ಈ ಮುಗ್ದ ಜೀವಿ ಕಾಡಾನೆ ಪ್ರಾಣಬಿಟ್ಟ ಕಥೆ ಕೇಳಿದ್ರೆ ಸಂಕಟವಾಗುತ್ತೆ….

ಆ ಮುಗ್ದ ಜೀವ ಆಹಾರ, ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ಬಸವಳಿದು ಬಿದಿತ್ತು… ಇದನ್ನು ಕಂಡ ಅರಣ್ಯ ಇಲಾಖೆ ಆನೆಯನ್ನು ಉಳಿಸಲು ಶತಪ್ರಯತ್ನ ನಡೆಸಿತ್ತು. ಅನ್ನ ನೀರು ಇಲ್ಲದೆ ನರಳಿದ್ದ ಆ ಜೀವ ಬದುಕಿ ಬಂದರೆ ಸಾಕು ಅಂತಾ ಜನರು ಕೂಡ ಮಮ್ಮಲ ಮರುಗಿ ಬೇಡಿದ್ರೂ. ಆದ್ರೆ ಆ ಹಾರೈಕೆಯೂ ಫಲಿಸದೆ ಕೊನೆಗೂ ಆನೆ ಪ್ರಾಣಬಿಟ್ಟಿದೆ.

ಮೇಲೇಳಲು ಸಾಧ್ಯವಾಗದ ಸ್ಥಿತಿಯಲ್ಲಿ ನರಳಾಡುತ್ತಾ ಮಲಗಿರೋ ಆನೆ.. ಆನೆಯನ್ನ ಉಳಿಸಬೇಕು ಅಂತಾ ಶತಪ್ರಯತ್ನ ಮಾಡ್ತಿರೋ ವೈದ್ಯರು… ವೈದ್ಯರ ಟ್ರೀಟ್ ಮೆಂಟ್ ಗೆ ಸ್ಪಂದಿಸದೆ ಹಾಗೆ ಮಲಗಿರೋ ಕಾಡಾನೆ.. ತನ್ನ ಸೊಂಡಿಲು, ಕಾಲನ್ನು ಅಲುಗಾಡಿಸಿ ನಾನಿನ್ನು ಬದುಕಿದ್ದೀನಿ ಹೇಗಾದ್ರೂ ಮಾಡಿ ಕಾಪಾಡಿ ಅಂತಾ ಸನ್ನೆಯ ಮೂಲಕ ತೋರಿಸ್ತಿರೊ ಕಾಡಾನೆ… ಎಸ್.. ಇದು ಸೋಮವಾರಪೇಟೆ ತಾಲ್ಲೂಕಿನ ತ್ಯಾಗತ್ತೂರಿನ ಕಾಫಿ ತೋಟವೊಂದರಲ್ಲಿನ ಎರಡು ದಿನಗಳ ಕಾಲ ಜೀವನ್ಮರಣ ನಡುವೆ ಹೋರಾಡಿದ ಮೂಕ ಕಾಡಾನೆಯ ಹೃದಯ ಹಿಂಡುವ ಕಥೆ. ಹೌದು ಇದು ಅಹಾರ, ನೀರು ಸಿಗದೆ ಕಾಡಾನೆಯೊಂದು ನಿತ್ರಾಣಗೊಂಡು ಸುಸ್ತಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅದನ್ನು ಹೇಗಾದ್ರೂ ಮಾಡಿ ಉಳಿಸ್ಬೇಕು ಅಂತಾ ಎರಡು ದಿನಗಳಿಂದ ಶತಪ್ರಯತ್ನ ಮಾಡಿತ್ತು. ಹಗಲು ರಾತ್ರಿ ಸ್ಥಳದಲ್ಲಿಯೇ ಮೊಕ್ಕಾಂಹೂಡಿ ಗ್ಲೂಕೋಸ್ ಜೊತೆಗೆ ಹಲವು ಚಿಕಿತ್ಸೆಗಳನ್ನು ನೀಡಿ ಶ್ರಮವಹಿಸಿತ್ತು.

ಕಾಫಿತೋಟಗಳಿಗೆ ಯಾವಾಗಲೂ ನುಗ್ಗಿ ದಾಂಧಲೆ ಮಾಡುತ್ತಿದ್ದ, ಎಷ್ಟೋ ತೋಟ ಕಾರ್ಮಿಕರ ಜೀವವನ್ನೂ ಬಲಿ ಪಡೆಯುತ್ತಿದ್ದ ಆನೆಗಳ ಕಾಟಕ್ಕೆ ಕೊಡಗಿನ ಜನರು ಬೇಸತ್ತಿದ್ದಾರೆ. ಹೀಗಾಗಿ ಆನೆಗಳು ಇಲ್ಲಿಂದ ಹೋದ್ರೆ ಸಾಕಪ್ಪ ಅಂತಾ ಸಿಟ್ಟು ತೋರಿಸ್ತಿದ್ದ ಜನರು ಎರಡು ದಿನಗಳಿಂದ ದೈತ್ಯಾಕಾರದ ಈ ಆನೆ ಆಹಾರ ನೀರು ಇಲ್ಲದೆ, ಹೀಗೆ ಬಿದ್ದು ನರಳಾಡುತ್ತಿರುವುದನ್ನು ಕಂಡು ಆನೆ ಬದುಕಿಬಂದ್ರೆ ಸಾಕು ಅಂತಾ ಅದೇ ಜನರು ಬೇಡಿದ್ರು. ಆದ್ರೆ ಜನರ ಆ ಹಾರೈಕೆ ಅರಣ್ಯ ಇಲಾಖೆಯ ಚಿಕಿತ್ಸೆ ಯಾವುದೂ ಫಲಿಸದೆ ಆನೆ ಕೊನೆಗೂ ಕೊಲಿನೆಯುಸಿರೆಳೆದಿದೆ. 40 ವರ್ಷದ ಹೆಣ್ಣಾನೆ, ನೀರಿನ ಕೊರತೆಯಿಂದ ನಿಶಕ್ತಿಯಿಂದ ಬಿದ್ದಿದ್ದ ಆನೆಯನ್ನು ಉಳಿಸಿಕೊಳ್ಳಲು ನಡೆಸಿದ ಶತಪ್ರಯತ್ನ ವ್ಯರ್ಥವಾಗಿ ಹೋಗಿದೆ.

ಒಟ್ನಲ್ಲಿ, ನಿತ್ರಾಣಗೊಂಡು ನರಳುತ್ತಿದ್ದ ಆನೆಯನ್ನು ಚಿಕಿತ್ಸೆ ನೀಡಿ ಬದುಕಿಸುವ ಅರಣ್ಯ ಇಲಾಖೆಯ ಶತ ಪ್ರಯತ್ನ ಫಲಿಸದೆ ಹೋಗಿದೆ. ಹೇಗಾದ್ರೂ ಪರವಾಗಿಲ್ಲ ಈ ಕಾಡಾನೆ ಬದುಕಿ ಬಂದ್ರೆ ಸಾಕಪ್ಪ ಅಂತಾ ಬೇಡುತ್ತಿದ್ದ ಜನರ ಹಾರೈಕೆಯೂ ವ್ಯರ್ಥವಾಗಿದೆ. ಏನೇ ಇರಲಿ ನದಿಗಳು ಹುಟ್ಟಿ ಹರಿಯುವ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರೆತೆಯಿಂದ ಆನೆ ಮೃತಪಟ್ಟಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights