್ವ ಮಸೂದೆಯು ಬುಧವಾರ ರಾಜ್ಯಸಭೆಯಲ್ಲೂ 125-105 ಮತಗಳಿಂದ ಅಂಗೀಕಾರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights