ಶುಲ್ಕ ಹೆಚ್ಚಳ ಖಂಡಿಸಿ ನೂರಾರು ವಿದ್ಯಾರ್ಥಿಗಳಿಂದ ಜೆಎನ್ಯುನಲ್ಲಿ ಪ್ರತಿಭಟನೆ…
ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಶುಲ್ಕ ಹೆಚ್ಚಳ ಖಂಡಿಸಿ, ನೂರಾರು ವಿದ್ಯಾರ್ಥಿಗಳು ವಿವಿ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೌದು… ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾವವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಜೆಎನ್ಯು ಕ್ಯಾಂಪಸ್ನ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಘಟಿಕೋತ್ಸವವನ್ನುದ್ದೇಶಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾಷಣ ಮಾಡುತ್ತಿದ್ದ ಐಐಸಿಟಿಇ ಆಡಿಟೋರಿಯಮ್ಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ದೆಹಲಿ ಪೊಲೀಸರು ವಾಟರ್ ಕ್ಯಾನಾನ್ಗಳನ್ನು ಬಳಸಿದರು.
ಶುಲ್ಕದಲ್ಲಿ ಹಿಂದಿನದ್ದಕ್ಕಿಂತ ಶೇ. 999ರಷ್ಟು ಹೆಚ್ಚಳವಾಗಿದೆ. ಜೆಎನ್ಯುನಲ್ಲಿರುವ ಶೇ. 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕಡಿಮೆ ಆದಾಯವಿರುವ ಕುಟುಂಬದಿಂದ ಬಂದವರಾಗಿದ್ದಾರೆ ಎಂದು ಜೆಎನ್ಯು ವಿದ್ಯಾರ್ಥಿ ಒಕ್ಕೂಟ ನೀಡಿದ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕ್ಯಾಂಪಸ್ ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಲಯದ ಶುಲ್ಕದ ಕೈಪಿಡಿಯ ಸಮಸ್ಯೆಗಳನ್ನು ಪರಿಹರಿಸಲು ಉಪಕುಲಪತಿಯವರನ್ನು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದರಿಂದ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.
ವಿಶ್ವವಿದ್ಯಾಲಯ ‘ವಿದ್ಯಾರ್ಥಿ ವಿರೋಧಿ ನೀತಿ’ಯನ್ನು ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಕೈಪಿಡಿಯನ್ನು ಹಿಂಪಡೆಯುವಂತೆ ವಿದ್ಯಾರ್ಥಿ ಸಂಘವು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದೆ. ಶುಲ್ಕ ಇಳಿಕೆ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದು, ಹಾಸ್ಟೆಲ್ ಕೈಪಿಡಿಯಲ್ಲಿ ಉಲ್ಲೇಖಿಸಿರುವ ‘ಡ್ರೆಸ್ ಕೋಡ್’ನ್ನು ಸಹ ವಿದ್ಯಾರ್ಥಿ ಸಂಘ ವಿರೋಧಿಸಿದೆ.
ವಿಶ್ವವಿದ್ಯಾಲಯದ ಹಾಸ್ಟೆಲ್ಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿತ್ತು. ಪ್ರತಿ ತಿಂಗಳು ಡಬಲ್ ಸೀಟರ್ಗೆ 10 ರೂ.ನಿಂದ 300 ರೂ.ಗೆ ಹಾಗೂ ಸಿಂಗಲ್ ಸೀಟರ್ಗೆ 20 ರೂ.ನಿಂದ 600 ರೂ.ಗೆ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಮೆಸ್ ಸೆಕ್ಯೂರಿಟಿ ಡಿಪಾಸಿಟ್ ಎಂದು ಪಡೆಯುತ್ತಿದ್ದ ಅಡ್ವಾನ್ಸ್ ಹಣವನ್ನು 5,500 ರೂ.ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಮುಂಗಡವಾಗಿ ಪಡೆದ ಈ ಶುಲ್ಕವನ್ನು ಮರುಪಾವತಿಸಲಾಗುತ್ತದೆ.