ಆದಿವಾಸಿಗಳ ಹಕ್ಕುಗಳಿಗಾಗಿ ದನಿ ಎತ್ತಿದ ಮಹೇಶ್ ರಾವುತ್ ಬಂಧನ: ಇದು ನ್ಯಾಯವೇ?

ಮಹಾರಾಷ್ಟ್ರದಲ್ಲಿ ಗಡ್ಚಿರೋಲಿ ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಮುಖ ಯುವ ಕಾರ್ಯಕರ್ತ ಮಹೇಶ್ ರಾವುತ್. ಮಹಾರಾಷ್ಟ್ರದ ಸಣ್ಣ ಹಳ್ಳಿಯಾಗಿರುವ ಲಾಖಾಪುರದಲ್ಲಿ ಹುಟ್ಟಿದ ಮಹೇಶ್, ಗಡ್ಚಿರೋಲಿಯಲ್ಲಿ ಶಾಲಾ ಶಿಕ್ಷಣ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ನಾಗಪುರಕ್ಕೆ ತೆರಳಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ಗೆ ಸೇರಿದರು.

ಶಿಕ್ಷಣ ಮುಗಿಸಿದ ಬಳಿಕ ಅವರು ಗಡ್ಚಿರೋಲಿಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣಾಭಿವೃದ್ಧಿ ಫೆಲೋ (ಪಿಎಂಆರ್‌ಡಿಎಫ್) ಆಗಿ ಕೆಲಸ ಮಾಡಿದರು. ದೊಡ್ಡ ಕಾರ್ಪೊರೇಟ್‌ಗಳ ಕಾನೂನುಬಾಹಿರ ಭೂಕಬಳಿಕೆ ವಿರುದ್ಧ ಮೂಲನಿವಾಸಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ರಕ್ಷಣೆ ನೀಡುವ ಪಂಚಾಯತ್ (ಅಧಿಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ ಮತ್ತು ಅರಣ್ಯ ಹಕ್ಕುಗಳ ಕಾಯಿದೆಗಳ ಪರವಾಗಿ ಅವರು ದಣಿವರಿಯದೇ ಕೆಲಸ ಮಾಡಿದರು. ಮಹೇಶ್ ಅವರು ಸಂವಿಧಾನದ ಚೌಕಟ್ಟಿನಲ್ಲಿಯೇ ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ನಿರಂತರವಾಗಿ ದುಡಿದರು. ತಮ್ಮ ಫೆಲೋಶಿಪ್ ಮುಗಿದ ಬಳಿಕವೂ ಅವರು ರಾಜ್ಯದ ಆದಿವಾಸಿ ಸಮುದಾಯಗಳ ಜೊತೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಿರ್ಧರಿಸಿದರು.

ಮಹೇಶ್ ರಾವುತ್ ಸಮಾಜಕಲ್ಯಾಣಕ್ಕೆ ಒತ್ತಾಸೆ ನೀಡಲು ಸಾಮೂಹಿಕ ಚಳವಳಿಗಳನ್ನು ಅಯೋಜಿಸಿದರಲ್ಲದೆ ಅಂತಹ ಹಲವು ಚಳವಳಿಗಳಲ್ಲಿ ಭಾಗವಹಿಸಿದರು. ಅವರು ಆದಿವಾಸಿಗಳು ಮತ್ತು ಇತರ ಶೋಷಿತ ವರ್ಗಗಳ ಜನರನ್ನು ಬಲವಂತದಿಂದ ಒಕ್ಕಲೆಬ್ಬಿಸುವ ವಿದ್ಯಮಾನದ ವಿರುದ್ಧ ಹೋರಾಡುವ ವಿಸ್ಥಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್ (ವಿವಿಜೆವಿಎ) ಸಂಘಟನೆಯ ಸಹಸಂಚಾಲಕರಾಗಿದ್ದರು. ವಿವಿಜೆವಿಎಯ ಸದಸ್ಯರಾಗಿ ಅವರು ಆ ಪ್ರದೇಶದ ಆದಿವಾಸಿ ಸಮುದಾಯಗಳ ತೆಂಡು ಎಲೆ ಸಂಗ್ರಹಿಸುವ ಕಾರ್ಮಿಕರನ್ನು ಸಂಘಟಿಸಿ, ಅವರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆಯೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾದ ವ್ಯವಸ್ಥೆ ಮಾಡಿದರು.

ಆ ಪ್ರದೇಶದ ಆದಿವಾಸಿಗಳ ಪರವಾಗಿ ಪ್ರಚಾರ ಮಾಡುತ್ತಲೇ ಅವರು ದಿವಂಗತ ಬಿ.ಡಿ. ಶರ್ಮಾ ಅವರು ಸ್ಥಾಪಿಸಿದ್ದ ಭಾರತ್ ಜನ ಆಂದೋಲನ್ (ಬಿಜೆಎ) ಸಂಘಟನೆಗೂ ಸೇರಿದರು. ಬಿಜೆಎ ಜೊತೆ ತನ್ನ ಕೆಲಸದ ಮೂಲಕ ಅವರು ಸೂರಜ್‌ಗಢ್ ಮೈನಿಂಗ್ ಪ್ರೊಜೆಕ್ಟ್ ಸೇರಿದಂತೆ ಹಲವಾರು ಗಣಿಗಾರಿಕಾ ಯೋಜನೆಗಳಿಂದ ಬಾಧಿತವಾದ ಪ್ರದೇಶಗಳಲ್ಲಿ ’ಭಾಗವಹಿಸುವಿಕೆಯ ಮೂಲಕ ತಾವೇ ನಿರ್ಧಾರ ಕೈಗೊಳ್ಳುವುದರ ಪರವಾಗಿ ಜನರನ್ನು ಸಂಘಟಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಪೊಲೀಸ್ ಮತ್ತು ಪ್ರಭುತ್ವದ ಹಲವಾರು ಅಧಿಕಾರಿಗಳ ದೌರ್ಜನ್ಯ ಮತ್ತು ಅತಿರೇಕಗಳ ವಿರುದ್ಧ ಅವರ ಹೋರಾಟದ ಪರಿಣಾಮವಾಗಿ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾದವು. ಅವರ ಪಿಎಂಆರ್‌ಡಿಎಫ್ ಸಂಗಾತಿಗಳು ಬರೆದಿರುವ ಪತ್ರವೊಂದರ ಪ್ರಕಾರ, ಮಹೇಶ್ ಅವರ ವಿರುದ್ಧ ಸರಕಾರದ ದಮನವು 2013ರಲ್ಲಿಯೇ ಆರಂಭವಾಗಿದ್ದು, ಅವರ ನಿರಂತರ ರಾಜಕೀಯ ಚಟುವಟಿಕೆಗಳು ಅವರಿಗೆ ಕಿರುಕುಳ ನೀಡುವುದಕ್ಕೆ ಕಾರಣಗಳಲ್ಲಿ ಒಂದು ಎಂದು ಹೇಳಲಾಗಿದೆ.

ಬಿಹಾರದಲ್ಲಿ ಕೆಲಸ ಮಾಡುತ್ತಿರುವ ಅವರ ಗೆಳತಿ ಮತ್ತು ಸಹ ಕಾರ್ಯಕರ್ತೆ ಸೋಹಿನಿ ಶೊಯೆಬ್ ಅವರು ಮಹೇಶ್ ಕುರಿತು ಹೀಗೆ ಬರೆಯುತ್ತಾರೆ: “ಮಹೇಶ್ ಈ ಎಲ್ಲಾ ಹಳ್ಳಿಗಳಲ್ಲಿ ಅತ್ಯಂತ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು ಮತ್ತು ನಾನು ಭೇಟಿ ಮಾಡಿದ ಜನರೊಂದಿಗೆ ಒಂದಾಗಿದ್ದರು. ಜನರು ತಮ್ಮ ಸ್ವಂತ ಮನೆಮಗನೋ ಎಂಬಂತೆ ಅವರನ್ನು ನಡೆಸಿಕೊಳ್ಳುತ್ತಿದ್ದರು! ಮದುವೆಯಾಗುವಂತೆ ಅವರ ಮನವೊಲಿಸಬೇಕು ಎಂದೂ ಕೆಲವರು ನನ್ನನ್ನು ಒತ್ತಾಯಿಸಿದರು. ಜೀವನ ಸಂಗಾತಿ ಬಂದರೆ ಅವರ ಒಂಟಿತನ ಕಡಿಮೆಯಾಗಿ, ಜೀವನದ ಇತರ ವಿಷಯಗಳ ಬಗ್ಗೆ ಸಮತೋಲನ ಕಾಪಾಡಲು ನೆರವಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು!”

2018ರಲ್ಲಿ ಎಲ್ಗಾರ್ ಪರಿಷದ್‌ನ ಸಂಘಟನೆಯಲ್ಲಿ ಶಾಮೀಲಾತಿ ಮತ್ತು ತಥಾಕಥಿತ ಮಾವೋವಾದಿ ಸಂಪರ್ಕದ ಆರೋಪ ಹೊರಿಸಿ ಪುಣೆ ಪೊಲೀಸರು ಮಹೇಶ್ ಅವರನ್ನು ಬಂಧಿಸಿದರು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ)ಯ ಕೆಲವು ವಿಧಿಗಳ ಅಡಿಯಲ್ಲಿ ಅವರನ್ನು ಅವರ ನಾಗಪುರದ ಮನೆಯಿಂದ ಬಂಧಿಸಲಾಯಿತು. ವಾಸ್ತವವಾಗಿ ಅವರು ಎಲ್ಗಾರ್ ಪರಿಷದ್‌ನ ಆಯೋಜನೆಯಲ್ಲಿ ಭಾಗಿಯಾಗಿರಲೂ ಇಲ್ಲ, ಡಿಸೆಂಬರ್ 31ರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲೂ ಇಲ್ಲ. ಅವರ ಬಂಧನವು ಪ್ರಭುತ್ವ ಮತ್ತು ಕಾರ್ಪೊರೇಟ್‌ಗಳ ನಡುವಿನ ಕೂಟದ ಎದುರು ಹೋರಾಡುತ್ತಿರುವ ರಾಜ್ಯದ ಮಾನವ ಹಕ್ಕು ರಕ್ಷಕರ ವಿರುದ್ಧ ನಡೆಸಿದ ಸ್ಪಷ್ಟ ದಮನವಾಗಿದೆ. ಅಂಚಿಗೆ ಸರಿಸಲ್ಪಟ್ಟ ದಮನಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಅವರ ದೇಣಿಗೆಯೇ ಅವರಿಗೆ ಕಿರುಕುಳ ನೀಡುವುದಕ್ಕೆ ಮತ್ತು ನಂತರ ಅವರ ಬಂಧನಕ್ಕೆ ಕಾರಣವಾಗಿದೆ. ಅವರ ಕಾರಾಗೃಹವಾಸವು ಪ್ರಭುತ್ವವು ಕಾಲಡಿಯಲ್ಲಿ ಹೊಸಕಿಹಾಕುತ್ತಿರುವ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಅದೇ ಪ್ರಭುತ್ವ ನಡೆಸುತ್ತಿರುವ ದಬ್ಬಾಳಿಕೆಗೆ ಜೀವಂತ ಸಾಕ್ಷಿಯಾಗಿದೆ.

ಕೃಪೆ: ಮಹಾರಾಷ್ಟ್ರ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ:  ರಾಜಸ್ಥಾನ: ಆಪರೇಷನ್ ಕಮಲ ವಿಫಲ; ಕಾಂಗ್ರೆಸ್‌ ಸರ್ಕಾರ ಸ್ಥಿರ: ಬಿಜೆಪಿಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights