ವಿಶ್ವ ಪರಿಸರ ದಿನ ವಿಶೇಷ: ಅಭಿವೃದ್ಧಿಯನ್ನು ಜನಾಂದೋಲನವಾಗಿಸುವ ಪರಿ

2014ರ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ಪ್ರಮುಖವಾಗಿತ್ತು. ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಭಾಷಣದಲ್ಲೇ ಅಭಿವೃದ್ಧಿಯನ್ನು ಜನಾಂದೋಲನವಾಗಿ ಮುಂದುವರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಬಲದಿಂದ ಇದನ್ನು ಆಗುಮಾಡಲಾಗುತ್ತದೆ ಎಂದರು. ಆದರೆ, ನಾವು ಈ ಬಲಗಳನ್ನು ಆಧರಿಸಿ, ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿಸುವ ದಿಕ್ಕಿನಲ್ಲಿ ನಡೆಯುತ್ತಿದ್ದೇವೆಯೇ?

ಮಾಹಿತಿಯ ಲಭ್ಯತೆಯು ಪ್ರಜಾಪ್ರಭುತ್ವದ ಹೃದಯ. ಆದರೆ, ಮಾಹಿತಿ ಹಕ್ಕು ಕಾಯ್ದೆ ಇದ್ದರೂ, ಜನರನ್ನು ನಿರಂತರವಾಗಿ ಹಾದಿ ತಪ್ಪಿಸಲಾಗುತ್ತಿದೆ. ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚು ಇರುವ ಹಿನ್ನೆಲೆಯಲ್ಲಿ ಅವರನ್ನು ಸೂಕ್ತವಾಗಿ ಪೋಷಿಸಬೇಕು. ಆದರೆ, ವಾಸ್ತವ ಏನಿದೆ? ಸರ್ಕಾರ ಅಂಕಿ ಅಂಶಗಳ ಪ್ರಕಾರ, 1993ರಲ್ಲಿ ಅಪೌಷ್ಟಿಕತೆಯಿಂದ ಬಳಲುವ ಶಾಲೆ ಮಕ್ಕಳ ಪ್ರಮಾಣ ಶೇ.28 ಇತ್ತು. ಇದು 1999ರಲ್ಲಿ ಶೇ.17 ಹಾಗೂ 2006ರಲ್ಲಿ ಶೇ. 6 ಕ್ಕೆ ಕುಸಿಯಿತು. ಆದರೆ, ಈ ಸಂಖ್ಯೆಗಳು ಶಾಲೆಗಳು ನೀಡಿದ ಮಾಹಿತಿಯನ್ನು ಆಧರಿಸಿವೆ. ಈ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳ ದಾಖಲು ಹಾಗೂ ಬಿಸಿಯೂಟದ ಖರ್ಚು ಕುರಿತು ವಾಸ್ತವದ ಲೆಕ್ಕ ಇರಿಸಿಲ್ಲ. ಇದನ್ನು ಪರಿಶೀಲಿಸಲು ನಾವು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆ (ಎನ್‌ಎಫ್‌ಎಚ್‌ಎಸ್) ಯ ಅಂಕಿ ಸಂಖ್ಯೆಯನ್ನು ತಾಳ ಹಾಕಬೇಕಾಗುತ್ತದೆ. ಎನ್‌ಎಫ್‌ಎಚ್‌ಎಸ್ ಪ್ರಕಾರ, 1993ರಲ್ಲಿ ಶೇ. 53ರಷ್ಟು ಶಾಲಾ ಮಕ್ಕಳು ಪೋಷಕಾಂಶ ಕೊರತೆಯಿಂದ ಸೊರಗಿದ್ದವು. 1991ಕ್ಕೆ ಇದು ಶೇ.47 ಹಾಗೂ 2006ಕ್ಕೆ ಶೇ.46 ಆಯಿತು.

ಉದ್ಯೋಗ ಹೆಚ್ಚಳಕ್ಕೆ ಬರೋಣ

ಕೈಗಾರಿಕೆಗಳು ಮತ್ತು ಸೇವಾಕ್ಷೇತ್ರದ ಉದ್ಯೋಗಿಗಳಂತೆ ದೇಶದ ಎಲ್ಲರೂ ಖರೀದಿಸುವಂತೆ ಆಗಬೇಕೆಂದಿದ್ದರೆ, ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಆದರೆ, ಪೌಷ್ಟಿಕಾಂಶ ಕೊರತೆ ಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪರಿಗಣಿಸಿದರೆ, ಹೆಚ್ಚು ಮಂದಿ ಬಡವರು. ಶೇ.10ರಷ್ಟು ಮಂದಿ ಮಾತ್ರ ಸಂಘಟಿತ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಆರ್ಥಿಕ ಬೆಳವಣಿಗೆಯು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ನಮ್ಮನ್ನು ನಂಬಿಸಲಾಗಿದೆ. ಆರ್ಥಿಕ ಬೆಳವಣಿಗೆ ದರ ಶೇ 3 ಇದ್ದಾಗ, ಸಂಘಟಿತ ಕ್ಷೇತ್ರದಲ್ಲಿ ಉದ್ಯೋಗ ಬೆಳವಣಿಗೆ ವಾರ್ಷಿಕ ದರ ಶೇ.2 ಇತ್ತು. ಆದರೆ, ಈಗ ಬೆಳವಣಿಗೆ ದರ ಶೇ. 1 ಆಗಿದೆ. ಆಟೋಮೇಷನ್ ಸೇರಿದಂತೆ ತಾಂತ್ರಿಕ ಬೆಳವಣಿಗೆಗಳು ಇದಕ್ಕೆ ಕಾರಣ. ಇದೇ ಹೊತ್ತಿಗೆ ನೀರು, ಭೂಮಿ, ಅರಣ್ಯ ಮತ್ತು ಖನಿಜ ಸಂಪನ್ಮೂಲದ ಮೇಲೆ ಸಂಘಟಿತ ಕ್ಷೇತ್ರದ ಒತ್ತಡ ಹೆಚ್ಚಳದಿಂದ, ಕೃಷಿ, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಕ್ಷೇತ್ರದಲ್ಲಿ ಉದ್ಯೋಗಗಳು ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಈ ಕ್ಷೇತ್ರಗಳಿಂದ ಹೊರದೂಡಲ್ಪಟ್ಟವರು ನಗರಗಳಿಮೆ ಮುತ್ತಿಗೆ ಹಾಕಿದ್ದು, ಇದರಿಂದ ಉದ್ಯಮಗಳು ಹಾಗೂ ಸೇವಾ ಕ್ಷೇತ್ರದಲ್ಲಿ ಉತ್ಪಾದಕತೆ ಕುಸಿದಿದೆ. ಅಭಿವೃದ್ಧಿ ಜಹಾಜು ಗೊತ್ತುಗುರಿಯಿಲ್ಲದೆ ಚಲಿಸುತ್ತಿದೆ.

ಅಭಿವೃದ್ಧಿ ಎಂದರೇನು?

ಸಂದೇಹವೇ ಬೇಡ, ಜನರಿಗೆ ಅಭಿವೃದ್ಧಿ ಬೇಕು. ಆದರೆ, ಅಭಿವೃದ್ಧಿ ಎಂದರೇನು? ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ ಲಿಟ್ಜ್ ಪ್ರಕಾರ, ಅಭಿವೃದ್ಧಿ ದೇಶದ ನಾಲ್ಕು ವಿಧದ ಬಂಡವಾಳಗಳನ್ನು ಹೆಚ್ಚಿಸಬೇಕು; ವಸ್ತು ನಿರ್ಮಿತ ಸರಕುಗಳ ಬಂಡವಾಳ, ಸ್ವಾಭಾವಿಕ ಬಂಡವಾಳಗಳಾದ ನೆಲ, ನೀರು, ಕಾಡುಗಳು ಮತ್ತು ಮೀನು ಇತ್ಯಾದಿ, ಮಾನವ ಬಂಡವಾಳ(ಆರೋಗ್ಯ ಶಿಕ್ಷಣ ಮತ್ತು ಉದ್ಯೋಗ) ಮತ್ತು ಪರಸ್ಪರ ನಂಬಿಕೆ ಹಾಗೂ ಸಾಮಾಜಿಕ ಸೌಹಾರ್ದವನ್ನು ಒಳಗೊಂಡ ಸಾಮಾಜಿಕ ಬಂಡವಾಳ. ಪ್ರಸ್ತುತ ಆರ್ಥಿಕ ಬೆಳವಣಿಗೆಯು ಈ ಬಂಡವಾಳಗಳ ಸಮತೋಲನದ ಹೆಚ್ಚಳಕ್ಕೆ ಕಾರಣವಾಗಿಲ್ಲ. ಉದಾಹರಣೆಗೆ, ಗೋವಾದಲ್ಲಿ ಗಣಿಗಾರಿಕೆಯು ಜಲಸಂಪನ್ಮೂಲವನ್ನು ಹಾಳುಗೆಡವಿದ್ದು, ತೀವ್ರ ಜಲ-ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಜಲಾಶಯಗಳ ನೀರಿನಲ್ಲಿ ಲೋಹದ ಅಂಶ ಹೆಚ್ಚಳದಿಂದ ಆರೋಗ್ಯದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಸಾವಿರಾರು ಟ್ರಕ್ ಗಳ ನಿರಂತರ ಸಂಚಾರದಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಅಪಘಾತಗಳು ಹೆಚ್ಚಾಗಿದೆ. ಏಕ ದೃಷ್ಟಿ ಕೈಗಾರಿಕಾ ಅಭಿವೃದ್ಧಿಯು ಸುಸ್ಥಿರ, ಸೌಹಾರ್ದದ ಪ್ರಗತಿಗೆ ದಾರಿಮಾಡಿಕೊಡಲಿಲ್ಲ. ಬದಲಿಗೆ, ಹಣ ಕೇಂದ್ರಿತ ಹಿಂಸಾತ್ಮಕ ಆರ್ಥಿಕತೆಯನ್ನು ಬೆಳೆಸಿತು.

ನಿಜ. ನಾವು ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಗಳು, ಹಾಗೂ ಸೇವೆಗಳನ್ನು ಅಭಿವೃದ್ಧಿಪಡಿಸಬೇಕು. ಆದರೆ, ಇವು ಭಾರಿ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಾರವು ಎನ್ನುವುದು ನಿಮಗೆ ಗೊತ್ತಿರಬೇಕು. ಆದ್ದರಿಂದ, ಈ ಕ್ಷೇತ್ರಗಳು ಕಾರ್ಮಿಕರ ಶ್ರಮದ ಅಗತ್ಯವಿರುವ, ಸ್ವಾಭಾವಿಕ ಸಂಪನ್ಮೂಲವನ್ನು ಆಧರಿಸಿದ ವೃತ್ತಿಗಳು ಹಾಗೂ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಹೆಚ್ಚು ಬಂಡವಾಳ ಅಗತ್ಯವಿರುವ, ತಂತ್ರಜ್ಞಾನಾಧರಿತ ಆರ್ಥಿಕ ವಿಭಾಗಗಳು ಪ್ರಕೃತಿಯನ್ನು ಆಧರಿಸಿದ, ಕಾರ್ಮಿಕ ಶ್ರಮದ ಅಗತ್ಯವಿರುವ ವಿಭಾಗದೊಂದಿಗೆ ಸಹಜೀವನ ಸಂಬಂಧ ಹೊಂದಿರಬೇಕು. ಸಂವಿಧಾನದ 73 ಮತ್ತು 74ನೇ ತಿದ್ದುಪಡಿ, ಜೈವಿಕ ವೈವಿಧ್ಯ ಕಾಯ್ದೆ, ಪಂಚಾಯಿತಿ(ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ ಮತ್ತು ಅರಣ್ಯ ಹಕ್ಕುಗಳ ಕಾಯ್ದೆ ಮೂಲಕ ಸಂವಿಧಾನವು ಅಂತಹ ಪರಸ್ಪರ ಸಂಬಂಧಕ್ಕೆ ಅನುವು ಮಾಡಿಕೊಟ್ಟಿದೆ. ವಿಕೇಂದ್ರೀಕೃತ ಆಡಳಿತಕ್ಕೆ ಒತ್ತಾಸೆ ನೀಡುವ ಸಂವಿಧಾನದ ಈ ಚೌಕಟ್ಟನ್ನು ಬಳಸಿಕೊಂಡು, ಪ್ರಕೃತಿ ಮತ್ತು ಜನರೊಟ್ಟಿಗೆ ಕೆಲಸ ಮಾಡಿ, ನಿಜವಾದ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಇಂಥ ಪಥವು ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿ ಮಾಡಲಿದೆ.

ಕೆಲವು ಉದಾಹರಣೆಗಳು

ಅಭಿವೃದ್ಧಿಯನ್ನು ಜನಾಂದೋಲನ ಆಗುವುದು ಹೇಗೆ ಎಂಬ ಭರವಸೆಯ ಕಿಡಿಗಳನ್ನು ಮಹಾರಾಷ್ಟ್ರ ನಕ್ಸಲ್ ಪೀಡಿತ ಚಂದ್ರಾಪುರ ಮತ್ತು ಗಡ್ಚಿರೋಲಿ ಜಿಲ್ಲೆಯಲ್ಲಿ ಕಾಣಬಹುದು. ಈ ಜಿಲ್ಲೆಗಳ ಆದಿವಾಸಿ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿ ಸಮುದಾಯಗಳು, ಅರಣ್ಯ ಹಕ್ಕುಗಳ ಕಾಯ್ದೆಯಡಿ ಕಾಡಿನ ನಿರ್ವಹಣೆಯ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಈ ಸಂಪನ್ಮೂಲದ ಮೇಲೆ ರಾಜ್ಯದ ಮಾಲೀಕತ್ವದ ಹಕ್ಕು ಎಂದಿನಂತೆ ಇರಲಿದೆ. ಪಂಚಗಾಂವ್‌ನ ಜನರು ಎರಡು ದಿನ ಗ್ರಾಮಸಭೆಯನ್ನು ನಡೆಸಿ, ನಲವತ್ತು ಶರತ್ತುಗಳನ್ನು ರೂಪಿಸಿದರು.

ತೆಂಡು ಎಲೆಗಳು ಪ್ರಮುಖ ಅರಣ್ಯ ಉತ್ಪನ್ನವಾಗಿದ್ದು, ಎಲೆಗಳನ್ನು ಈ ಮೊದಲು ಕೊಂಬೆಗಳನ್ನು ಕಟಾವು ಮಾಡಿ ಮತ್ತು ಬೆಂಕಿ ಹೊತ್ತಿಸಿ ಸಂಗ್ರಹಿಸಲಾಗುತ್ತಿತ್ತು. ಇದನ್ನು ತಡೆಯಲು ತೆಂಡು ಕಟಾವನ್ನು ನಿಬಂ೯ಧಿಸಿ, ಖಾದ್ಯ ಎಲೆಗಳ ಸಂಗ್ರಹಕ್ಕೆ ಆದ್ಯತೆ ನೀಡಲಾಯಿತು. ಇದರಿಂದ ತೆಂಡು ಮರಗಳು ಸಮೃದ್ಧವಾಗಿ ಎಲೆಗಳನ್ನು ಬಿಟ್ಟು, ಅವುಗಳ ಮಾರಾಟದಿಂದ ಮೊದಲಿಗಿಂತ ಹೆಚ್ಚು ಆದಾಯ ಬಂದಿತು. ಬಿದಿರಿನ ಮಾರಾಟದಿಂದಲೂ ಹಣ ಬಂತು. ಮೊದಲ ಬಾರಿಗೆ ಜನರು ಸಂಕಷ್ಟದ ಬದುಕಿನಿಂದ ಹೊರಬಂದರು. ಇಲ್ಲಿ ಗಮನಾರ್ಹವಾದುದು ಏನೆಂದರೆ, ಕಾಡಿನ ಸ್ವಲ್ಪ ಭಾಗವನ್ನು ಕಾಯ್ದಿಟ್ಟು ಪವಿತ್ರ ವನವೊಂದನ್ನು ಬೆಳೆಸಿದರು. ಅರಣ್ಯ ಸಂಪನ್ಮೂಲಗಳ ಸಾಮೂಹಿಕ ನಿಯಂತ್ರಣದ ಇಂಥ ಪ್ರಯತ್ನಗಳು ಮಾತ್ರವೇ ಹಿಂಸಾವಾದವನ್ನು ತಡೆಯಬಲ್ಲವು. ಅಭಿವೃದ್ಧಿಯನ್ನು ಜನರ ಆಂದೋಲನವಾಗಿಸುವುದು ಸರ್ಕಾರದ ಉದ್ದೇಶವಾದಲ್ಲಿ, ಇಂಥ ಪ್ರಯತ್ನಗಳಿಗೆ ಬೆಂಬಲ ನೀಡಬೇಕಿದೆ.

ಗೋವಾದ ಸಂಗೆಂ ತಾಲೂಕಿನ ವೆರ್ಲೆ, ಸಹ್ಯಾದ್ರಿ ಬೆಟ್ಟ ಸಾಲಿನ ಮೇಲಿನ ಗ್ರಾಮ. ಈ ಸುಂದರ ಗ್ರಾಮದಲ್ಲಿ ಸ್ಥಳೀಯರು ಸಹಕಾರ ಪ್ರವಾಸಿ ಯೋಜನೆಯೊಂದನ್ನು ಆರಂಭಿಸಿದರು. ಗ್ರಾಮದ ಎಲ್ಲ ಮನೆಗಳಲ್ಲೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ, ಪ್ರವಾಸಿಗರು ವಾಸ್ತವ್ಯ ಹೂಡಲು ಅನುವು ಮಾಡಿಕೊಡಲಾಯಿತು. ತರಬೇತಿ ಪಡೆದ ಗ್ರಾಮದ ಮೂವರು ಯುವಕರು ಮಾರ್ಗದರ್ಶಿಗಳ ಪಾತ್ರನಿರ್ವಹಿಸಿತ್ತಾರೆ. ಸ್ವಾಭಾವಿಕ ಸಂಪನ್ಮೂಲವನ್ನು ಉಳಿಸಿಕೊಂಡೇ, ಜನರನ್ನು ಆರ್ಥಿಕವಾಗಿ ಬಲಗೊಳಿಸುವ ಪ್ರಯತ್ನವಿದು.

ಇತ್ತೀಚೆಗೆ ನಾನು ಗೋವಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ತಮ್ಮ ಆಸಕ್ತಿ ವಿಷಯದ ಬಗ್ಗೆ ಪ್ರಬಂಧವನ್ನು ರಚಿಸಲು ಹೇಳಿದೆ. ಬಹುತೇಕರು ಪ್ರವಾಸ ವಿಷಯವನ್ನು ಆಯ್ದುಕೊಂಡರು. ಹೋಟೆಲ್ ಉದ್ಯಮದ ನಕಾರಾತ್ಮಕ ಪರಿಣಾಮಗಳು ಅವರನ್ನು ಕಂಗೆಡಿಸಿದ್ದವು. ಅಂತರ್ಜಲ ಬರಿದಾಗುವಿಕೆ ಮತ್ತು ಮಾಲಿನ್ಯ, ವಿಲೇವಾರಿ ಆಗದ ಘನ ತ್ಯಾಜ್ಯದ ಗುಡ್ಡೆಗಳು, ಸಮುದ್ರ ತೀರದ ಒತ್ತುವರಿ, ಮಾದಕ ದ್ರವ್ಯಗಳ ಬಳಕೆ, ಅಪರಾಧಗಳು ಹೆಚ್ಚಳ ಮತ್ತು ಮಹಿಳೆಯರನ್ನು ಕಾಡುವ ಅಭದ್ರತೆ ಅವರನ್ನು ಆತಂಕಕ್ಕೆ ದೂಡಿತ್ತು. ಪ್ರವಾಸೋದ್ಯಮದಿಂದ ಗೋವನ್ನರಿಗೆ ಹೆಚ್ಚೇನೂ ಲಾಭ ಆಗಿರಲಿಲ್ಲ. ಹೀಗಿರುವಾಗ, ವೆರ್ಲೆಯಂಥ ಪರಿಸರಸ್ನೇಹಿ ಉಪಕ್ರಮಗಳನ್ನು ಏಕೆ ಆರಂಭಿಸಬಾರದು? ಇಂಥ ಪ್ರಯತ್ನಗಳನ್ನು ಸರ್ಕಾರ ಬೆಂಬಲಿಸಬಾರದೇಕೆ?

ಇಷ್ಟಲ್ಲದೆ, ಗೋವಾ ಕ್ಯೂಪೆಮ್ ತಾಲೂಕಿನ ಕೌರಂ ಗ್ರಾಮದ ಮೂಲನಿವಾಸಿಗಳು ಸರ್ಕಾರಕ್ಕೆ ಪ್ರಸ್ತಾವವೊಂದನ್ನು ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಪವಿತ್ರ ವನವೊಂದು ಇದ್ದು, ಅದನ್ನು ಅಕ್ರಮ ಗಣಿ ಒತ್ತುವರಿ ಮಾಡಿದೆ. ಗಣಿಗಾರಿಕೆಯಿಂದ ಜಲ ಸಂಪನ್ಮೂಲ ಧಕ್ಕೆಗೀಡಾಗಿದ್ದು, ಕೃಷಿಗೆ ಹಿನ್ನಡಯಾಗಿದೆ. ಪವಿತ್ರ ವನವನ್ನು ಸಮುದಾಯ ಅರಣ್ಯ ಎಂದು ಗ್ರಾಮಸ್ಥರ ಸುಪರ್ದಿಗೆ ನೀಡಬಹುದಿತ್ತು. ಆಕ್ರಮಗಳ ಹಿನ್ನಲೆಯಲ್ಲಿ ಗಣಿಯನ್ನು ಮುಚ್ಚಿದ್ದು, ಒಂದೊಮ್ಮೆ ಪುನರಾರಂಭಿಸುವುದಾದಲ್ಲಿ ಗ್ರಾಮದ ಬಹುಪಯೋಗಿ ಸಂಘದ ಮೂಲಕ ಮಾಡಬೇಕು ಎಂದು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅರವತ್ತು ವರ್ಷಗಳ ಹಿಂದೆ ದೇಶದ ಮೊದಲ ಸಕ್ಕರೆ ಕಾರ್ಖಾನೆ ಮಹಾರಾಷ್ಟ್ರದ ಪ್ರವರನಗರದಲ್ಲಿ ಆರಂಭಗೊಂಡಾಗ, ರೈತರು ಕಾರ್ಖಾನೆಯನ್ನು ನಿರ್ವಹಿಸಬಲ್ಲರೇ ಎಂದು ಸಂಶಯ ವ್ಯಕ್ತವಾಗಿತ್ತು. ಆದರೆ, ರೈತ ಮುಖಂಡ ವಿಠ್ಠಲರಾವ್ ವಿಖೆ ಪಾಟೀಲ್ ಮತ್ತು ವಿತ್ತ ಸಚಿವ ವೈಕುಂಠ ಭ್ಯಾ ಮೆಹ್ತಾರ ನೆರವಿನಿಂದ ಈ ಪ್ರಯತ್ನ ಯಶಸ್ಸು ಸಾಧಿಸಿತು. ಗೋವಾ ಸರ್ಕಾರ ಕೌರೆಂ ಗ್ರಾಮ ಪಂಚಾಯಿತಿಗೆ ಅನುಮತಿ ನೀಡಿ, ಗಣಿಗಾರಿಕೆಯನ್ನು ಜನರ ಚಟುವಟಿಕೆಯನ್ನಾಗಿಸಬೇಕಿದೆ.

ನಂತರದ ಘಟನೆಗಳ ವಿವರ

2008-12 ರ ಅವಧಿಯಲ್ಲಿ ಅನಿಯಂತ್ರಿತ ಗಣಿಗಾರಿಕೆಯಿಂದ ಕೌರೆಂ ಗ್ರಾಮಸ್ಥರು ಅನುಭವಿಸಿದ ಸಂಕಷ್ಟ ಒಂದೆರಡಲ್ಲ. ನಿರಂತರ ಪ್ರತಿಭಟನೆಯ ನಡುವೆಯೂ ಗಣಿಗಾರಿಕೆ ಮತ್ತು ಸಾಗಣೆ ನಡೆದಿತ್ತು. ಗ್ರಾಮಸ್ಥರು ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಹಕ್ಕಿಗಾಗಿ ಒತ್ತಾಯಿಸಿದರಲ್ಲದೆ, ಸಾಧನಾ ಬಹುಪಯೋಗಿ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರು. ತಮಗೇ ಸಾಗಣೆ ಗುತ್ತಿಗೆ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ನೋಂದಣಿಗಾಗಿ ಅವರು 34 ತಿಂಗಳು ಅಲೆಯಬೇಕಾಯಿತು!

ಸರ್ಕಾರ ಹತ್ತೊಂಬತ್ತು ತಿಂಗಳ ಬಳಿಕ 2014ರ ಕೊನೆಯ ಭಾಗದಲ್ಲಿ ಗಣಿಗಾರಿಕೆ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಿತು. ಮಾರ್ಚ್ 2016 ರಂದು ಕೌರೆಂ ಆದಿವಾಸಿ ಮುಕ್ತಿ ಸಂಗ್ರಾಮದ ಐವರು ಯುವ ಮುಖಂಡರು ಜನರನ್ನು ಒಗ್ಗೂಡಿಸಿ, ಗಣಿಗಾರಿಕೆ ಲಾರಿಗಳನ್ನು ತಡೆಗಟ್ಟಿದರು. ಆನ್‌ಲೈನ್‌ನಲ್ಲಿ 73,000 ಟನ್ ಖನಿಜದ ಗುತ್ತಿಗೆ ಪಡೆದಿದ್ದ ವ್ಯಕ್ತಿ, ಪಕ್ಕದ ಗ್ರಾಮದ ಸಾರಿಗೆ ಗುತ್ತಿಗೆದಾರನ ನೆರವಿನಿಂದ ಖನಿಜವನ್ನು ಸಾಗಿಸುತ್ತಿದ್ದ. ಸ್ಥಳೀಯ ಶಾಸಕನ ಬೆಂಬಲ ಗಣಿಗಾರಿಕೆ ಕಂಪನಿಗಿತ್ತು. ಮಾರ್ಚ್ 23, 2016 ರಂದು ಆಂದೋಲನದ ಮುಖಂಡ ರವೀಂದ್ರ ವೆಲಿಪ್ ಮೇಲೆ ನ್ಯಾಯಾಂಗ ಬಂಧನದಲ್ಲಿರುವಾಗಲೇ ಹಲ್ಲೆ ನಡೆಯಿತು.

ಉತ್ತರ ಗೋವಾ ಜಿಲ್ಲೆಯ ಸೊನ್ಷಿ ಮತ್ತು ದಕ್ಷಿಣ ಜಿಲ್ಲೆಯ ಕೌರೆಂ, ಈ ಕದನದಲ್ಲಿ ಒಟ್ಟಾಗಿವೆ. ಸಾಧನಾ ಸಹಕಾರ ಸಂಘಕ್ಕೆ ಗಣಿಗಾರಿಕೆ ಅನುಮತಿ ನೀಡಬೇಕೆಂದು ಗಣಿ ಮತ್ತು ಭೂಗರ್ಭ ಶಾಸ್ತ್ರ ನಿರ್ದೇಶನಾಲಯಕ್ಕೆ ಜೂನ್ 2017 ರಲ್ಲಿ ಅರ್ಜಿ ಸಲ್ಲಿಸಲಾಗಿದೆ. “ಆದಿವಾಸಿಗಳ ಜಮೀನನ್ನು ಗಣಿ ಕಂಪನಿ ಒತ್ತುವರಿ ಮಾಡಿಕೊಂಡು, ಲಾಭ ಗಳಿಸುತ್ತಿದೆ. ಗಣಿಗಾರಿಕೆ ಗುತ್ತಿಗೆಯನ್ನು ಸಹಕಾರ ಸಂಘಕ್ಕೆ ನೀಡಬೇಕು. ಇದು ಆಗುವವರೆಗೆ ಗಣಿಗಾರಿಕೆಯ ವೀಕ್ಷಣೆಗೆ ಗ್ರಾಮಸ್ಥರಿಗೆ ಅವಕಾಶ ನೀಡಬೇಕು. ಸ್ಥಳೀಯರನ್ನು ಒಳಗೊಂಡ ಸಹಕಾರ ಸಂಘಗಳಿಂದ ಮಾತ್ರ ಸುಸ್ಥಿರ, ನ್ಯಾಯಸಮ್ಮತ ಹಾಗೂ ಸಮತೆಯ ಗಣಿಗಾರಿಕೆ ಸಾಧ್ಯ” ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

 

(ಕೃಪೆ)  ಋತ ಮಾಸಿಕ

  • ಮಾಧವ್ ಗಾಡ್ಗಿಲ್, ಪರಿಸರವಾದಿ, ಬರಹಗಾರ ಮತ್ತು ಸೆಂಟರ್ ಫಾರ್ ಎಕಲಾಜಿಕಲ್ ಸೈನ್ಸಸ್ ನ ಸಂಸ್ಥಾಪಕರು. ಭಾರತದ ಹಲವು ಪರಿಸರ ಚಳುವಳಿಗಳ ನೇತೃತ್ವ ವಹಿಸಿರುವ ಇವರು ಪದ್ಮಭೂಷಣ ಪುರಸ್ಕೃತರು
  • (ಸಂಗ್ರಹಾನುವಾದ) ಮಾಧವ್ ಐತಾಳ್, ಪತ್ರಕರ್ತ ಮತ್ತು ಹಲವು ಪರಿಸರ ಸಂಬಂಧಿ ಪುಸ್ತಕ ಮತ್ತು ಲೇಖನಗಳನ್ನು ಬರೆದಿದ್ದಾರೆ. ಋತ ಪತ್ರಿಕೆಯ ಸಂಪಾದಕರು.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights