ಸುಗಂಧಿ ಬೇರು-2; ಮನೆ ಜಗತ್ತು: ಉಗ್ರ ರಾಷ್ಟ್ರೀಯತೆಯ ಅಪಾಯಗಳು

ಭಾರತೀಯ ಭಾಷೆಯೊಂದರಲ್ಲಿ ಆಧುನಿಕ ಕಾದಂಬರಿ ‘ದುರ್ಗೇಶನಂದಿನಿ’ (1865) ಬಂದದ್ದು ಬೆಂಗಾಳಿ ಭಾಷೆಯಲ್ಲಿ. ಇದನ್ನು ಬರೆದವರು ಬಂಕಿಮಚಂದ್ರ ಚಟರ್ಜಿ. ಈ ಕಾದಂಬರಿಯನ್ನು ಬಿ. ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಠಾಗೋರರು ಬಂಕಿಮಚಂದ್ರರ ನಂತರದ ಮುಖ್ಯ ಕಾದಂಬರಿಕಾರರು; ಠಾಗೋರರು ಒಟ್ಟು ಹದಿಮೂರು ಕಾದಂಬರಿಗಳನ್ನು ಬರೆದಿದ್ದಾರೆ. ವೈಚಾರಿಕ ಲೇಖನ ಮತ್ತು ಭಾಷಣಗಳನ್ನು ಹೊರತುಪಡಿಸಿ ಠಾಗೋರರ ರಾಜಕೀಯ ಚಿಂತನೆಗಳನ್ನು ತಿಳಿಯಬೇಕಾದರೆ ಅವರ ‘ಗೋರಾ’(1909), ‘ಘರೇ ಬೈರೇ’(1916) ಮತ್ತು ‘ಚಾರ್ ಅಧ್ಯಾಯ’(1934) ಕಾದಂಬರಿಗಳನ್ನು ಓದಬೇಕಾಗುತ್ತದೆ. ಇವುಗಳಲ್ಲಿ ‘ಗೋರಾ’ ಕೃತಿಯಂತು ಭಾರತೀಯ ಸಾಹಿತ್ಯದಲ್ಲಿಯೇ ಉತ್ಕೃಷ್ಟವಾದ ಕೃತಿ ಎಂಬ ಮನ್ನಣೆ ಪಡೆದಿದೆ.

ಠಾಗೋರರು ತಮ್ಮ ಐವತ್ತೈದನೇ ವಯಸ್ಸಿನಲ್ಲಿ ಬರೆದ ‘ಘರೇ ಬೈರೇ’(1916) ಕಾದಂಬರಿಯನ್ನು ಕನ್ನಡದಲ್ಲಿ ಎಚ್.ವಿ. ಸಾವಿತ್ರಮ್ಮನವರು ‘ಮನೆ ಜಗತ್ತು’ ಎಂದು ಅನುವಾದಿಸಿದ್ದಾರೆ. ಈ ಕೃತಿಯು ಮೈಸೂರಿನ ಕಾವ್ಯಾಲಯ ಪ್ರಕಾಶನದಿಂದ 1955ರಲ್ಲಿ ಪ್ರಕಟವಾಗಿದೆ. ಇದು 1905ರ ಬೆಂಗಾಲ ವಿಭಜನೆ ಮತ್ತು ಅದರಿಂದ ಪ್ರೇರಿತವಾದ ಸ್ವದೇಶಿ ಚಳವಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ರಚನೆಯಾದ ಕೃತಿ. ಇದರೊಳಗೆ ದೇಶಾಭಿಮಾನ, ರಾಷ್ಟ್ರೀಯತೆ, ಪಾಶ್ಚಾತ್ಯ ಶಿಕ್ಷಣ, ಹೆಣ್ಣಿನ ವಿಮೋಚನೆ, ರೈತರ ಸಮಸ್ಯೆ, ಗಂಡು ಹೆಣ್ಣಿನ ವಿವಾಹೇತರ ಸಂಬಂಧ-ಇವುಗಳೆಲ್ಲ ಸೇರಿಕೊಂಡಿರುವ ಕೃತಿಯಾಗಿದೆ; ಬದುಕಿನ ಹಲವು ಮುಖಗಳ ಸಂಕೀರ್ಣತೆಗಳನ್ನು ಒಳಗೊಂಡಿದೆ. ಇದರ ಕಥನವು ವಿಮಲೆ, ಅವಳ ಗಂಡ ನಿಖಿಲೇಶ ಚೌಧರಿ ಮತ್ತು ಸಂದೀಪ ಮುಖರ್ಜಿ ಇವರ ಮೂಲಕ ನಿರೂಪಿತವಾಗುತ್ತದೆ; ಈ ಮೂವರು ತಮ್ಮ ನಿಲುವುಗಳನ್ನು ತೋಡಿಕೊಳ್ಳುವ ಕಥನ ತಂತ್ರ ಇಲ್ಲಿದೆ.

ಸಂದೀಪ ವಸಾಹತುಶಾಹಿಯನ್ನು ವಿರೋಧಿಸುತ್ತಾನೆ; ವಿದೇಶಿ ವಸ್ತುಗಳನ್ನು ನಿರಾಕರಿಸಲು ಕರೆ ನೀಡುತ್ತಾನೆ. ಸ್ವದೇಶಿ ಚಳವಳಿಯ ಯುವ ನಾಯಕನಾಗಿ ತನ್ನನ್ನು ತಾನು ದೇಶಭಕ್ತನೆಂದು ತೋರಿಸಿಕೊಳ್ಳುತ್ತಾನೆ. ಅವನು ಭಾರತವು ವಸುಹತುಶಾಹಿ ಗುಲಾಮಗಿರಿಯಿಂದ ಬಿಡುಗಡೆಯಾಗಬೇಕೆಂದು ರಾಷ್ಟ್ರದ ನೆಪದಲ್ಲಿ ಉದ್ರೇಕಕಾರಿ ಭಾಷಣ ಬಿಗಿಯುತ್ತಾನೆ. ಆಧುನಿಕ ಮನೋಭಾವದ ಸಂದೀಪ “ಹುಟ್ಟಿನಿಂದ ಮಾತ್ರ ದೇಶ ನನ್ನದಾಗದು. ಸಾಮರ್ಥ್ಯದಿಂದ ಗೆದ್ದುಕೊಳ್ಳಲು ಶಕ್ತನಾದಾಗ ಮಾತ್ರ ಅದು ನನ್ನದು”(ಪು.26) ಎಂದು ಹೇಳುತ್ತಾನೆ. ಅವನ ಮಾತಿನಲ್ಲಿ ವಸಾಹತುಶಾಹಿ ಹೇಳಿಕೊಟ್ಟ ಪಾಠವಿದೆ. ಇದರ ಫಲವಾಗಿಯೇ ಅವನು ರಾಷ್ಟ್ರೀಯತೆಯನ್ನು ಸಮರ್ಥಿಸುತ್ತಾನೆ. ಯಾಕೆಂದರೆ ಅವನು ಪಾಶ್ಚಾತ್ಯ ದೃಷ್ಠಿಕೋನದ ಚರಿತ್ರೆಯ ವಿಚಾರಗಳಿಂದ ಪ್ರಭಾವಿತನಾಗಿದ್ದಾನೆ. ಸಂದೀಪ ಸನಾತನವಾದಿ ಭಗವದ್ಗೀತೆಯನ್ನು ಉಲ್ಲೇಖಿಸಿ ಕೊಲ್ಲುವುದರ ಪರವಾಗಿ ವಾದಿಸುತ್ತಾನೆ. ಸಂದೀಪನ ಶಿಷ್ಯನಾದ ಅಮೂಲ್ಯನು ದೇಶಕ್ಕಾಗಿ ಕೊಲ್ಲುವುದು ಅಪರಾಧವಲ್ಲ ಎನ್ನುತ್ತಾನೆ; ಹಣಕ್ಕಾಗಿ ಕೊಲೆ ಮಾಡಲು ಮುಂದಾಗುತ್ತಾನೆ. ಸಂದೀಪ ಮುಸಲ್ಮಾನರನ್ನು ದ್ವೇಷಿಸುವ ಮತಾಂಧನಾಗುತ್ತಾನೆ; ರಾಜಕೀಯ ನಾಯಕತ್ವಕ್ಕಾಗಿ ಸ್ವಾರ್ಥದ ಪರಾಷ್ಠೆಗೆ ತಲುಪುತ್ತಾನೆ. ಮಿತ್ರನಾದ ನಿಖಿಲೇಶನ ಮನೆಯಲ್ಲಿ ಆಶ್ರಯ ಪಡೆದವನಾಗಿ ಹುಸಿ ದೇಶಭಕ್ತಿಯ ಮಾತುಗಳಿಂದ ವಿಮಲೆಯನ್ನು ಮರಳು ಮಾಡುತ್ತಾನೆ; ದೇಶಭಕ್ತಿಯ ಹೆಸರಿನಲ್ಲಿ ದುರಾಸೆಗೆ ಬಿದ್ದು ಅವಳಿಂದ ಹಣವನ್ನು ಪಡೆಯುತ್ತಾನೆ.

ನಿಖಿಲೇಶ ಮತ್ತು ಸಂದೀಪ ಬಾಲ್ಯ ಸ್ನೇಹಿತರು. ಆದರೆ ಅವರಿಬ್ಬರ ಆಲೋಚನೆ ಮತ್ತು ಕ್ರಿಯೆಗಳು ತೀರ ಭಿನ್ನವಾದವು; ತದ್ವಿರುದ್ಧ ದಿಕ್ಕಿನಲ್ಲಿವೆ. ಅಖಿಲೇಶ ಸಹಿಷ್ಣುತೆಯ ಒಂದು ತುದಿಯಾದರೆ, ಸಂದೀಪ ಮತ್ತೊಂದು ಅತಿರೇಕದ ತುತ್ತತುದಿಯ ಪ್ರತಿನಿಧಿಯಾಗಿದ್ದಾನೆ. ನಿಖಿಲೇಶ, ಸಂದೀಪನ ಉಗ್ರವಾದಿ ರಾಷ್ಟ್ರೀಯತೆಯ ವಿರೋಧಿಯಾಗಿದ್ದಾನೆ. ನಿಖಿಲೇಶ “ದೇಶದ ಸ್ಥಿತಿಯ ವಾಸ್ತವ ಜ್ಞಾನದಿಂದ ಉತ್ಸಾಹಗೊಳ್ಳದೇ ಮನುಷ್ಯ ಮನುಷ್ಯನೆಂದು ಅವನನ್ನು ಪ್ರೀತಿಸದೆ-ದೇಶವನ್ನು ದೈವತ್ವಕ್ಕೊಯ್ದು ಕೂಗಿ ತೃಪ್ತಿ ಪಡುವವರು ದೇಶಕ್ಕಿಂತ ಉದ್ರೇಕವನ್ನೇ ಹೆಚ್ಚು ಪ್ರೀತಿಸುವರೆಂದು ನನ್ನ ಅಭಿಪ್ರಾಯ. ಸತ್ಯಕ್ಕಿಂತ ಉದ್ರೇಕಕ್ಕೆ ಹೆಚ್ಚಿನ ಸ್ಥಾನ ಕೊಡುವುದು ಅಲ್ಪ ಬುದ್ಧಿ; ಬುದ್ಧಿ ಸ್ವತಂತ್ರವಾದರೆ ದಿಕ್ಕೇ ತೋಚುವುದಿಲ್ಲ…” (ಪು.23) ಎನ್ನುತ್ತಾನೆ. ನಿಖಿಲೇಶನಿಗೆ ದೇಶವೆಂದರೆ ಎಲ್ಲ ಮನುಷ್ಯರನ್ನು ಪ್ರೀತಿಸುವುದೇ ಆಗಿದೆ. ನಿಖಿಲೇಶ ವಿದೇಶಿ ವಸ್ತುಗಳನ್ನು ಸುಡುವುದು ಮತ್ತು ವಿರೋಧಿಸುವುದನ್ನು ಒಪ್ಪುವುದಿಲ್ಲ. ಇದರಿಂದ ಸಾಮಾನ್ಯ ರೈತರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂಬುದರ ಅರಿವಿದೆ. ಈ ಕಾರಣಕ್ಕಾಗಿಯೇ ಅವನು ಸ್ವದೇಶಿ ಚಳವಳಿಯಿಂದ ಹೊರಗುಳಿಯುತ್ತಾನೆ. ಬಂಗಾಲ ವಿಭಜನೆಯಿಂದ ಭುಗಿಲೆದ್ದ ಹಿಂದೂ ಮುಸಲ್ಮಾನರ ಗಲಭೆಯ ಸಂದರ್ಭದಲ್ಲಿ ಸಹಿಷ್ಣುತೆಯ ಪರವಾಗಿ ನಿಲ್ಲುತ್ತಾನೆ. ನಿಖಿಲೇಶ “ಈ ದೇಶದಲ್ಲಿ ಎಮ್ಮೆಗಳೂ ಹಾಲನ್ನು ಕೊಡುತ್ತವೆ. ಆದರೆ ಅವುಗಳ ರಕ್ತ ಬಳಿದುಕೊಂಡು ಕಡಿದ ತಲೆಗಳನ್ನೆತ್ತಿಕೊಂಡು ದೇವಸನ್ನಿಧಿಯಲ್ಲಿ ನಾವು ವಿಕಟ ನೃತ್ಯ ನಡೆಸುವವರೆಗೂ, ಮತಕ್ಕೋಸ್ಕರ ಮುಸಲ್ಮಾನರೊಡನೆ ಜಗಳವಾಡಿದರೆ ಹಾಸ್ಯಾಸ್ಪದವಾದೀತು. ಎಮ್ಮೆಯಲ್ಲದೆ, ಹಸು ಮಾತ್ರವೇ ಪವಿತ್ರವಾದರೆ ಅದು ಮತಾಂಧತೆಯೇ ಹೊರತು ಮತವಲ್ಲ… ಹೀಗೆ ಮುಸಲ್ಮಾನರನ್ನು ನಮ್ಮ ಎದುರಾಳಿಯಾಗಿ ಮಾಡಲು ಏಕೆ ಸಾಧ್ಯವಾಯಿತು? ನಮ್ಮ ಅಸಹಿಷ್ಣುತೆಯೇ ಕಾರಣವಲ್ಲವೆ? ಅದರಿಂದಲೇ ನಮಗೆ ಈ ಶಿಕ್ಷೆ. ನಾವು ಮಾಡಿದ ಪಾಪದ ಫಲವನ್ನೇ ಅನುಭವಿಸುತ್ತಿದ್ದೇವೆ” (ಪು.137) ಎನ್ನುತ್ತಾನೆ. ಗೋವು ಪವಿತ್ರವೆನ್ನುವ ರಾಜಕೀಯವನ್ನು ನಿಖಿಲೇಶ ಒಪ್ಪುವುದಿಲ್ಲ. ಇಂತಹ ಅಸೂಕ್ಷ್ಮತೆಯು ವಸಾಹತುಶಾಹಿಯ ಫಲವೇ ಆಗಿದೆ. ಸದ್ಯದ ಕಾಲಘಟ್ಟದಲ್ಲಿಯು ಈ ಮನಸ್ಥಿತಿ ಬದಲಾಗಿಲ್ಲ.

ಹಲವು ವಿಮರ್ಶಕರು ನಿಖಿಲೇಶನ ಚಿಂತನಧಾರೆಯಲ್ಲಿ ಠಾಗೋರರನ್ನು ಕಂಡಿದ್ದಾರೆ. ಬಂಗಾಲ ವಿಭಜನೆಯ ಸಂಧರ್ಭದಲ್ಲಿಯೇ ಠಾಗೋರರು ಹಿಂದೂ ಮುಸಲ್ಮಾನರ ಐಕ್ಯತೆಯನ್ನು ಬಲಪಡಿಸಲು ‘ಅಮರ್ ಸೋನಾರ್ ಬಾಂಗ್ಲಾ’ ಎಂಬ ಗೀತೆಯನ್ನು ಬರೆದರು. ಹಿಂದೂ ಮುಸಲ್ಮಾನರು ಪರಸ್ಪರ ರಾಖಿಗಳನ್ನು ಕಟ್ಟಿ ಸಹೋದರತೆಯನ್ನು ಪ್ರದರ್ಶಿಸಲು ಠಾಗೋರರು ಕರೆ ಕೊಟ್ಟಿದ್ದರು. ಮುಂದೆ ಅವರು ‘ಜಲಿಯನ್ ವಾಲಾಭಾಗ್’ ಹತ್ಯಾಕಾಂಡವನ್ನು ವಿರೋಧಿಸಿ ಬ್ರಿಟಿಷರು ತಮಗೆ ನೀಡಿದ್ದ ‘ನೈಟ್ ಹುಡ್’ ಪವಿಯನ್ನು ವಾಪಸ್ಸು ನೀಡುತ್ತಾರೆ. ಠಾಗೋರರು ನಿಖಿಲೇಶನ ಮೂಲಕ ರಾಷ್ಟ್ರೀಯತೆಯ ಅಪಾಯಗಳನ್ನು ಓದುಗರ ಮುಂದಿಟ್ಟಿದ್ದಾರೆ. ಠಾಗೋರರು ಮೊದಲ ಮಹಾಯುದ್ಧದ ಕಾಲಘಟ್ಟದಲ್ಲಿಯೇ ಯುರೋಪಿನ ಹಲವು ದೇಶಗಳಿಗೆ ಪ್ರಯಾಣ ಬೆಳೆಸಿ ಉಗ್ರ ರಾಷ್ಟ್ರೀಯತೆಯನ್ನು ಪ್ರತಿರೋಧಿಸಿ ಭಾಷಣಗಳನ್ನು ಮಾಡಿದರು. ದೇಶ ಇಂದು ಎದುರಿಸುತ್ತಿರುವ ಜಾತಿಯತೆ, ಮತಾಂಧತೆ, ಕೋಮುವಾದಿ ಬಿಕ್ಕಟ್ಟುಗಳಿಗೆ ಠಾಗೋರರ ವಿಶ್ವಾತ್ಮಕ ಚಿಂತನೆಗಳು ಪರಿಹಾರ ನೀಡಬಲ್ಲವು. ಠಾಗೋರರನ್ನು ಈ ನಿಟ್ಟಿನಲ್ಲಿ ಹೆಚ್ಚು ಚರ್ಚಿಸುವ ಅಗತ್ಯವಿದೆ; ಈಗದು ಅನಿವಾರ್ಯವೂ ಹೌದು.

ವಿಮಲೆ ಸಂಪ್ರದಾಶೀಲ ಗೃಹಿಣಿ. ಅವಳು ಮನೆಯ ಪಂಜರದಲ್ಲಿ ಬಂಧಿಯಾದವಳು. ಆದರೆ ನಿಖಿಲೇಶ ತನ್ನ ಹೆಂಡತಿ ವಿಮಲೆಗೆ ಮನೆಯಲ್ಲಿಯೇ ಪಾಶ್ಚಾತ್ಯ ಶಿಕ್ಷಣವನ್ನು ನೀಡಲು ವಿದೇಶಿ ಮಹಿಳೆಯನ್ನು ನೇಮಿಸುತ್ತಾನೆ. ನಿಖಿಲೇಶನೇ ವಿಮಲೆಯನ್ನು ತನ್ನ ಮಿತ್ರನಾದ ಸಂದೀಪನನ್ನು ತನ್ನ ಮನೆಯಲ್ಲಿಯೇ ಭೇಟಿ ಮಾಡಿಸುತ್ತಾನೆ. ಸಂದೀಪನಂತು ಮೊದಲ ಭೇಟಿಯಲ್ಲಿ ಆಕೆಯ ಸೌಂದರ್ಯದಿಂದ ಆಕರ್ಷಿತನಾಗುತ್ತಾನೆ. ಸಂದೀಪನು ವಿಮಲೆಯಲ್ಲಿ ಭಾರತ ಮಾತೆಯನ್ನು ಕಾಣುತ್ತಾನೆ; ಅವಳನ್ನು ಕಾಳಿಗೆ ಹೋಲಿಸುತ್ತಾನೆ; ವಿಮಲೆಯ ಕಣ್ಣಲ್ಲಿ ಸಂದೀಪ ಮಹಾ ದೇಶಪ್ರೇಮಿಯಾಗಿಬಿಡುತ್ತಾನೆ. ತನ್ನ ಪತಿಗಿಂತ ಸಂದೀಪನೇ ಆದರ್ಶವ್ಯಕ್ತಿಯಾಗುತ್ತಾನೆ. ಅವಳು ಸಂದೀಪನಿಗಾಗಿ ತನ್ನನ್ನೇ ಅರ್ಪಿಸಿಕೊಂಡು ಬಿಡುತ್ತಾಳೆ. ಹೆಣ್ಣು ಮತ್ತು ದುಡ್ಡಿನ ಮೇಲಿನ ಅವನ ದುರಾಸೆಯನ್ನು ತಿಳಿಯುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ. ಗಂಡು ಪ್ರಧಾನ ಸಮಾಜದಲ್ಲಿ ವಿಮಲೆಯು ಸ್ವಂತ ಆಯ್ಕೆಗಳಿಲ್ಲದ ಹೆಣ್ಣಾಗಿದ್ದಾಳೆ. ಮದುವೆಯಾಗಿ ಬಂದ ವಿಮಲೆ ಗಂಡನ ‘ಮನೆ’ಯಿಂದ ಎಂದೂ ಹೊರ ‘ಜಗತ್ತಿ’ಗೆ ಪ್ರವೇಶವನ್ನೇ ಪಡೆದವಳಲ್ಲ. ಅವಳು ಸಂದೀಪನನ್ನು ಮೊದಲ ಬಾರಿ ನೋಡುವುದು ತನ್ನ ಮನೆಯ ಕಿಟಕಿಯಿಂದ; ಆಗ ಅವನು ಜನರ ಮುಂದೆ ನಿಂತು ಭಾಷಣ ಮಾಡುತ್ತಿರುತ್ತಾನೆ. ಆದ್ದರಿಂದ ವಿಮಲೆಯ ಪ್ರಪಂಚ ಜ್ಞಾನವು ಪುರುಷರಿಂದ ಎರವಲಾಗಿ ಬಂದದ್ದೇ ಆಗಿದೆ. ಈ ಕೃತಿಯು ಮನೆ-ಜಗತ್ತು, ಪೂರ್ವ-ಪಶ್ಚಿಮ, ದೇಶಾಭಿಮಾನ-ಅಂಧಾಭಿಮಾನಗಳ ನಡುವಿನ ಮುಖಾಮುಖಿಯಾಗಿದೆ.

ಈ ಕಾದಂಬರಿಯು ಮೊದಲು ‘ಸಬುಜ ಪತ್ರ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ನಿಯತವಾಗಿ ಪ್ರಕಟವಾಯಿತು. ಆಗಲೇ ಇದು ವಿವಾದದ ಅಲೆಯನ್ನು ಎಬ್ಬಿಸಿತು. ಇದು ದೇಶಭಕ್ತಿಹೀನ ಮತ್ತು ಅನೈತಿಕ ಕೃತಿಯೆಂಬ ಟೀಕೆಗಳು ಕೇಳಿಬಂದವು. ಹಂಗೇರಿಯನ್ ವಿಮರ್ಶಕ ಜಾರ್ಜ್  ಲುಕಾಕ್ಸ್ ಈ ಕಾದಂಬರಿಯ ಸಂದೀಪನ ಪಾತ್ರವು ಗಾಂಧೀಜಿಯನ್ನು ಕೇಂದ್ರವಾಗಿಟ್ಟುಕೊಂಡು ಬರೆದದ್ದು ಎಂದು 1922ರಲ್ಲಿ ಒಂದು ಲೇಖನವನ್ನೇ ಪ್ರಕಟಿಸಿದರು. ಆದರೆ ಇದು ತಪ್ಪಾದ ವಿಶ್ಲೇಷಣೆ ಎಂದು ಆಶೀಶ್ ನಂದಿಯವರು ತಮ್ಮ ‘ಇಲ್‍ಲೆಜಿಟಿಮಸಿ ಆಫ್ ನ್ಯಾಶನಾಲಿಸಂ’ ಕೃತಿಯಲ್ಲಿ ಚರ್ಚಿಸಿದ್ದಾರೆ. ಸ್ವದೇಶಿ ಚಳವಳಿಯ ಕಾಲಘಟ್ಟದಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು; ಅವರು ಭಾರತಕ್ಕೆ ಮರಳಿದ್ದು 1915ರಲ್ಲಿ. ಸಂದೀಪ ಮತ್ತು ನಿಖಿಲೇಶ ಎರಡು ಬಗೆಯ ರಾಷ್ಟ್ರೀಯತೆಗಳನ್ನು ಪ್ರತಿನಿಧಿಸುತ್ತಾರೆ. ಕಾದಂಬರಿಯ ಕೊನೆಯಲ್ಲಿ ನಿಖಿಲೇಶ ತನ್ನ ಸಾವಿನ ಬೆಲೆಯನ್ನು ತೆರಬೇಕಾಗುತ್ತದೆ. ಕೊನೆಯಲ್ಲಿ ಸಂದೀಪನು ವಿಮಲೆಯ ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಅವಳಿಂದ ಪಡೆದ ಹಣವನ್ನು ವಾಪಸ್ಸು ನೀಡುತ್ತಾನೆ. ವಿಮಲೆಯು ಯಾರು ಸರಿ ಎಂಬುದರ ಗೊಂದಲದಲ್ಲಿ ಸಿಕ್ಕಿಬೀಳುತ್ತಾಳೆ.

ಸತ್ಯಜಿತ್ ರೇಯವರು ತಮ್ಮ ಮೊದಲ ಸಿನಿಮಾ ‘ಘರೇ ಬೈರೇ’ ಆಗಬೇಕೆಂದು ಬಯಸಿದ್ದರು. ಅವರು 1940ರ ದಶಕದಲ್ಲಿಯೇ ಇದರ ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದರು. ಅದೇಕೋ ಏನೋ ಇದಕ್ಕೆ ಸಮಯ ಒದಗಿ ಬರಲಿಲ್ಲ. ಹಾಗಾಗಿ ‘ಪಥೇರ್ ಪಾಂಚಾಲಿ’ (1955)ಯೇ ರೇಯವರ ಮೊದಲ ಸಿನಿಮಾ ಆಯ್ತು. ಆದರೆ ಇದನ್ನು 1984ರಲ್ಲಿ ಸಿನಿಮಾ ಮಾಡಿದರು. ಈ ಸಿನಿಮಾ ಕಾನ್ ಸಿನಮೋತ್ಸವದ ಸ್ಪರ್ಧೆಯಲ್ಲಿತ್ತು. ಆಗ ಇದು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಡಿತು. ಆದರೆ ಈ ಸಿನಿಮಾದಲ್ಲಿ ರೇಯವ ದೃಶ್ಯದ ಜಾದು ಕಣ್ಮರೆಯಾಗಿತ್ತು. ಬಹಳಷ್ಟು ವಿಮರ್ಶಕರ ಪ್ರಕಾರ ಇದು ಸತ್ಯಜಿತ್ ರೇಯವರ ವೈಫಲ್ಯವೆಂದೇ ಹೇಳಿದರು.

ಕನ್ನಡ ಅನುವಾದ ಲೋಕದಲ್ಲಿ ಹೆಬ್ಬಲಳು ವೆಲ್ಪನೂರು ಸಾವಿತ್ರಮ್ಮನವರದ್ದು (1913-1995) ಅನನ್ಯ ಸಾಧನೆ. ಬೆಂಗಳೂರಿನವರಾದ ಸಾವಿತ್ರಮ್ಮ 1939ರಲ್ಲಿ ಬ್ರಿಟಿಷ್ ಲೇಖಕ ಸ್ಟ್ಯಾನ್ಲೇ ಲೇನ್-ಪೂಲ್‍ನ ‘ಮಿಡೀವಲ್ ಇಂಡಿಯಾ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಭಾಷಾಂತರಕ್ಕೆ ಪ್ರವೇಶಿಸಿದರು. ಸಾವಿತ್ರಮ್ಮನವರು (ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲನೇ ಅಧ್ಯಕ್ಷರಾಗಿದ್ದ ಮತ್ತು ಮೈಸೂರು ವಿಶ್ವವಿದ್ಯಾಲಯದ ಮೊದಲ ಉಪ ಕುಲಪತಿಯಾಗಿದ್ದ ಎಚ್.ವಿ. ನಂಜುಂಡಯ್ಯನವರ ಮೊಮ್ಮಳು) ಠಾಗೋರರ ‘ಮನೆ-ಜಗತ್ತು’ ಸೇರಿದಂತೆ ‘ಗೋರಾ’, ‘ನೌಕಾಘಾತ’, ‘ಚಿನ್ನದ ದೋಣಿ’ ಕೃತಿಗಳನ್ನು ಕನ್ನಡದ ಓದುಗರಿಗೆ ಅನುವಾದಿಸಿ ಕೊಟ್ಟಿದ್ದಾರೆ. ಆಂಟನ್ ಚೆಕೋವ್‍ನ ಕೆಲವು ಕತೆಗಳನ್ನು ಮತ್ತು ಲೂಯಿ ಫಿಷರ್ ಬರೆದ ಗಾಂಧಿಜಿಯ ಜೀವನ ಚರಿತ್ರೆಯನ್ನು ಕೂಡ ಅನುವಾದಿಸಿದ್ದಾರೆ. ಸಾವಿತ್ರಮ್ಮ ಕನ್ನಡದ ಸೃಜನಶೀಲ ಲೇಖಕಿಯಾಗಿ ಕತೆಗಳನ್ನು ಬರೆದಿದ್ದಾರೆ. ಅವರು ರಾಮಾಯಣದ ಪಾತ್ರಗಳನ್ನು ಸ್ತ್ರೀವಾದಿ ನೆಲೆಯಿಂದ ಬರೆದ ‘ಸೀತೆ ರಾಮ ರಾವಣ’ ಮತ್ತು ‘ವಿಮುಕ್ತೆ’-ಈ ಎರಡು ಕಾದಂಬರಿಗಳು ಮುಖ್ಯವಾಗಿವೆ. ಸಾವಿತ್ರಮ್ಮ ಅನುವಾದಕರಾಗಿ, ಕತೆಗಾರರಾಗಿ, ಕಾದಂಬರಿಕಾರರಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸಂವೇದನೆಯವನ್ನು ವಿಸ್ತರಿಸಿದ್ದಾರೆ. ಭಾಷಾಂತರ ಬರಿ ಭಾಷಿಕವಾಗಿ ನಡೆಯುವ ಕೊಡು ಕೊಳ್ಳುವಿಕೆಯಲ್ಲ; ಅದು ಎರಡು ಸಂಸ್ಕೃತಿಗಳ ನಡುವಿನ ಅನುಸಂಧಾನವೂ ಆಗಿರುತ್ತದೆ; ಅನುವಾದ ಕೂಡ ಸೃಜನಶೀಲ ಕ್ರಿಯೆಯೇ ಆಗಿದೆ; ಅನುವಾದ ಸಾಹಿತ್ಯವು ಬರಿ ಚಾರಿತ್ರಿಕವಾಗಿಯಷ್ಟೆ ಅಲ್ಲದೇ ಸಾಂಸ್ಕೃತಿಕವಾಗಿಯೂ ಮಹತ್ವದ್ದೇ ಆಗಿದೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected], [email protected]ಇಲ್ಲಿಗೆ ಬರೆಯಿರಿ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಸುಗಂಧಿ ಬೇರು-2; ಮನೆ ಜಗತ್ತು: ಉಗ್ರ ರಾಷ್ಟ್ರೀಯತೆಯ ಅಪಾಯಗಳು

  • September 14, 2020 at 12:40 pm
    Permalink

    Pretty! This was an incredibly wonderful post. Thank you for providing this information.

    Reply

Leave a Reply

Your email address will not be published.

Verified by MonsterInsights