ಅಮೆರಿಕಾಗೆ ಕೊರೊನಾ ಚಾಟಿ ಏಟು : ಕಂಗಾಲಾದ ಸೂಪರ್ ಪವರ್ ರಾಷ್ಟ್ರ!
ವಿಶ್ವದ ದೊಡ್ಡಣ್ಣನಿಗೆ ಬೆಂಬಿಡದೆ ಕಾಡುತ್ತಿರುವ ಕೋವಿಡ್-19 ಮನುಷ್ಯರ ದೇಹವನ್ನ ಯಾವುದೇ ಅಡೆತಡೆಯಿಲ್ಲದೇ ಪ್ರವೇಶ ಮಾಡುತ್ತಿದೆ. ದೇಹ ಪ್ರವೇಶ ಮಾಡುವುದು ಮಾತ್ರವಲ್ಲದೇ ವೇಗವಾಗಿ ಜನರ ಪ್ರಾಣ ಕೂಡ ಬಲಿ ಪಡೆಯುತ್ತಿದೆ.
ಹೌದು… ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಸೋಂಕು ತಡೆಗಟ್ಟಲು ಸರ್ಕಾರ ಹರಸಾಹಸ ಪಡ್ತಾಯಿದ್ರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗೆ ಯುಎಸ್ನಲ್ಲಿ 2700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಂಕು ಕಾಣಿಸಿಕೊಂಡು ಚೀನಾದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ (818,744) ಗಡಿದಾಟಿದ್ದು, ಇದುವರೆಗೂ 44,845 ಜನರು ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಸೋಮವಾರ ರಾತ್ರಿ 8.30 ರಿಂದ ಮಂಗಳವಾರ ರಾತ್ರಿ 8.30 ಸಮಯದಲ್ಲಿ ಸುಮಾರು 44,000ಕ್ಕೂ ಅಧಿಕ ಸೋಂಕಿತರು ಯುಎಸ್ ದೇಶದಲ್ಲಿ ಪತ್ತೆಯಾಗಿ ಜನರ ನಿದ್ದೆಗೆಡಿಸಿದೆ.
ಇಡಿ ಜಗತ್ತು ಕೊರೊನಾ ವೈರಸ್ಗೆ ತತ್ತರಿಸಿದೆ. ಆದರೆ, ಈ ವೈರಸ್ ಕಾಟ ಅಮೆರಿಕದಲ್ಲಿ ಸ್ವಲ್ಪ ಹೆಚ್ಚಿದ್ದು, ಭಾರಿ ನಷ್ಟ ತಂದಿದೆ. ಅಮೆರಿಕದ ಅಂಕಿ ಅಂಶ ನೋಡಿ ಇದಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ವೈಫಲ್ಯ ಕಾರಣ ಎಂದು ಟೀಕಿಸುತ್ತಿದ್ದಾರೆ.
ಅಮೆರಿಕದಲ್ಲಿ ಯಾವ ನಗರ ರೆಡ್ ಝೋನ್ನಲ್ಲಿದೆ ಎಂದು ನೋಡುವುದಾರೆ, ನ್ಯೂಯಾರ್ಕ್ ನಗರದಲ್ಲಿ ಮಾತ್ರ ಬರೊಬ್ಬರಿ 2.5 ಲಕ್ಷ (256,555) ಸೋಂಕು ಪತ್ತೆಯಾಗಿದೆ. 19,693 ಜನರು ಇಲ್ಲಿ ಮೃತಪಟ್ಟಿದ್ದಾರೆ. ನಂತರ ನ್ಯೂಜೆರ್ಸಿ ನಗರದಲ್ಲಿ 92,387 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಲ್ಲಿ 4753 ಜನರು ಮೃತಪಟ್ಟಿದ್ದಾರೆ.

