ವಿಶ್ವ ಬೈಸಿಕಲ್ ದಿನದಂದೇ ಅಟ್ಲಾಸ್ ಸೈಕಲ್ಸ್ ಘಟಕ ಕ್ಲೋಸ್ : 1000 ಉದ್ಯೋಗಿಗಳು ಮನೆಗೆ

ವಿಶ್ವ ಬೈಸಿಕಲ್ ದಿನದಂದೇ ಭಾರತದ ಪ್ರಸಿದ್ಧ ಸೈಕಲ್ ತಯಾರಕ ಕಂಪನಿ ಅಟ್ಲಾಸ್ ಸೈಕಲ್ಸ್ ನ ಒಂದು ಉತ್ಪಾದನಾ ಘಟಕ ಮುಚ್ಚಿದ್ದು, 1000 ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ವಜಾಗೊಳಿಸುವುದಾಗಿ ಘೋಷಿಸಿದೆ.

ಅಟ್ಲಾಸ್ ಸೈಕಲ್ಸ್ ಘಜಿಯಾಬಾದ್‌ನ ಸಾಹಿಬಾಬಾದ್‌ನಲ್ಲಿ ತನ್ನ ಉತ್ಪಾದನಾ ಘಟಕವನ್ನು ಬುಧವಾರ ಸ್ಥಗಿತಗೊಳಿಸಿ ಸುಮಾರು 1000 ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ವಜಾಗೊಳಿಸುವುದಾಗಿ ಘೋಷಿಸಿದೆ. ವಿಪರ್ಯಾಸವೆಂದರೆ, ವಿಶ್ವ ಸೈಕಲ್ ದಿನದಂದು ಈ ನಿರ್ಧಾರವು ತೆಗೆದುಕೊಂಡಿದೆ. ಕಂಪನಿಯು ಭಾರಿ ‘ಆರ್ಥಿಕ ಬಿಕ್ಕಟ್ಟಿನ’ ಹಂತದಲ್ಲಿದ್ದು, ಇದರಿಂದಾಗಿ ಸೈಕಲ್‌ಗಳ ಉತ್ಪಾದನೆಗೆ ಕಚ್ಚಾ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಹಿಬಾಬಾದ್ ಸ್ಥಾವರವನ್ನು ಮುಚ್ಚುವ ಆದೇಶ ಬುಧವಾರ ಸಂಜೆ ಬಂದಿದ್ದು, ಉದ್ಯೋಗಿಗಳನ್ನು ವಜಾಗೊಳಿಸಿದ ನೋಟೀಸ್ ಅನ್ನು ಉತ್ಪಾದನಾ ಘಟಕದ ಮುಖ್ಯ ದ್ವಾರದಲ್ಲಿ ಅಂಟಿಸಲಾಗಿದೆ. ಕಾರ್ಮಿಕರು ಕಚೇರಿಯನ್ನು ತಲುಪಿದಾಗ, ಇದನ್ನು ತಿಳಿದು ಆಘಾತಕ್ಕೊಳಗಾಗಿದ್ದಾರೆ. ಕಂಪನಿಯ ದಿಢೀರ್ ನಿರ್ಧಾರಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಅವರಲ್ಲಿ ಕೆಲವರು ಕಂಪನಿಯ ಉತ್ಪಾದನೆ ಉತ್ತಮವಾಗಿದೆ ಎಂದರೆ ಇನ್ನೂ ಕೆಲವರು ವಜಾಗೊಳಿಸುವ ಬಗ್ಗೆ ಅವರಿಗೆ ಮೊದಲೇ ತಿಳಿಸಬೇಕಾಗಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

“ಕಂಪನಿಯ ಸಾಹಿಬಾಬಾದ್ ಘಟಕ ಹಣಕಾಸಿನ ತೊಂದರೆಯಿಂದಾಗಿ ಉತ್ಪಾದನಾ ಕಾರ್ಯಾಚರಣೆಯನ್ನು ಪುನರಾರಂಭಿಸುವ ಸ್ಥಿತಿಯಲ್ಲಿಲ್ಲ. ಆದ್ದರಿಂದ, ಕಂಪನಿಯ ಸಾಹಿಬಾಬಾದ್ ಘಟಕದ ಉದ್ಯೋಗಿಗಳನ್ನು 2020 ರ ಜೂನ್ 3 ರಿಂದ ವಜಾಗೊಳಿಸುವುದಾಗಿ ಘೋಷಿಸಿದೆ ”ಎಂದು ಕಂಪನಿಯು ಅಧಿಕೃತ ಪತ್ರದಲ್ಲಿ ತಿಳಿಸಿದೆ.

“ಕಂಪನಿ ಮುಚ್ಚುವ ಬಗ್ಗೆ ಸುಳಿವು ನೀಡಿರಲಿಲ್ಲ. ಸೋಮವಾರ ಮತ್ತು ಮಂಗಳವಾರ ನಾವು ಕೆಲಸ ಮಾಡಿದ್ದೇವೆ. ಅವರು ನಮ್ಮನ್ನು ಮನೆಯಲ್ಲಿ ಕುಳಿತುಕೊಳ್ಳಲು ಹೇಗೆ ಕೇಳಬಹುದು? ಈ ನಿರ್ಧಾರದ ವಿರುದ್ಧ ನಾವು ಧ್ವನಿ ಎತ್ತುತ್ತೇವೆ” ಎಂದು ಕಾರ್ಮಿಕರು ಕಂಪನಿ ವಿರುದ್ಧ ಸಿಡಿದೆದ್ದಿದ್ದಾರೆ. “ನಮ್ಮ ಪರಿಸ್ಥಿತಿ ಈಗಾಗಲೇ ಉತ್ತಮವಾಗಿಲ್ಲ ಹೀಗಾಗಿ ಕೆಲಸವೂ ಕಳೆದುಕೊಂಡರೆ ನಮ್ಮ ಜೀವನ ಬೀದಿಗೆ ಬರುತ್ತದೆ ”ಎಂದು ಅಳಲು ತೋಡಿಕೊಂಡಿದ್ದಾರೆ.

ಅಟ್ಲಾಸ್ ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಈಗ ಉತ್ಪಾದನ ಘಟಕವನ್ನು ಮುಚ್ಚಿರುವುದು ಅಲ್ಲಿನ ಉದ್ಯೋಗಿಗಳಿಗೆ ಭೀತಿಯನ್ನುಂಟು ಮಾಡಿದೆ.

Spread the love

Leave a Reply

Your email address will not be published. Required fields are marked *