ಹೆಚ್.ಡಿ. ಕುಮಾರಸ್ವಾಮಿಯಿಂದ ಇತ್ತೀಚೆಗೆ ಬಿಜೆಪಿ ಬಗ್ಗೆ ಮೃದು ಮಾತು : ಕೆಂಗಣ್ಣು ಮಾಡಿಕೊಂಡ ಅನರ್ಹ ಶಾಸಕರು
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹಲವು ಬಾರಿ ಬಿಜೆಪಿ ಬಗ್ಗೆ ಮೃದುವಾದ ಮಾತುಗಳನ್ನಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಕೆಲವೊಮ್ಮೆ ಅವರು ನರೇಂದ್ರ ಮೋದಿ ಅವರ ಕೆಲ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ಯಡಿಯೂರಪ್ಪ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರೂ ಕೂಡ ಬಿಜೆಪಿ ಬಗ್ಗೆ ತುಸು ಮೃದುವಾಗಿಯೇ ಇದ್ದಾರೆ. ಸಿದ್ದರಾಮಯ್ಯ ಅವರನ್ನೇ ಪ್ರಮುಖ ಶತ್ರುವನ್ನಾಗಿ ಮಾಡಿಕೊಂಡಿರುವುದೇ ಇವರು ಬಿಜೆಪಿ ಬಗ್ಗೆ ಮೃದುವಾಗಿದ್ದಂತೆ ತೋರಿರುವ ಸಾಧ್ಯತೆ ಇಲ್ಲದಿಲ್ಲ. ಆದರೂ ಜೆಡಿಎಸ್ನ ಹೊಸ ವರಸೆಯು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿರುವುದಂತೂ ಹೌದು. ಜೆಡಿಎಸ್ ಮುಖಂಡರ ಬದಲಾದ ಧೋರಣೆಯು ಬಿಜೆಪಿಯೊಳಗೆ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ. ಬಿಜೆಪಿಯಷ್ಟೇ ಅಲ್ಲ, ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡು ರಾಜೀನಾಮೆ ಕೊಟ್ಟಿದ್ದ ಅನರ್ಹ ಶಾಸಕರೂ ಕೂಡ ಕೆಂಗಣ್ಣು ಮಾಡಿಕೊಂಡು ವೀಕ್ಷಿಸುತ್ತಿದ್ಧಾರೆ.
ಜೆಡಿಎಸ್ ಹಾಕುತ್ತಿರುವ ಗಾಳಕ್ಕೆ ಬಿಜೆಪಿ ಬೀಳಬಾರದು ಎಂದು ಬಿಜೆಪಿಯ ಹಲವು ಶಾಸಕರು ಮತ್ತು ಕಾಂಗ್ರೆಸ್, ಜೆಡಿಎಸ್ನ ಅನರ್ಹ ಶಾಸಕರು ಯಡಿಯೂರಪ್ಪಗೆ ಸಲಹೆ ನೀಡುತ್ತಿದ್ದಾರೆ. ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆನ್ನಲಾಗಿದೆ.ಬಿಜೆಪಿ ಸಖ್ಯಕ್ಕೆ ಜೆಡಿಎಸ್ ಮುಂದಾಗಲು ಹಲವು ಕಾರಣಗಳಿವೆ. ಜೆಡಿಎಸ್ ಪಕ್ಷಕ್ಕೆ ಈಗ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಅವರ ಅನೇಕ ಶಾಸಕರು ಬಿಜೆಪಿ ಕಡೆ ವಾಲುತ್ತಿರುವುದನ್ನು ತಪ್ಪಿಸಬೇಕಿದೆ; ಐಎಂಎ, ಫೋನ್ ಕದ್ದಾಲಿಕೆ ಪ್ರಕರಣಗಳಿಂದ ಬಚಾವ್ ಆಗಬೇಕಿದೆ. ಅವರ ಆಪ್ತ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಸುಭದ್ರವಾಗಿಬೇಕಿದೆ. ಗೌಡರ ಕುಟುಂಬದ ವಿಚಾರಕ್ಕೆ ಐಟಿ, ಇಡಿ ಸುಳಿಯಬಾರದು. ಬಿಜೆಪಿಯೊಳಗಿನ ಯುವಕರು ಕುಮಾರಸ್ವಾಮಿ ಕಡೆ ವಾಲಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯಬೇಕು; ಕೇಂದ್ರ ಸರ್ಕಾರ, ಕೇಂದ್ರ ನಾಯಕರ ಜೊತೆ ಸಂಬಂಧ ವೃದ್ಧಿಯಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚೆಚ್ಚು ಸ್ಥಾನ ಗೆಲ್ಲಬೇಕು. ಅವಕಾಶ ಸಿಕ್ಕರೆ ಅಧಿಕಾರ ಹಂಚಿಕೆ ಮಾಡಿಕೊಂಡಿರಬೇಕು. ಇನ್ನೂ ಅವಕಾಶ ಸಿಕ್ಕರೆ ಭವಿಷ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಬಹುದು. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಜೆಡಿಎಸ್ ಮುಖಂಡರು ಬಿಜೆಪಿಯ ಸಖ್ಯ ಬಯಸಿದ್ದಾರೆ ಎಂದು ಬಿಜೆಪಿ ನಾಯಕರ ಗುಂಪೊಂದು ಯಡಿಯೂರಪ್ಪ ಅವರನ್ನು ಎಚ್ಚರಿಸಿದೆ.ಜೆಡಿಎಸ್ ನಾಯಕರು ಕೇಂದ್ರದ ಹಾಗೂ ರಾಜ್ಯದ ಕೆಲ ಬಿಜೆಪಿ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸರ್ಕಾರವನ್ನೇ ಬೀಳಿಸಿದರೂ ಅಚ್ಚರಿ ಇಲ್ಲ. ಅನರ್ಹ ಶಾಸಕರನ್ನು ಹಣಿಯದೇ ಅವರು ಸುಮ್ಮನೆ ಇರಲ್ಲ. ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ನಂಬಬೇಡಿ. ಯಾವುದೇ ಕಾರಣಕ್ಕೂ ಅವರ ಸಹವಾಸ ಮಾಡಬೇಡಿ. ನೀವು ಅವರ ಕೈಜೋಡಿಸಿದರೆ ನಮಗೆ ಕಾಂಗ್ರೆಸ್ ಪಕ್ಷವೇ ಗತಿಯಾಗಬಹುದು. ನಮಗೂ ಮತ್ತು ಅನರ್ಹ ಶಾಸಕರಿಗೂ ಭವಿಷ್ಯ ಇಲ್ಲದಂತೆ ಮಾಡುತ್ತಾರೆ ಎಂದು ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ಯಡಿಯೂರಪ್ಪ ಅವರಿಗೆ ತಿಳಿಸಿದ್ಧಾರೆ ಎಂದು ಮೂಲಗಳು ಹೇಳುತ್ತಿವೆ.
ರಮೇಶ್ ಜಾರಕಿಹೊಳಿ ಮತ್ತವರ ಬೆಂಬಲಿಗರೂ ಕೂಡ ಮುಖ್ಯಮಂತ್ರಿಗಳಿಗೆ ಈ ವಿಚಾರದಲ್ಲಿ ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅನರ್ಹ ಶಾಸಕರಿಂದಾಗಿ ಅಧಿಕಾರ ಏರಲು ಶಕ್ಯರಾಗಿರುವ ಯಡಿಯೂರಪ್ಪ ಅವರು ಈಗ ಸಂದಿಗ್ಧ ಸ್ಥಿತಿಯಲ್ಲಿದ್ಧಾರೆ. ಜೆಡಿಎಸ್ ಪಕ್ಷದ ಬೆಂಬಲ ಸಿಕ್ಕರೆ ಸರ್ಕಾರ ಸುಭದ್ರವಾಗಬಹುದು ಎಂಬ ಆಶಯ ಒಂದೆಡೆಯಾದರೆ, ಜೆಡಿಎಸ್ ಸಖ್ಯದಿಂದ ಅನರ್ಹ ಶಾಸಕರ ವಿಶ್ವಾಸ ಕಳೆದುಕೊಂಡು, ಬಿಜೆಪಿಯೊಳಗೆ ಹೊಸ ಬಂಡಾಯ ಭೀತಿಯನ್ನು ಎದುರಿಸುವ ಸಾಧ್ಯತೆ ಇರುವುದು ಇನ್ನೊಂದಡೆ ಇದೆ. ಈ ಇಕ್ಕಟ್ಟಿನಲ್ಲಿರುವ ಬಿಎಸ್ವೈಗೆ ಹೊಸ ತಲೆನೋವು ಶುರುವಾಗಿರುವುದಂತೂ ಸುಳ್ಳಲ್ಲ.