ಆಶಾ ಕಾರ್ಯಕರ್ತೆಯರಿಗೆ ಆಂಧ್ರದ ಸಿಎಂ ಜಗನ್ ನೀಡಿದ ಭರವಸೆ ಎಲ್ಲಿಗೆ ಬಂತು..?

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ಕೂಡಲೇ ಹಲವಾರು ಹೊಸ ಘೋಷಣೆಗಳನ್ನು ಮಾಡಿದ್ದರು. ದೇಶದ ಬೇರೆ ರಾಜ್ಯದ ಜನರೂ ಮೆಚ್ಚುಗೆ ವ್ಯಕ್ತಪಡಿಸಿದಂತಹ ಒಂದು ಘೋಷಣೆ ಆಶಾ ಕಾರ್ಯಕರ್ತೆಯರ ಸಂಬಳವನ್ನು 10000ಕ್ಕೆ ಹೆಚ್ಚಿಸುತ್ತೇನೆ ಎಂದು ಹೇಳಿದ್ದು. ಇದರಿಂದ ಆಶಾ ಕಾರ್ಯಕರ್ತೆಯರ ಸಂಘಟನೆಗಳೂ ಸೇರಿದಂತೆ ಬಹಳಷ್ಟು ಜನ ಜಗನ್ ರಿಗೆ ಮೆಚ್ಚುಗೆ ಸೂಚಿಸಿ ಈ ತೀಮಾರ್ನವನ್ನು ಸ್ವಾಗತಿಸಿದ್ದವು.

ಆದರೆ ಈಗ ಆಂಧ್ರ ಸರ್ಕಾರವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಆಗುತ್ತಿದ್ದರೂ ಸಂಬಳ ಹೆಚ್ಚು ಮಾಡುವುದು ಇರಲಿ ಎಂಟು ತಿಂಗಳಿಂದ ಕೊಡಬೇಕಾದ ಗೌರವಧನವನ್ನು ನೀಡದೆ ಬಾಕಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ ಹೊಸದಾಗಿ ಗ್ರೇಡಿಂಗ್ ಪದ್ದತಿಯನ್ನು ತರುವ ಮೂಲಕ ‘ಆಶಾ’ ಕಾರ್ಯಕರ್ತರ ಕೆಲಸವನ್ನೆ ಅಭದ್ರತೆಯಲ್ಲಿ ಇಟ್ಟಿದ್ದಾರೆ. ಇದರ ವಿರುದ್ದ ಸೋಮವಾರ ಬೇರೆ ಬೇರೆ ಜಿಲ್ಲೆಯ ಸಾವಿರಾರು ಜನ ಆಶಾ ಕಾರ್ಯಕರ್ತೆಯರು ವಿಜಯವಾಡದ ಲೆನಿನ್ ಸರ್ಕಲ್‍ನಲ್ಲಿ ‘ಚಲೋ ವಿಜಯವಾಡ’ ಹೆಸರಿನಲ್ಲಿ ಬಹಿರಂಗ ಸಭೆ ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹೊಸದಾಗಿ ಗ್ರೇಡಿಂಗ್ ಪದ್ದತಿಯನ್ನು ಶುರು ಮಾಡಿದ್ದು, ಸರ್ಕಾರ ಆಶಾ ಕಾರ್ಯಕರ್ತರಿಗೆ ಎ.ಬಿ.ಸಿ ಎಂಬ ಗ್ರೇಡ್ ಗಳನ್ನು ನೀಡುವ  ವರ್ಕಿಂಗ್ ಚಾಟ್ ಬಿಡುಗಡೆ ಮಾಡಿದೆ. ಅದರಲ್ಲಿ 75 ರಿಂದ 100 ಪಾಯಿಂಟ್ ಗಳು ಬಂದರೆ ‘ಎ’ ಗ್ರೇಡ್, 74 ರಿಂದ 50ರವರೆಗೂ ‘ಬಿ’ ಗ್ರೇಡ್, ಮತ್ತು  49ಕ್ಕಿಂತ ಕಡಿಮೆ ಇದ್ದರೆ ‘ಸಿ’ ಗ್ರೇಡ್ ಕೊಡುತ್ತೇವೆಂದು ಸರ್ಕಾರ ಹೇಳುತ್ತಿದೆ. ಇದರ ಪ್ರಕಾರ ‘ಎ’ ಗ್ರೇಡ್‍ಗೆ 10000/-, ‘ಬಿ’ ಗ್ರೇಡ್‍ಗೆ 5000/-, ‘ಸಿ’ ಗ್ರೇಡ್‍ಗೆ 3000/- ಸಂಬಳ ಕೊಡಲು ಸರ್ಕಾರ ತಯಾರಿ ನಡೆಸಿದೆ. ಈ ಗ್ರೇಡ್ ಗಳನ್ನು ಯಾರು, ಯಾವ ಆಧಾರದಲ್ಲಿ ನೀಡುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಇದು ಆಶಾ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಸರ್ಕಾರ ಎಂಟು ತಿಂಗಳಿಂದ ಆಶಾ ಕಾರ್ಯಕರ್ತೆಯರ ಗೌರವಧನ ನೀಡದೆ ಸತಾಯಿಸುತ್ತಿರುವುದು ಸಹಾ ಅವರನ್ನು ಕೆರಳಿಸಿದೆ. ಆಂಧ್ರದಲ್ಲಿರುವ 42ಸಾವಿರ ಆಶಾ ಕಾರ್ಯಕರ್ತರಿಗೂ 10ಸಾವಿರ ಸಂಬಳ ನೀಡುವುದಾಗಿ ಘೋಷಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಜಗನ್ ಈಗ ಗ್ರೇಡಿಂಗ್ ಮೂಲಕ ಸಂಬಳ ವಂಚಿಸುತ್ತಿರುವುದನ್ನು ಬಹಳಷ್ಟು ಪ್ರಜ್ಞಾವಂತರು ವಿರೋಧಿಸಿದ್ದಾರೆ.

ಎಲ್ಲಾ ಸರ್ಕಾರಿ ವೆಬ್‍ಗಳಲ್ಲಿ ಆಶಾ ಕಾರ್ಯಕರ್ತರ ಹೆಸರಗಳನ್ನು ಸೇರಿಸಿದ್ದರೂ ಸಹ  ಸರ್ಕಾರಿ ನೌಕರರೆಂದು ಪರಿಗಣಿಸದೆ, ಗುರುತಿನ ಚೀಟಿ ಮತ್ತಿತರ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದ್ಧಾರೆ, ನಮಗೆ ಉದ್ಯೋಗ ಭದ್ರತೆಯನ್ನು ನೀಡಬೇಕು ಮತ್ತು ಕೂಡಲೇ ಪ್ರತಿಯೊಬ್ಬರಿಗೂ 10000/- ಸಂಬಳವನ್ನು ನೀಡಬೇಕು ಎಂದು ಸಭೆಯಲ್ಲಿ ಆಂಧ್ರ ಆಶಾ ಯೂನಿಯನ್‍ನ ರಾಜ್ಯ ಮುಖಂಡರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹೋರಾಟಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಹೊರಟಿದ್ದ ಸಾವಿರಾರು ಕಾರ್ಯಕರ್ತರನ್ನು ಪೋಲಿಸರು ತಡೆದಿದ್ದು, ಕೆಲವು ಕಡೆ ಬಂದಿಸಿದ್ದಾರೆ. ಆ ಮೂಲಕ ಪ್ರತಿಭಟನೆ ನಡೆಯದಂತೆ ತಡೆಯಲು ಸರ್ಕಾರ ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಪ್ರತಿಭಟನೆಯ ನೇತೃತ್ವವವನ್ನು ಆಶಾ ವರ್ಕರ್ಸ್ ಯೂನಿಯನ್ ನ ಪ್ರಧಾನ ಕಾರ್ಯದಶಿ ಧನಲಕ್ಷ್ಮಿ, ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಯು.ಉಮಾ ಮಹೇಶ್ವರರಾವು, ರಾಜ್ಯ ಮುಖಂಡರಾದ ಸ್ವರೂಪರಾಣಿ, ಮುಜಾಫರ್ ಅಹಮದ್, ಆರ್.ವಿ. ನರಸಿಂಹರಾವು ಮುಂತಾದ ಮುಖಂಡರು ವಹಿಸಿದ್ದಾರೆ.

ಪ್ರತಿಭಟನೆಯ ನಂತರ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‍ಎಚ್‍ಎಮ್) ನಿರ್ದೇಶಕ ಕಾರ್ತಿಕೇಯ ಮಿಶ್ರಾ ‘ಸಿಎಮ್‍ಎಫ್‍ಎಸ್ ಸರ್ವರ್ ನಲ್ಲಿ ಸಾಂಕೇತಿಕ ಸಮಸ್ಯೆಗಳಿರುವುದರಿಂದ ಬಿಲ್ಲುಗಳು ನಿಂತಿವೆ. ಒಂದು ವಾರದಲ್ಲಿ ಅವುಗಳನ್ನು ಬಿಡುಗಡೆ ಮಾಡಲಾಗುವುದು. ಆಶಾ ಕಾರ್ಯಕರ್ತರ ಹಕ್ಕೊತ್ತಾಯಗಳನ್ನು ಮತ್ತೊಮ್ಮೆ ಚರ್ಚಿಸುತ್ತೇವೆ ಎಂದು ಹೇಳಿದ್ಧಾರೆ.

ಹೊಸ ಭರವಸೆಗಳು ಮತ್ತು ಹೊಸ ಘೋಷಣೆಗಳೊಂದಿಗೆ ಜನರ ಮತ ಪಡೆಯುವ ಸರ್ಕಾರಗಳು ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಮರೆಯುತ್ತವೆ ಎಂಬುದಕ್ಕೆ ಆಂಧ್ರದ ಈ ಉದಾಹರಣೆ ಮತ್ತೊಂದು ಸೇರ್ಪಡೆಯಾಗಿದೆ. ಆಂಧ್ರದಲ್ಲಿ ಹತ್ತು ಸಾವಿರ ಸಂಬಳ ಘೋಷಣೆ ಮಾಡಿದ್ದನ್ನು ನಾವು ಕೂಡ ಸ್ವಾಗತಿಸಿದ್ದೆವು. ಅವರು ಸುಮ್ಮನೆ ಘೋಷಣೆ ಮಾಡಿರಲಿಲ್ಲ. ಚುನಾವಣೆಯೂ ಮುಂಚೆ ಹಲವು ಯುನಿಯನ್‍ಗಳಿಲ್ಲಿರುವ ಆಶಾ ಹೆಣ್ಣುಮಕ್ಕಳು ಸತತ ಹೋರಾಟ ಮಾಡಿ ಒತ್ತಡ ತಂದಿದ್ದರು. ಆದರೆ ಈಗ ಅದನ್ನು ಜಾರಿಗೆ ತರದೆ ಇರುವುದು ವಿಷಾದನೀಯ. ಈ ಕುರಿತು ನಾವು ಕರ್ನಾಟಕದಲ್ಲಿಯೂ ಸಹ ಮುಂದಿನ ದಿನಗಳಲ್ಲಿ ದೊಡ್ಡ ಹೊರಾಟವನ್ನು ನಡೆಸುವ ಯೋಜನೆಯಲ್ಲಿ ಇದ್ದೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಕಾರ್ಯದರ್ಶಿಯಾದ ಡಿ.ನಾಗಲಕ್ಷಿಯವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights