ಸಂಪುಟ ಕಗ್ಗಂಟು – ಸಿಎಂ ಸ್ಥಿತಿ ನೋಡಿದ್ರೆ ಅಯ್ಯೋ ಪಾಪಾ ಅನಿಸುತ್ತೆ – ಪ್ರಿಯಾಂಕ್ ಖರ್ಗೆ ವ್ಯಂಗ್ಯ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿ ಮುಂದುವರೆದಿದೆ. ಯಡಿಯೂರಪ್ಪ ನಾಲ್ಕು ದಿನಗಳಿಂದ ಕಾದರೂ ಬಿಜೆಪಿ ನಾಯಕರು ಭೇಟಿಯ ಅವಕಾಶ ನೀಡದೇ ಇರೋದನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಪೌರತ್ವ ವಿರೋಧಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಯುವಕ ಫೈರಿಂಗ್ ಘಟನೆಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟನ್ನು ನೋಡಿದ್ರೆ ಆಯ್ಯೋ ಎನ್ನಿಸುತ್ತಿದೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಅಪರೇಷನ್ ಕಮಲ ಹೇಗೆ ನಡೀತು ಅಂತ ಎಲ್ಲರಿಗೂ ಗೊತ್ತೇ ಇದೆ. ಶಾಸಕರನ್ನು ಖರೀದಿ ಮಾಡಿ, ಸರ್ಕಾರ ರಚನೆ ಮಾಡಲಾಗಿದೆ. ವಲಸಿಗರಿಗೆ ಸಚಿವ ಸ್ಥಾನ ಕೊಡ್ತಿರೋದ್ರಿಂದ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಸಚಿವ ಸಂಪುಟ ವಿಸ್ತರಣೆಯಾದ ಒಂದು ವಾರದಲ್ಲಿ ಅಸಮಾಧಾನ ಬಹಿರಂಗವಾಗುತ್ತೆ ಎಂದರು.
ಸಚಿವ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಭೇಟಿಗೆ ಸಿಎಂ ನಾಲ್ಕು ದಿನ ಕಾದ್ರು, ಹಿರಿಯ ನಾಯಕರ ಭೇಟಿಗಾಗಿ ಪರದಾಡುವಂತಾಗಿದೆ. ಯಡಿಯೂರಪ್ಪ ಸ್ಟ್ರಾಂಗ್ ಲೀಡರ್. ಆದ್ರೆ ಅವರಿಗೆ ಭೇಟಿಯ ಅವಕಾಶವನ್ನೇ ಹೈಕಮಾಂಡ್ ನೀಡ್ತಿಲ್ಲ. ಸಿಎಂ ಯಡಿಯೂರಪ್ಪ ಸ್ಥಿತಿ ನೋಡಿದ್ರೆ ಬೇಜಾರಾಗುತ್ತೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ರೆ ಬೇರೆ ನಡೀತಿಲ್ಲ. ಪಿಸಿ ಯಿಂದ ಹಿಡಿದು ಡಿಸಿ ವರೆಗೂ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು. ಜನ ನೆರೆ ಮತ್ತು ಬರದಿಂದ ಸಂಕಷ್ಟಕ್ಕೆ ಗುರಿಯಾದ್ರೂ ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಆಡಳಿತದಲ್ಲಿ ಕೇಸರೀಕರಣ ಮಾಡೋ ಹುನ್ನಾರ ನಡೀತಿದೆ. ಈಗಲಾದ್ರೂ ಆಡಳಿತ ಯಂತ್ರ ಸರಿದಾರಿಗೆ ಬರಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ದೆಹಲಿ ಫೈರಿಂಗ್ ಘಟನೆಗೆ ಮೋದಿ – ಷಾ ಕಾರಣ….
ಪೌರತ್ವ ವಿರೋಧಿ ಹೋರಾಟ ನಿರತ ವಿದ್ಯಾರ್ಥಿ ಮೇಲೆ ಯುವಕ ಫೈರಿಂಗ್ ಮಾಡಿರೋ ಪ್ರಕರಣಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇದೇ ವೇಳೆ ಆರೋಪಿಸಿದ್ದಾರೆ. ದೆಹಲಿಯ ಘಟನೆ ದುರದೃಷ್ಟಕರ. ಅದಕ್ಕೆ ಕಾರಣರಾದವರು ಅಮಿತ್ ಶಾ ಮತ್ತು ಮೋದಿ. ಯುವಕರನ್ನು ಬ್ರೈನ್ ವಾಶ್ ಮಾಡಿ, ಮತಾಂಧರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ, ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ, ಅನುರಾಗ್ ಠಾಕೂರ್ ಮೊದಲಾದ ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮವೇ ದೆಹಲಿಯ ಪ್ರಕರಣ. ಪಿಸ್ತೂಲ್ ಹಿಡಿದು ಹಾಡಹಗಲೇ ಪೊಲೀಸರ ಎದುರಲ್ಲಿಯೇ ಫೈರಿಂಗ್ ಮಾಡ್ತಾರೆ ಅಂದ್ರೆ ಅರ್ಥವೇನು ಎಂದು ಪ್ರಶ್ನಿಸಿದರು. ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯೇ ದೆಹಲಿ ಘಟನೆಗೆ ನೇರ ಹೊಣೆ. ಬಿಜೆಪಿ ನಾಯಕರ ಪ್ರಚೋದನಾಕಾರಿ ಹೇಳಿಕೆಗಳು ಈ ರೀತಿಯ ಘಟನೆಗಳಿಗೆ ಕುಮ್ಮಕ್ಕಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.